ಹೊಸದಿಲ್ಲಿ: ಭಾರತೀಯ ವನಿತಾ ಕ್ರಿಕೆಟ್ ಈಗ 6 ತಂಡಗಳ ಐಪಿಎಲ್ ಆಯೋಜಿಸಲು ಸಾಧ್ಯವಾಗುವಷ್ಟು ಸಾಮರ್ಥ್ಯ ಹೊಂದಿದೆ ಎಂಬುದಾಗಿ ತಂಡದ ಸ್ಟಾರ್ ಓಪನರ್ ಸ್ಮತಿ ಮಂಧನಾ ಹೇಳಿದ್ದಾರೆ.
ಆರ್. ಅಶ್ವಿನ್ ಜತೆಗಿನ ಯೂಟ್ಯೂಬ್ ಸಂದರ್ಶನದಲ್ಲಿ ಮಾತನಾಡಿದ ಮಂಧನಾ, “ಐಪಿಎಲ್ ಟಿ20 ಲೀಗ್ ಬಂದ ಬಳಿಕ ಪುರುಷರ ಕ್ರಿಕೆಟ್‌ನಲ್ಲಿ ದೇಶಿ ಆಟಗಾರರ ಗುಣಮಟ್ಟ ಸುಧಾರಿಸಿದೆ. ಆದ್ದರಿಂದ ಕನಿಷ್ಠ ಆರು ವನಿತಾ ತಂಡಗಳ ನಡುವೆ ಟೂರ್ನಿಯನ್ನು ನಡೆಸಬೇಕು. ಇದರಿಂದ ಭಾರತದ ಮಹಿಳಾ ಕ್ರಿಕೆಟ್‌ನಲ್ಲೂ ಕೂಡ ದೊಡ್ಡ ಮಟ್ಟದ ಅಭಿವೃದ್ಧಿ ಕಾಣಲು ಸಾಧ್ಯ’ ಎಂದರು.
“ಆರಂಭದಲ್ಲಿ ಪುರುಷರ ಐಪಿಎಲ್‌ನಲ್ಲೂ ಕಡಿಮೆ ತಂಡಗಳಿದ್ದವು. ವರ್ಷ ಕಳೆದಂತೆ ತಂಡಗಳು ಹೆಚ್ಚಾದವು. ಕೂಟದ ಗುಣಮಟ್ಟವೂ ಹೆಚ್ಚತೊಡಗಿತು. ಇದು ವನಿತಾ ಕ್ರಿಕೆಟಿಗೂ ಅನ್ವಯಿಸಬೇಕು’ ಎಂದು ಮಂಧನಾ ಹೇಳಿದರು.
ಆಸ್ಟ್ರೇಲಿಯದಲ್ಲಿ ಯಶಸ್ಸು :
“ಆಸ್ಟ್ರೇಲಿಯ ವನಿತಾ ತಂಡದ ಮೀಸಲು ಸಾಮರ್ಥ್ಯ ಹೆಚ್ಚಲು ಬಿಗ್ ಬಾಶ್ ಲೀಗ್ ಕಾರಣವಾಗಿದೆ. ಅದೇ ರೀತಿ ಮಹಿಳಾ ಐಪಿಎಲ್ ಮೂಲಕ ಭಾರತದಲ್ಲೂ ಇದನ್ನು ಸಾಧಿಸಿ ತೋರಿಸಬಹುದು. ನಾನು ನಾಲ್ಕು ವರ್ಷಗಳ ಹಿಂದೆ ಬಿಗ್ ಬಾಶ್ ಆಡಿದ್ದೆ. ಈಗ ಅದರ ಗುಣಮಟ್ಟ ಹೆಚ್ಚಿದೆ. ಆಸ್ಟ್ರೇಲಿಯದ 40-50 ವನಿತಾ ಕ್ರಿಕೆಟಿಗರು ಯಾವುದೇ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಲು ಸಿದ್ಧರಾಗಿರುವುದನ್ನು ನಾವು ನೋಡಬಹುದು. ಭಾರತೀಯ ಮಹಿಳಾ ಕ್ರಿಕೆಟ್‌ನಲ್ಲೂ ಇಂತಹ ಬದಲಾವಣೆ ಅಗತ್ಯ. ಈ ನಿಟ್ಟಿನಲ್ಲಿ ಐಪಿಎಲ್ ದೊಡ್ಡ ಪಾತ್ರ ವಹಿಸಲಿದೆ ಎಂದು ನಾನು ಭಾವಿಸುತ್ತೇನೆ’ ಎಂದು ಮಂಧನಾ ಹೇಳಿದರು.
ಪ್ರಸ್ತುತ ಬಿಸಿಸಿಐ ಮಹಿಳಾ ಟಿ20 ಚಾಲೆಂಜ್ ಲೀಗ್ ಆಯೋಜಿಸುತ್ತಿದೆ. ಇದರಲ್ಲಿ ಟ್ರೈಲ್‌ಬ್ಲೇಜರ್ಸ್, ಸೂಪರ್ ನೋವಾಸ್ ಮತ್ತು ವೆಲಾಸಿಟಿ ಹೆಸರಿನ ಮೂರು ತಂಡಗಳಷ್ಟೇ ಪಾಲ್ಗೊಳ್ಳುತ್ತಿವೆ.