ಕೊಚ್ಚಿ: ಕೇರಳದ ವಯನಾಡು ಭೀಕರ ಭೂಕುಸಿತದಿಂದ (Wayanad landslide)ದಿಂದ ನೂರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅನೇಕರು ತನ್ನ ಕುಟುಂಬವನ್ನು ಕಳೆದುಕೊಂಡು ಅನಾಥರಾಗಿದ್ದಾರೆ.
ಅಕ್ಷರಶಃ ವಯನಾಡು ಸ್ಮಶಾನದಂತೆ ಕಾಣುತ್ತಿದೆ. ಇತ್ತೀಚೆಗಿನ ವರದಿಗಳ ಪ್ರಕಾರ, ಕನಿಷ್ಠ 256 ಜನರು ಸಾವನ್ನಪ್ಪಿದ್ದಾರೆ ಮತ್ತು 200 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮೂರನೇ ದಿನಕ್ಕೆ ಕಾಲಿಟ್ಟಿವೆ. ಸೇನೆ ಇದುವರೆಗೆ ಸುಮಾರು 1,000 ಜನರನ್ನು ರಕ್ಷಿಸಿದೆ ಮತ್ತು 220 ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. 1,000 ಕ್ಕೂ ಹೆಚ್ಚು ಜನರು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ವಯನಾಡು ಭೂಕುಸಿತ ದುರಂತ ಮಾಲಿವುಡ್ ಚಿತ್ರರಂಗದ ಮೇಲೆ ಪರಿಣಾಮ ಬೀರಿದೆ. ರಿಲೀಸ್ ಆಗಬೇಕಿದ್ದ ಸಿನಿಮಾಗಳು ಹಾಗೂ ಯೋಜನೆಯಂತೆ ನಿಗದಿಯಾಗಿದ್ದ ಸಿನಿಮಾ ರಿಲೀಸ್, ಸಿನಿಮಾ ಸಂಬಂಧಿತ ಕಾರ್ಯಕ್ರಮ ಮುಂದೂಡಿಕೆ ಆಗಿದೆ.
ಇದನ್ನೂ ಓದಿ: Wayanad landslide: ಭೂಕುಸಿತದಿಂದ ಮನೆ – ಮನ ಕಳೆದುಕೊಂಡವರ ನೆರವಿಗೆ ಧಾವಿಸಿದ ಚಿತ್ರರಂಗ
ಮಂಜು ವಾರಿಯರ್ (Manju Warrier)ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಸೈಜು ಶ್ರೀಧರನ್ ನಿರ್ದೇಶನದ ಥ್ರಿಲ್ಲರ್ ಡ್ರಾಮಾ ‘ಫೂಟೇಜ್’ (Footage) ಆಗಸ್ಟ್ 2 ರಂದು ರಿಲೀಸ್ ಆಗಬೇಕಿತ್ತು. ಆದರೆ ಭೂಕುಸಿತದಿಂದಾಗಿ ಸಿನಿಮಾ ರಿಲೀಸ್ ಡೇಟ್ ಮುಂದೂಡಿಕೆ ಆಗಿದೆ.
ಆಸಿಫ್ ಅಲಿ (Asif Ali) ಮತ್ತು ಸೂರಜ್ ವೆಂಜರಮೂಡು (Suraj Venjaramoodu) ಅಭಿನಯದ ‘ಆಡಿಯೋಸ್ ಅಮಿಗೋ’ (Adios Amigo) ಸಿನಿಮಾ ಈ ವಾರ ತೆರೆ ಕಾಣಲಿತ್ತು. ಆದರೆ ಭೂಕುಸಿತ ಉಂಟಾದ ಕಾರಣ ಸಿನಿಮಾದ ರಿಲೀಸ್ ಡೇಟ್ ನ್ನು ಮುಂದೂಡಲಾಗಿದೆ.
ಟೊವಿನೋ ಥಾಮಸ್ (Tovino Thomas) ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಅಜಯಂತೆ ರಂದಮ್ ಮೋಷನಂ’ (Ajayante Randam Moshanam) ಚಿತ್ರತಂಡ ತನ್ನ ಪ್ರಮುಖ ಅಪ್ಡೇಟ್ ವೊಂದನ್ನು ನೀಡಲು ಡೇಟ್ ಫಿಕ್ಸ್ ಆಗಿತ್ತು. ಆದರೆ ಭೂಕುಸಿತದಿಂದಾಗಿ ಅಪ್ಡೇಟ್ ದಿನಾಂಕವನ್ನು ಮುಂದೂಡಲಾಗಿದೆ.
ಕೇರಳದ 16 ನೇ ಅಂತರರಾಷ್ಟ್ರೀಯ ಸಾಕ್ಷ್ಯಚಿತ್ರ ಮತ್ತು ಕಿರು ಚಲನಚಿತ್ರೋತ್ಸವದ (IDSFFK) ಸಂಘಟಕರು ತಮ್ಮ ಎಲ್ಲಾ ಅಧಿಕೃತ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಿದ್ದಾರೆ.
ಮಲಯಾಳಂ ಚಲನಚಿತ್ರ ಕಲಾವಿದರ ಸಂಘವು (AMMA) ಮುಂಬರುವ ಅವಾರ್ಡ್ಸ್ ಕಾರ್ಯಕ್ರಮ ಕುರಿತದಾ ನಡೆಯಲಿದ್ದ ಪ್ರತಿಕಾಗೋಷ್ಟಿಯನ್ನು ರದ್ದುಗೊಳಿಸಿದ್ದಾರೆ.
ವಯನಾಡು ಭೂಕುಸಿತದಿಂದ ನಷ್ಟಕ್ಕೆ, ಸಂತ್ರಸ್ತರ ನೆರವಿಗೆ ಚಿತ್ರರಂಗ ಧಾವಿಸಿದೆ. ಮೋಹನ್ ಲಾಲ್,ಮಮ್ಮುಟ್ಟಿ, ಮಂಜು ವಾರಿಯರ್, ಆಸಿಫ್ ಆಲಿ ಸೇರಿದಂತೆ ಅನೇಕ ಮಾಲಿವುಡ್ ಕಲಾವಿರು ನೆರವಿಗೆ ಧಾವಿಸಿದ್ದಾರೆ.