ಬೆಂಗಳೂರು: ಮಂಬೈನಲ್ಲಿರುವ ಶಾಸಕರ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಅತೃಪ್ತ ಶಾಸಕರು ಹೇಳಿಕೊಂಡಿದ್ದಾರೆ. ಭಾನುವಾರ ಸಂಜೆ ಮಾಧ್ಯಮಗಳ ಮುಂದೆ ಎಲ್ಲರೂ ಹಾಜರಾಗಿ ಜಂಟಿ ಪತ್ರಿಕಾಗೋಷ್ಠಿ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್, ಮುಂಬೈನಲ್ಲಿರುವ ಹನ್ನೆರಡು ಶಾಸಕರಲ್ಲಿ ಯಾವುದೇ ಒಡಕಿಲ್ಲ. ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ. ಎಂಟಿಬಿ ನಾಗರಾಜ್ ಅವರೂ ಮುಂಬೈಗೆ ಬಂದು ನಮ್ಮನ್ನು ಸೇರಿಕೊಂಡಿದ್ದಾರೆ.
ಶನಿವಾರ ಕಾಂಗ್ರೆಸ್ ನಾಯಕರು ಅವರ ಮನವೊಲಿಕೆಗೆ ನಿರಂತರ ಪ್ರಯತ್ನ ನಡೆಸಿದರೂ ಅವರು ಮುಂಬೈಗೆ ಆಗಮಿಸಿದ್ದಾರೆ. ನಾವು ಯಾವುದೇ ಒತ್ತಡಕ್ಕೂ ಮಣಿಯುವುದಿಲ್ಲ. ಯಾವುದೇ ನಾಯಕರು ಬಂದರೂ ನಾವು ಭೇಟಿಯಾಗುವುದಿಲ್ಲ ಎಂದು ಹೇಳಿದರು.
ಡಾ.ಸುಧಾಕರ್ ಅವರು ರಾಜೀನಾಮೆ ನೀಡಿದ ಮೇಲೆ ಅವರ ಮೇಲೆ ಹಲ್ಲೆಯಾಗಿದೆ. ಅವರು ದೆಹಲಿಗೆ ತೆರಳಿದ್ದು, ಅವರೂ ನಮ್ಮೊಂದಿಗಿದ್ದಾರೆ. ಯಾವುದೇ ಕಾರಣಕ್ಕೂ ನಾವು ವಾಪಸ್ ತೆರಳುವ ಪ್ರಶ್ನೆಯೇ ಇಲ್ಲ ಎಂದರು.
ಎಂಟಿಬಿ ನಾಗರಾಜ್ ಮಾತನಾಡಿ, “ನನ್ನೊಂದಿಗೆ ಮುಂಬೈಗೆ ಯಾವುದೇ ಬಿಜೆಪಿ ನಾಯಕರು ಬಂದಿಲ್ಲ. ನನ್ನೊಂದಿಗೆ ಅಶೋಕ್ ಬಂದಿದ್ದು ಸುಳ್ಳು. ನಮ್ಮಲ್ಲಿ ಯಾವುದೇ ಗುಂಪುಗಾರಿಕೆಯಿಲ್ಲ. ಅಶೋಕ್ ವಿಮಾನ ನಿಲ್ದಾಣಕ್ಕೆ ಬಂದಿರುವುದಕ್ಕೂ, ನನಗೂ ಸಂಬಂಧವಿಲ್ಲ’ ಎಂದು ಹೇಳಿದರು.
ಈಗಾಗಲೇ ನಾವು ರಾಜೀನಾಮೆ ಸಲ್ಲಿಸಿರುವುದರಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿರುವ ಅವರು, ಡಾ.ಸುಧಾಕರ್ ಬಂದ ಮೇಲೆ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.