ಮುಂಬಯಿ: “ಮಹಾರಾಷ್ಟ್ರದ ಬಳಿಕ ನೀವು ಸದ್ಯದಲ್ಲೇ ಗೋವಾದಲ್ಲೂ ಪವಾಡವೊಂದನ್ನು ನೋಡಲಿದ್ದೀರಿ.’ ಹೀಗೆಂದು ಹೇಳುವ ಮೂಲಕ ಶಿವಸೇನೆ ಸಂಸದ ಸಂಜಯ್ ರಾವತ್ ಬಿಜೆಪಿ ಜತೆಗೆ ಮತ್ತೂಂದು ಸುತ್ತಿನ ಕಾಳಗದ ಸುಳಿವು ನೀಡಿ ದ್ದಾರೆ. ಮಹಾರಾಷ್ಟ್ರದ ನಾಟಕೀಯ ಬೆಳ ವಣಿಗೆಗಳಿಗೆ ತೆರೆಬಿದ್ದ ಬೆನ್ನಲ್ಲೇ ಶುಕ್ರವಾರ ಮಾತನಾಡಿರುವ ಸಂಜಯ್ ರಾವತ್, “ಮಹಾರಾಷ್ಟ್ರದ ಬಳಿಕ, ನಾವು ಗೋವಾದತ್ತ ಕಣ್ಣು ನೆಟ್ಟಿದ್ದೇವೆ. ಗೋವಾದಲ್ಲೂ ಹೊಸ ರಾಜಕೀಯ ರಂಗ ಉದಯವಾಗಲಿದೆ. ಸದ್ಯದಲ್ಲೇ ನಿಮಗೊಂದು ಚಮತ್ಕಾರ ಕಂಡುಬರಲಿದೆ’ ಎಂದಿದ್ದಾರೆ.
ಅಷ್ಟೇ ಅಲ್ಲ, “ಇಂಥ ಬೆಳವಣಿಗೆಗಳು ದೇಶಾದ್ಯಂತ ನಡೆಯಲಿವೆ. ಗೋವಾ ಬಳಿಕ ಬೇರೆ ರಾಜ್ಯಗಳತ್ತ ತೆರಳುತ್ತೇವೆ. ನಾವು ಈ ದೇಶದಲ್ಲಿ ಬಿಜೆಪಿಯೇತರ ರಾಜಕೀಯ ರಂಗವನ್ನು ಕಟ್ಟುವ ಬಯಕೆ ಹೊಂದಿದ್ದೇವೆ’ ಎಂದೂ ರಾವತ್ ಹೇಳಿದ್ದಾರೆ.
ಸರ್‌ದೇಸಾಯಿ ಭೇಟಿ: ಗೋವಾ ಫಾರ್ವರ್ಡ್ ಪಾರ್ಟಿ(ಜಿಎಫ್ಪಿ)ಯ ನಾಯಕ ವಿಜಯ್ ಸರ್‌ದೇಸಾಯಿ ಅವರು ಶುಕ್ರವಾರ ರಾವತ್‌ರನ್ನು ಭೇಟಿಯಾಗಿ ಚರ್ಚಿಸಿದ ಬಳಿಕ ಅವರಿಂದ ಈ ಹೇಳಿಕೆ ಹೊರಬಿದ್ದಿದೆ. ಜತೆಗೆ, ಮಹಾರಾಷ್ಟ್ರವಾದಿ ಗೋಮಂತಕ್ ಪಾರ್ಟಿ(ಎಂಜಿಪಿ) ನಾಯಕ ಸುದೀನ್ ಧವಳೀಕರ್ ಜತೆಗೂ ರಾವತ್ ದೂರವಾಣಿ ಮೂಲಕ ಮಾತುಕತೆ ನಡೆಸಿ ದ್ದಾರೆ. ಇದೇ ವೇಳೆ ಮಾತನಾಡಿದ ಸರ್‌ದೇಸಾಯಿ, “ಮಹಾರಾಷ್ಟ್ರದಲ್ಲಿ ಆಗಿದ್ದೇ ಗೋವಾದಲ್ಲೂ ಆಗಬಹುದು. ವಿಪಕ್ಷಗಳು ಒಂದಾಗಬೇಕು. ಮಹಾ ವಿಕಾಸ್ ಅಘಾಡಿ ಗೋವಾಗೂ ವಿಸ್ತರಣೆಯಾಗಬೇಕು’ ಎಂದಿ ದ್ದಾರೆ. 