Advertisement

ವಯನಾಡು, ವಾರಾಣಶಿ ಬಗ್ಗೆಯೇ ಕುತೂಹಲ

03:13 AM Apr 12, 2019 | Team Udayavani |

ಸುಳ್ಯ: ನೀತಿ ಸಂಹಿತೆಯ ಬಿಸಿಯೇ ಚುನಾವಣೆಯ ಹವಾಕ್ಕಿಂತ ಜೋರು!
ಸುಳ್ಯ ವಿಧಾನಸಭಾ ಕ್ಷೇತ್ರದ ಕೆಲವು ಭಾಗಗಳಲ್ಲಿ ನಮ್ಮ ಮೇಳ ತಿರುಗಾಟ ಮಾಡಿದಾಗ ಮಾತು ಆರಂಭವಾದದ್ದೇ ಮೇಲಿನ ಮಾತಿನಿಂದ. “ನೀತಿ ಸಂಹಿತೆ ಇದೆಯಲ್ಲಾ, ಮಾತಾ ಡಬಹುದಾ?’ ಎಂಬುದೇ ಮುನ್ನುಡಿ. ಬಳಿಕ ಪ್ರಸ್ತಾಪವದದ್ದು ಮೋದಿ, ರಾಹುಲ್‌ ಇತ್ಯಾದಿ.

Advertisement

ತಾಲೂಕಿನ ಹಲವು ಸಮಸ್ಯೆಗಳು ಮುಸುಕೆದ್ದು ಮಲಗಿರುವುದು ಸುಳ್ಳಲ್ಲ. ಇದರ ಬೆನ್ನಿಗೇ ಚುನಾವಣೆ ಹೇಗಿದೆ ಎಂದು ಕೇಳಿದರೆ, ಬೆಳ್ಳಾರೆಯ ತರಕಾರಿ ಅಂಗಡಿಗೆ ಬಂದಿದ್ದ ಸುಂದರ ಅವರು, “ಹಾಗೇ ಇದೆ’ ಎಂದು ಹೇಳಿ ಚುಟುಕಾಗಿ ಉತ್ತರಿಸಿದರು. ಇನ್ನೋರ್ವ ಗ್ರಾಹಕ ಇಸ್ಮಾಯಿಲ್‌, “ಮನೆ ಮಂದಿ ವೋಟು ಹಾಕ್ತೀವಿ. ಯಾರು ಗೆಲ್ತಾರೆ, ಸೋಲ್ತಾರೆ ಅಂತ ಗೊತ್ತಾಗಲ್ಲ’ ಎಂದು ಮಾತು ಮುಗಿಸಿದರು.

ಬೆಳ್ಳಾರೆ ಕೆಳಗಿನ ಪೇಟೆಯಲ್ಲಿ ಬಸ್‌ಗಾಗಿ ಕಾಯುತ್ತಿದ್ದ ವಯೋವೃದ್ಧ ಚನಿಯ ಮುಗೇರ ಹೇಳಿದ್ದು ಬೇರೆ. “ನಮ್ಮ ಮನೆಯಲ್ಲಿ ನಾಲ್ಕು ಓಟು ಇದೆ. ಎರಡೂ ಪಾರ್ಟಿಯವರು ನಮ್ಮಲ್ಲಿ ಬಂದು ಮತ ಕೇಳುತ್ತಾರೆ. ಹಾಗಂತ ಯಾರು ಬಂದು ಸಮಾವೇಶ ಮಾಡಿದ್ರೂ ಹೋಗೋಲ್ಲ’.

ಸಮಸ್ಯೆಗಳತ್ತ ನಮ್ಮನ್ನು ಹೊರಳಿಸಿದ್ದು ನಿಂತಿಕಲ್ಲಿನ ಪ್ರಯಾಣಿಕರ ತಂಗುದಾಣದಲ್ಲಿದ್ದ ರಾಜೇಶ್‌. “ವೋಟು ಪ್ರತಿ ವರ್ಷ ಬರುತ್ತೆ. ನಾವು ವೋಟು ಹಾಕ್ತೇವೆ. ಅವರು ಗೆಲ್ತಾರೆ. ನಮಗೇನೂ ಪ್ರಯೋಜನ ಇಲ್ಲ. ನಮ್ಮಲ್ಲಿ ಸರಿಯಾಗಿ ಕರೆಂಟ್‌ ಇಲ್ಲದೆ ಒಂದು ತಿಂಗಳಾಯಿತು. ಕುಡಿಯಲು ನೀರಿಲ್ಲ, ಯಾರನ್ನು ಕೇಳ್ಳೋದು’ ಎಂಬುದು ಅವರ ಆಕ್ರೋಶ.

