Advertisement

ನಮ್ಮ ಹತ್ತಿರವೂ ಬೇಕಾದಂಥ ಶಬ್ದ ಭಂಡಾರವಿದೆ: ಕಾಂಗ್ರೆಸ್ ಟೀಕೆಗೆ ಸಿ.ಸಿ.ಪಾಟೀಲ್

04:59 PM Jan 26, 2023 | Team Udayavani |

ಗದಗ: ಕಾಂಗ್ರೆಸ್ ಪಕ್ಷದ ಮುಖಂಡರ ನಡವಳಿಕೆ ಮತ್ತು ಹೇಳಿಕೆಗಳು ಹೇಸಿಗೆ ತರಿಸುವಂತದ್ದಾಗಿವೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ ಹೇಳಿದರು.

Advertisement

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವೆಲ್ಲ ಚುನಾಯಿತ ಪ್ರತಿನಿಧಿಗಳು. ರಾಜ್ಯವನ್ನ ಆಡಳಿತ ಮಾಡಿದ್ದೇವೆ. ಪದ ಬಳಕೆ ಕುರಿತು ನಮಗೆ ಅರಿವಿದೆ ಎಂದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರು ಬುಧವಾರ ಬಳಸಿದ ಪದ ಪ್ರಯೋಗ ಬಹಳ ಅಶ್ಲೀಲವಾಗಿದ್ದು, ಪದ ಬಳಕೆಗೆ ಇತಿ-ಮಿತಿ ಇರಬೇಕು. ಕೀಳು ಮಟ್ಟದ ಭಾಷೆ ಪ್ರಯೋಗ ಯಾರಿಗೂ ಶೋಭೆ ತರುವುದಿಲ್ಲ. ಅವರು ಕೀಳು ಮಟ್ಟದ ಶಬ್ದ ಪ್ರಯೋಗ ನಿಲ್ಲಿಸಲಿ ಎಂದು ನಾನು ಮನವಿ ಮಾಡುವೆ ಎಂದರು.

ನಮ್ಮ ಹತ್ತಿರವೂ ಬೇಕಾದಂಥ ಶಬ್ದ ಭಂಡಾರವಿದೆ. ಪದ, ಪುಂಕಗಳಿದ್ದಾವೆ. ಆದರೆ, ನಮ್ಮ ಪಕ್ಷ, ಸಂಸ್ಕೃತಿ, ಸಂಘಟನೆ ಅಂತಹ ಭಾಷೆಯನ್ನು ಕಲಿಸಿಕೊಟ್ಟಿಲ್ಲ. ನಾವು ಬಾಯಿ ಮುಚ್ಚಿಕೊಂಡು ಸುಮ್ಮನಿದ್ದೇವೆ ಅಂದರೆ, ಅದು ನಮ್ಮ ದೌರ್ಬಲ್ಯವಲ್ಲ ಎಂದರು.

ಏಳೆಂಟು ಬಜೆಟ್‌ ಗಳನ್ನು ಮಂಡಿಸಿದ್ದೇನೆ ಎಂದು ಹೇಳಿಕೊಳ್ಳುತ್ತಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಅದನ್ನು ಕೊಡುತ್ತೇವೆ, ಇದನ್ನು ಕೊಡುತ್ತೇವೆ ಅಂತ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ತಾವು ಹೇಳಿದ ಘೋಷಣೆಗಳನ್ನು ಈಡೇರಿಸಲಿಕ್ಕೆ ಎಷ್ಟು ದುಡ್ಡು ಬೇಕೆಂದು ಲೆಕ್ಕ ಹಾಕಿ ಹೇಳಲಿ. ಅತೀ ಹೆಚ್ಚಿನ ಸಾಲ ಮಾಡಿಟ್ಟು ಹೋದ ಮುಖ್ಯಮಂತ್ರಿ ಎಂಬ ಹಣೆಪಟ್ಟಿ ಸಿದ್ದರಾಮಯ್ಯರಿಗಿದೆ. ಇಷ್ಟೆಲ್ಲ ಇದ್ದು ಹುಚ್ಚರಂತೆ ಕರ್ನಾಟಕದ ಜನರನ್ನು ಮರಳು ಮಾಡೋಕೆ ಹೊರಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

Advertisement

ಗೋಡ್ಸೆ ರಾಜಕಾರಣ ಬೇಕೋ ಅಥವಾ ಗಾಂಧಿಯ ಅಹಿಂಸೆಯ ರಾಜಕಾರಣ ಬೇಕೋ? ಎನ್ನುತ್ತಿರುವ ಬಿ.ಕೆ. ಹರಿಪ್ರಸಾದ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಹರಿಪ್ರಸಾದ ಮಾತಿಗೆ ಮಾಧ್ಯಮದವರು ಬೆಲೆ ಕೊಡಬಾರದು. ಹರಿಪ್ರಸಾದನ ಸಂಸ್ಕೃತಿ ಎಲ್ಲಿಂದ ಬಂದಿದೆ ಅಂತ ನೋಡಿಕೊಳ್ಳಿ. ಅವರು ಯಾರ ಶಿಷ್ಯ? ಅವರ ಗುರು ಯಾರು? ಅಂತ ಹಿನ್ನೆಲೆ ತೆಗೆದುಕೊಳ್ಳಿ. ಕೊತ್ವಾಲ್ ರಾಮಚಂದ್ರನ ಜೊತೆ ಸ್ನೇಹದಿಂದ ಇದ್ದವರು ಹರಿಪ್ರಸಾದ. ಕೊತ್ವಾಲ್ ರಾಮಚಂದ್ರ ಯಾರು?, ಏನಿದ್ದ ಅನ್ನೋದನ್ನ ಈಗ ತೆಗೆಯಬೇಕಾ? ಬೇಡ. ಇದೀಗ ಸಂಭ್ರದಿಂದ ಗಣರಾಜ್ಯೋತ್ಸವ ಆಚರಿಸುತ್ತಿದ್ದೇವೆ. ಆಚರಿಸೋಣ. ಹರಿಪ್ರಸಾದ ಮಾತಿಗೆ ನಾನು ಉತ್ತರ ಕೊಡೋದಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next