2017ರ ಗೋವಾ ಚುನಾವಣೆಯಲ್ಲಿ 17 ಸ್ಥಾನ ಗೆಲ್ಲುವ ಮೂಲಕ ಕಾಂಗ್ರೆಸ್ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ 13 ಸೀಟು ಪಡೆದಿದ್ದ ಬಿಜೆಪಿ, ಮಿತ್ರ ಪಕ್ಷಗಳನ್ನು ಸೇರಿಸಿ ಸರಕಾರ ರಚಿಸಿತ್ತು. ಆಗ ಜಿಎಫ್ಪಿ ಕೂಡ ಬೆಂಬಲ ನೀಡಿತ್ತು. ಸರ್‌ದೇಸಾಯಿ ಅವರು ಪ್ರಮೋದ್ ಸಾವಂತ್ ಸರಕಾರದಲ್ಲಿ ಡಿಸಿಎಂ ಹುದ್ದೆ ಪಡೆದಿದ್ದರು. ಆದರೆ, ಯಾವಾಗ ಕಾಂಗ್ರೆಸ್‌ನ 10 ಶಾಸಕರನ್ನು ಬಿಜೆಪಿ ತನ್ನತ್ತ ಸೆಳೆಯಿತೋ, ಆಗ ಮಿತ್ರಪಕ್ಷ ಜಿಎಫ್ಸಿಗೆ ಕೈಕೊಟ್ಟು, ಸರ್‌ದೇಸಾಯಿ ಮತ್ತು ಆ ಪಕ್ಷದ ಇತರೆ ಶಾಸಕರನ್ನು ಸರಕಾರದಿಂದ ಹೊರಗಿಟ್ಟಿತು. ಸದ್ಯ 40 ಸದಸ್ಯಬಲದ ವಿಧಾನಸಭೆಯಲ್ಲಿ ಬಿಜೆಪಿ 27 ಶಾಸಕರನ್ನು ಹೊಂದಿದೆ. ಇಲ್ಲಿ ಶಿವಸೇನೆಯ ಪ್ರಭಾವವೇ ಇಲ್ಲ. ಹೀಗಾಗಿ, ಸರಕಾರದ ಅಸ್ತಿತ್ವಕ್ಕೆ ಧಕ್ಕೆ ಇಲ್ಲ.
ಅಧಿಕಾರ ವಹಿಸಿಕೊಂಡ ಉದ್ಧವ್: ಗುರುವಾರ ಸಂಜೆ ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸಿದ್ದ ಉದ್ಧವ್ ಠಾಕ್ರೆ, ಶುಕ್ರವಾರ ಅಧಿಕಾರ ವಹಿಸಿ ಕೊಂಡಿದ್ದಾರೆ. ಜತೆಗೆ, ಆರೇ ಕಾಲನಿಯಲ್ಲಿ ಮೆಟ್ರೋ ಕಾರ್ ಶೆಡ್ ನಿರ್ಮಾಣಕ್ಕೆ ತಡೆ ವಿಧಿಸಿ, ಮುಂದಿನ ಸೂಚನೆವರೆಗೂ ಅಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳುವಂತಿಲ್ಲ ಎಂದಿ ದ್ದಾರೆ. ಕಾರ್ ಶೆಡ್‌ಗಾಗಿ 2 ಸಾವಿರ ಮರ ಕಡಿದ ಘಟನೆ 2 ತಿಂಗಳ ಹಿಂದೆ ಭಾರೀ ವಿವಾದಕ್ಕೆ ಕಾರಣವಾಗಿತ್ತು.