Advertisement

ನಾವು ಬೇರೆ,ಅವರು ಬೇರೆಯವರಲ್ಲ: ಈಶ್ವರ ಖಂಡ್ರೆ

06:10 AM Sep 11, 2017 | |

ಬೆಂಗಳೂರು: ತಮ್ಮೊಳಗಿನವರನ್ನೇ ನಮ್ಮವರು ಎಂದು ಅಪ್ಪಿಕೊಳ್ಳುತ್ತಿಲ್ಲ. ಇನ್ನು ಹೊರಗಿನವರನ್ನು ಒಪ್ಪಿಕೊಳ್ಳುತ್ತಾರೆಯೇ? ಇಂತಹವರು ಬಸವಣ್ಣನವರು ಸ್ಥಾಪಿಸಿದ ಸಮಾಜದ ವಾರಸುದಾರರು ಆಗಲು ಸಾಧ್ಯವೇ?
– ವೀರಶೈವರಿಂದ ಹೊರತಾದ ಲಿಂಗಾಯತ ಪ್ರತ್ಯೇಕ ಧರ್ಮ ಸ್ಥಾಪನೆಗೆ ಹೋರಾಟ ಮಾಡುತ್ತಿರುವವರ ನಡೆಯನ್ನು ಪೌರಾಡಳಿತ ಸಚಿವ ಈಶ್ವರ ಖಂಡ್ರೆ ಪ್ರಶ್ನಿಸಿದ ರೀತಿ ಇದು. 

Advertisement

ನಗರದ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಭಾನುವಾರ ಅಖೀಲ ಭಾರತ ವೀರಶೈವ ಮಹಾಸಭಾ ಹಮ್ಮಿಕೊಂಡಿದ್ದ “ವೀರಶೈವ-ಲಿಂಗಾಯತ ನಾವೆಲ್ಲಾ ಒಂದೇ ಎನ್ನುವ  ಯುವ ಬಾಂಧವ್ಯ’ದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
“ಇವನಾರವ ಇವನಾರವ ಎಂದೆನಿಸದಿರಯ್ಯ. ಇವ ನಮ್ಮವ ಇವ ನಮ್ಮವ ಇವ ನಮ್ಮ ಮನೆಯ ಮಗನೆಂದೆನಿಸಯ್ಯ’ ಎಂದು ಬಸವಣ್ಣನವರು ಹೇಳಿದರು. 

ಆದರೆ, “ನಮ್ಮೊಳಗಿನವರನ್ನೇ ನಮ್ಮವರಲ್ಲ ಎಂದು ದೂರ ಇಡಲಾಗುತ್ತಿದೆ. ನೀವೇ ಬೇರೆ, ನಾವೇ ಬೇರೆ ಎಂದು ವಾದಿಸುತ್ತಿದ್ದಾರೆ. ಹೀಗಿರುವಾಗ ಹೊರಗಿನವರನ್ನೂ ನಮ್ಮವರೆಂದು ಒಪ್ಪಿಕೊಳ್ಳುತ್ತಾರೆಯೇ? ಇಂತಹವರೆಲ್ಲಾ ಸಮಾಜದ ವಾರಸುದಾರರು ಆಗುತ್ತಾರೆಯೇ?’ ಎಂದು ಕೇಳಿದರು.

