ಬೆಂಗಳೂರು: ‘ನಾನೊಬ್ಬನೇ ರಾಜೀನಾಮೆ ನೀಡುವುದಿಲ್ಲ, ನಮ್ಮ ತಂಡ ಇದೆ. ಎಲ್ಲರೂ ಸೇರಿಯೇ ರಾಜೀನಾಮೆ ನೀಡುತ್ತೇವೆ. ಆದರೆ, ಯಾವಾಗ ಎಂದು ಹೇಳುವುದಿಲ್ಲ. ಒಂದು ವರ್ಷವಾದರೂ ಆಗಬಹುದು’ ಎಂದು ಕಾಂಗ್ರೆಸ್ ಬಂಡಾಯ ಶಾಸಕ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.
ಚಿಕ್ಕಬಳ್ಳಾಪುರ ಶಾಸಕ ಡಾ.ಸುಧಾಕರ್ ಅವರೊಂದಿಗೆ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದ ಬಳಿಕ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು.
‘ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರೊಂದಿಗೂ ಯಾವುದೇ ರಾಜಕೀಯ ಚರ್ಚೆ ನಡೆಸಿಲ್ಲ. ನಾನು ಒಬ್ಬನೇ ಇಲ್ಲ. ನಮ್ಮ ತಂಡ ಇದೆ. ನಾವೆಲ್ಲರೂ ಸೇರಿ, ಚರ್ಚಿಸಿ ತೀರ್ಮಾನ ಮಾಡುತ್ತೇವೆ. ನಮ್ಮ ತಂಡದಲ್ಲಿ ಎಷ್ಟು ಜನ ಇದ್ದೇವೆ ಎಂದು ಮಾಧ್ಯಮದವರಿಗೆ ಎಲ್ಲವನ್ನೂ ಹೇಳಿ ಮಾಡಬೇಕೆಂದೇನಿಲ್ಲ. ನಾನು ಕಾಂಗ್ರೆಸ್ ಶಾಸಕ, ಬಿಜೆಪಿ ಸರ್ಕಾರ ರಚನೆ ಮಾಡುವ ಬಗ್ಗೆ ನನಗೆ ಯಾವುದೇ ಮಾಹಿತಿಯಿಲ್ಲ’ ಎಂದು ಹೇಳಿದರು.
Advertisement
‘ನಾನು ಯಾವುದೇ ‘ಆಪರೇಷನ್ ಕಮಲ’ ಮಾಡುತ್ತಿಲ್ಲ. ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು 1999ರಲ್ಲಿ ನನ್ನನ್ನು ಶಾಸಕನನ್ನಾಗಿ ಮಾಡಿದ್ದರು. ಅವರ ಆರೋಗ್ಯ ವಿಚಾರಿಸಲು ಆಗಮಿಸಿದ್ದೇನೆ. ಅವರೊಂದಿಗೆ ಯಾವುದೇ ರಾಜಕೀಯ ವಿಚಾರ ಚರ್ಚೆ ಮಾಡಿಲ್ಲ’ ಎಂದು ತಿಳಿಸಿದರು.
ಎಸ್.ಎಂ. ಕೃಷ್ಣ ಅವರು ನನ್ನ ರಾಜಕೀಯ ಗುರುಗಳು. ನಾನು ಅವರನ್ನು ಭೇಟಿ ಮಾಡಲು ಹೋಗುತ್ತೇನೆ ಎಂದಾಗ ರಮೇಶ್ ಜಾರಕಿಹೊಳಿಯವರು ತಾನೂ ಬರುತ್ತೇನೆ ಎಂದರು. ಅದೇ ಸಂದರ್ಭದಲ್ಲಿ ಯಡಿಯೂರಪ್ಪ, ಸುಮಲತಾ ಕೂಡ ಬಂದಿದ್ದರು. ಯಡಿಯೂರಪ್ಪ ಅವರೊಂದಿಗೆ ಯಾವುದೇ ಮಾತುಕತೆ ನಡೆಸಿಲ್ಲ. ಇದೆಲ್ಲ ಕಾಕತಾಳೀಯವಷ್ಟೇ. ಇದರಲ್ಲಿ ಯಾವುದೇ ರಾಜಕೀಯವಿಲ್ಲ.
-ಡಾ.ಕೆ. ಸುಧಾಕರ್, ಚಿಕ್ಕಬಳ್ಳಾಪುರ ಶಾಸಕ
-ಡಾ.ಕೆ. ಸುಧಾಕರ್, ಚಿಕ್ಕಬಳ್ಳಾಪುರ ಶಾಸಕ