ಶಿವಮೊಗ್ಗ: ಜನಜಾಗೃತಿ ಮೂಡಿಸಿ ದೇಶ ಭಕ್ತಿ ಮೂಡಿಸುವ ಪ್ರತೀಕವೆಂದರೆ ಅದು ಮೋದಿ. ನಿನ್ನೆಯ ಮಂಗಳೂರು ಭೇಟಿಯಲ್ಲಿ ಚುನಾವಣೆ ವಿಚಾರ ಬರಲೇ ಇಲ್ಲ. ಅವರ ಭಾಷಣದಲ್ಲಿ ಒಂದೇ ಒಂದು ರಾಜಕೀಯ ವಿಷಯ ಇರಲಿಲ್ಲ. ಅಭಿವೃದ್ಧಿ ಕಾರ್ಯದ ಬಗ್ಗೆ ಭಾಷಣವಿತ್ತು. ಕೋರ್ ಕಮಿಟಿ ಸಭೆಯಲ್ಲೂ ಅಭಿವೃದ್ಧಿ ಕಾರ್ಯದ ಬಗ್ಗೆ ವಿಷಯ ಚರ್ಚೆ ನಡೆಸಿದರು. ನಿಜವಾದ ರಾಷ್ಟ್ರ ಭಕ್ತನನ್ನು ಪಡೆದದ್ದು ನಮ್ಮ ಪುಣ್ಯ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನರೇಂದ್ರ ಮೋದಿ ಅವರು ರಾಜ್ಯಕ್ಕೆ ಭೇಟಿ ನೀಡಿದ್ದು ನಮಗೆಲ್ಲಾ ಸ್ಪೂರ್ತಿ ತುಂಬಿದೆ. ನಮ್ಮ ಬಲಗೈಗೆ ಶಕ್ತಿ ಬಂದಂತಾಗಿದೆ. ಇಂತಹ ಐವತ್ತು ಕಾರ್ಯಕ್ರಮಗಳನ್ನು ನಾವು ಮಾಡುತ್ತೇವೆ. ಬಿಜೆಪಿಗೆ ಜನ ಬೆಂಬಲ ಕೊಡುತ್ತಿರುವುದಕ್ಕೆ ನಿನ್ನೆಯ ಕಾರ್ಯಕ್ರಮ ಸಾಕ್ಷಿಯಾಗಿದೆ. ಮೋದಿ ಎಲ್ಲಿ ಬರುತ್ತಾರೋ ಅಲ್ಲಿ ಜನರ ಸಂಚಲನ ಇರುತ್ತದೆ ಎಂದರು.
ಸಿದ್ದರಾಮೋತ್ಸವಕ್ಕೆ 75 ಕೋಟಿ ಖರ್ಚು ಮಾಡಿ ಜನರನ್ನು ಕರೆ ತಂದರು. ಆದರೆ ಮೋದಿ ಕಾರ್ಯಕ್ರಮದಲ್ಲಿ ಜನ ಸ್ವಇಚ್ಛೆಯಿಂದ ಬಂದಿದ್ದರು. ಸಿದ್ದರಾಮೋತ್ಸವ ಇಡೀ ರಾಜ್ಯದ ಕಾರ್ಯಕ್ರಮ ಆಗಿದ್ದರೇ, ಮೋದಿ ಕಾರ್ಯಕ್ರಮ ಒಂದು ಜಿಲ್ಲೆಯದ್ದಾಗಿತ್ತು ಎಂದು ಈಶ್ವರಪ್ಪ ಹೇಳಿದರು.
ಇದನ್ನೂ ಓದಿ:ವಾರ್ನರ್ 94 ಆಸೀಸ್ 141 ಆಲೌಟ್: ಕಾಂಗರೂ ನೆಲದಲ್ಲಿ ಗೆದ್ದು ದಾಖಲೆ ಬರೆದ ಜಿಂಬಾಬ್ವೆ
ಮುರುಘಾ ಶ್ರೀ ಬಂಧನ ವಿಚಾರವಾಗಿ ಮಾತನಾಡಿದ ಅವರು, ಮಠದ ಸ್ವಾಮಿಗಳೆಂದರೆ ನನಗೆ ದೇವರಿದ್ದಂತೆ. ಮುರುಘಾ ಶ್ರೀ ಬಗ್ಗೆ ನನಗೆ ಗೌರವ ಕಡಿಮೆಯಾಗಿಲ್ಲ. ತನಿಖೆ ನಡೆಯುತ್ತಿದೆ ಸತ್ಯ ಹೊರಗೆ ಬರಲಿ. ಮಠ ಮಂದಿರ ಭಕ್ತಿ, ಜಾಗೃತಿ ಉಂಟು ಮಾಡುತ್ತದೆ ಎಂದರು.
ಶಿವಮೊಗ್ಗದಲ್ಲಿ ಶಾಂತಿಗಾಗಿ ಜಾಥಾ ವಿಚಾರವಾಗಿ ಮಾತನಾಡಿದ ಈಶ್ವರಪ್ಪ, ಶಿವಮೊಗ್ಗ ಶಾಂತವಾಗಿದೆ. ರಾಷ್ಟ್ರ ದ್ರೋಹಿ ಚಟುವಟಿಕೆ ಮಾಡಿರುವವರ ಬಾಲ ಮುರಿದಿದ್ದೇವೆ. ಅಂತಹವರಿಗೆ ಎಲ್ಲಿಡಬೇಕೋ ಅಲ್ಲಿ ಇಟ್ಟಿದ್ದೇವೆ. ಅವರೆಲ್ಲಾ ಈಗಾಗಲೇ ಜೈಲಿನಲ್ಲಿದ್ದಾರೆ. ಇವತ್ತು ಏನು ನಡೆಯುತ್ತದೋ ನಡೆಯಲಿ. ನಮಗೆ ಈ ಬಗ್ಗೆ ಆಹ್ವಾನ ಇಲ್ಲ. ಏಕೆ ಬಿಟ್ಟಿದ್ದಾರೆಂದು ಗೊತ್ತಿಲ್ಲ. ಶಿವಮೊಗ್ಗ ಶಾಂತಿಯಿಂದ ಇರಬೇಕು ಎಂಬುದು ನನ್ನ ಆಸೆ ಎಂದರು.