ವಿಜಯಪುರ: ದೇಶದ ಸಾಮರಸ್ಯಕ್ಕೆ ನಿರಂತರ ಧಕ್ಕೆ ತರುವ, ಸೈನಿಕರ ಜೀವ ಪಡೆಯುತ್ತಿರುವ ಭಯೋತ್ಪಾದನೆ ಮಟ್ಟ
ಹಾಕಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಎಲ್ಲ ಪಕ್ಷಗಳ ಬೆಂಬಲವಿದ್ದು, ಅವರೊಂದಿಗೆ ನಾವೂ ಕೈ ಜೋಡಿಸುತ್ತೇವೆಂದು ಗೃಹ ಸಚಿವ ಎಂ.ಬಿ. ಪಾಟೀಲ ಹೇಳಿದರು.
ಸುದ್ದಿಗೋಷ್ಠಿ ನಡೆಸಿದ ಅವರು, ದೇಶದಲ್ಲಿನ ಭಯೋತ್ಪಾದನೆ, ಬೇರು ಸಮೇತ ಕಿತ್ತೂಗೆಯಲು ಎಲ್ಲ ಪಕ್ಷಗಳು ಒಂದಾಗಿವೆ. ಈ ಕುರಿತು,ಪ್ರತಿಯೊಂದು ರಾಜಕೀಯ ಪಕ್ಷಗಳು ತಮ್ಮ ಸಹಮತ ವ್ಯಕ್ತಪಡಿಸಿವೆ ಎಂದರು.
ಪಾಕಿಸ್ತಾನ ಬೆಂಬಲಿಸಿ, ಸಾಮಾಜಿಕ ಜಾಲತಾಣದಲ್ಲಿ ವಿಷಯ ಹಂಚಿದ ವ್ಯಕ್ತಿಯನ್ನು ಬಂ ಧಿಸಲಾಗಿದೆ. ಈತನ ಕುರಿತು ಹೆಚ್ಚಿನ ಮಾಹಿತಿ ಪಡೆಯಲಾಗುತ್ತಿದೆ. ಆತನ ಕಂಪ್ಯೂಟರ್ ಸಹಿತ ವಿವಿಧ ವಸ್ತುಗಳನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ.ಆತ ಎಲ್ಲೆಲ್ಲಿ ಸಂಪರ್ಕ ಹೊಂದಿದ್ದಾನೆ ಎಂಬುದರ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದರು.
ಯಾರೇ ಇದ್ರೂ ಕ್ರಮ: ರಾಜ್ಯದಲ್ಲಿ ಶಾಂತಿ-ಸುವ್ಯವಸ್ಥೆ ಕದಡುವ ಕೆಲಸ ಯಾರೇ ಮಾಡಿದರೂ ಸರ್ಕಾರ ಸಹಿಸಲ್ಲ. ಅದು ಕೆ.ಎಸ್. ಭಗವಾನ್, ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅಥವಾ ವಿಜಯಪುರದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಯಾರೇ ಇದ್ದರೂ ಅಗತ್ಯ ಬಿದ್ದಲ್ಲಿ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದರು.
ಉಡುಪಿಯ ಮಲ್ಪೆ ಕಡಲ ತೀರದಿಂದ ನಾಪತ್ತೆಯಾದ ಮೀನುಗಾರರು ಇನ್ನೂ ಪತ್ತೆಯಾಗಿಲ್ಲ. ಶೋಧ ಕಾರ್ಯ ನಡೆಯುತ್ತಿದೆ. ಆದರೆ, ಈ ಕುರಿತು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡುತ್ತಿದ್ದಾರೆ ಎಂದರು.