ವೀರಶೈವ-ಲಿಂಗಾಯತ ಸಮಾಜವು ಧಾರ್ಮಿಕ ಸಂಸ್ಕಾರದ ಜತೆಗೆ ತ್ರಿವಿಧ ದಾಸೋಹವನ್ನೂ ಮಾಡಿದೆ. ಇದನ್ನು ಬೇರೆ ಯಾವ ಸಮಾಜವೂ ಕೊಟ್ಟಿಲ್ಲ. ಸಾಮಾಜಿಕನ್ಯಾಯ, ಕಾಯಕ, ಸಹೋದರತ್ವ ತಳಹದಿಯ ಮೇಲೆ ಈ ಸಮಾಜ ನಿರ್ಮಾಣ ಆಗಿದೆ. ನಾವೆಲ್ಲರೂ ಇದರ ವಾರಸುದಾರರು. ಅಂಗೈನಲ್ಲಿ ಲಿಂಗ ಹಿಡಿದು ಪೂಜೆ ಮಾಡುವವರೆಲ್ಲಾ ಲಿಂಗಿಗಳು (ವೀರಶೈವ-ಲಿಂಗಾಯತರು) ಎನ್ನಲು ಏನು ಸಮಸ್ಯೆ ಎಂದು ತೀಕ್ಷ್ಣವಾಗಿ ಪ್ರಶ್ನಿಸಿದರು.

ವಿಘಟಿಸಿದ್ರೆ ನಿರ್ನಾಮ; ಎಚ್ಚರಿಕೆ
“ಸಮಾಜದ ಅನಿಷ್ಟಗಳ ವಿರುದ್ಧ ಹಾಗೂ ಶೋಷಿತರ ಪರ ಹೋರಾಟ ನಡೆಸುವುದು ಬಿಟ್ಟು, ಪರಸ್ಪರ ದೂಷಿಸುವುದು, ಒಬ್ಬರಿಗೊಬ್ಬರು ಬೈದಾಡಿಕೊಳ್ಳಲು ನಾಚಿಕೆ ಆಗುವುದಿಲ್ಲವೇ’ ಎಂದು ಖಾರವಾಗಿ ಕೇಳಿದ ಅವರು, ವೈಯಕ್ತಿಕವಾಗಿ ಸಮಾಜದ ವ್ಯಕ್ತಿಗಳು ಬಲಿಷ್ಠವಾಗಿರಬಹುದು. ಆದರೆ, ಸಂಘಟನಾತ್ಮಕವಾಗಿ ಸಮಾಜ ದುರ್ಬಲಗೊಳ್ಳುತ್ತಿದೆ. ಒಗ್ಗಟ್ಟಿನಲ್ಲಿ ಶಕ್ತಿ ಇದೆ; ವಿಘಟನೆಯಾದರೆ ನಿರ್ನಾಮ ಆಗಲಿದೆ ಎಂದೂ ಎಚ್ಚರಿಸಿದರು.

Advertisement

ಬಸವಣ್ಣನ ವಿರೋಧಿಗಳಲ್ಲ
ಈಗ ಭಿನ್ನರಾಗ ಹಾಡುತ್ತಿರುವವರೂ ಸೇರಿದಂತೆ ಈ ಹಿಂದೆ ಸಮಾಜದ ಮುಖಂಡರು ಕೂಡಲಸಂಗಮದಲ್ಲಿ ನಡೆದ ಸಭೆಯಲ್ಲಿ ವೀರಶೈವ-ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಸಂಕಲ್ಪ ಮಾಡಿ, ಸಹಿ ಹಾಕಿದ್ದಾರೆ. ಈಗ ಯಾಕೆ ಬೇರೆ ಎಂಬ ಭಾವ ಎಂದು ಕೇಳಿದ ಅವರು, ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಸೂಚ್ಯವಾಗಿ ಹೇಳಿದರು.

ಇದೇ ವೇಳೆ ಸಚಿವ ಎಂ.ಬಿ. ಪಾಟೀಲ ಅವರನ್ನು ಸರ್ವನಾಶ ಮಾಡುವುದಾಗಿ ಜೀವಬೆದರಿಕೆ ಹಾಕಿರುವುದು ಖಂಡನೀಯ. ಧರ್ಮದ ಮೇಲೆ ನಂಬಿಕೆ ಇರುವವರಾರೂ ಇಂತಹ ಕೆಲಸ ಮಾಡುವುದಿಲ್ಲ ಎಂದು ಸಚಿವ ಖಂಡ್ರೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next