ಮಂಡ್ಯದತ್ತಲೂ ಗಮನ
ಗುತ್ತಿಗಾರು ಪೇಟೆಗೆ ಬಂದಾಗ ಲೆಕ್ಕಾ ಚಾರ ಸ್ವಲ್ಪ ಬೇರಾಯಿತು. “ಮಂಡ್ಯ ರಾಜ ಕಾರಣ ಅಂತೂ ಸಖತ್‌ ಮನೋರಂಜನೆ ಕೊಡುತ್ತಿದೆ. ಟಿ.ವಿ., ಪೇಪರ್‌ನಲ್ಲಿ ದಿನವೂ ಗಮನಿ ಸುತ್ತೇನೆ. ಯಾರು ಗೆಲ್ಲಬಹುದು ಅಂತಾ ಐಡಿಯಾ ಇದೆಯಾ?’ ಎಂದು ನಮ್ಮನ್ನೇ ಪ್ರಶ್ನಿಸಿ ದರು ಯುವ ಮತದಾರ ರಾಘವೇಂದ್ರ ಬಿ.

Advertisement

ಗುತ್ತಿಗಾರಿನ ಬಳಿಯ ಗೂಡಂಗಡಿಯಲ್ಲಿ ಚಹಾ ಹೀರುತ್ತಿದ್ದ ಕಾರ್ಮಿಕರೊಬ್ಬರು (ಹೆಸರು ಬೇಡ ಸ್ವಾಮಿ ಅಂದ್ರು), “ಬೆಳಗ್ಗೆ 8ಕ್ಕೆ ಕೂಲಿ ಕೆಲಸಕ್ಕೆ ಹೊರಟರೆ ಮರಳುವಾಗ ರಾತ್ರಿ 8 ಗಂಟೆ ಆಗಿರುತ್ತೆ. ಮನೆಯಲ್ಲಿ ಟಿ.ವಿ. ಇಲ್ಲ, ಪೇಪರ್‌ ಬರಲ್ಲ. ರಾಜಕೀಯದ ಬಗ್ಗೆ ಆಸಕ್ತಿಯೂ ಇಲ್ಲ. ವೋಟು ತಪ್ಪಿಸೋಲ್ಲ’ ಎಂದು ಕಡ್ಡಿ ಮುರಿದಂತೆ ಹೇಳಿದರು.

ಅವರಿಬ್ಬರ ಚರ್ಚೆ, ಉತ್ತರ
ಸೋಣಂಗೇರಿ ಬಳಿ ನಿಂತಿದ್ದ ಧಾರವಾಡ ಮೂಲದ ಇಬ್ಬರು ಕಾರ್ಮಿಕ ರನ್ನು ವೋಟು ಹವಾ ಹೇಗಿದೆ ಎಂದು ಕೇಳಿದ್ದಕ್ಕೆ ಪರಸ್ಪರ ಚಾಯ್‌ ಪೆ ಚರ್ಚಾದಲ್ಲಿ ತೊಡಗಿದರು. “ಯಂತ್ರದಲ್ಲಿ ನಾವು ಒಬ್ಬರಿಗೆ ಮತ ಹಾಕಿದರೆ ಮತ್ತೂಬ್ಬರಿಗೆ ಬೀಳುತ್ತೆ ಅಂತಾರೆ, ಹೌದೇ’ ಎಂದು ಮಲ್ಲಪ್ಪ ಪ್ರಶ್ನಿಸಿದರೆ, “ಇಲ್ಲ. ನಾನು ವೋಟು ಹಾಕಿದ ಸಾಹೇಬ್ರು ಕಳೆದ ಬಾರಿ ವಿನ್‌ ಆಗಿದ್ದರು’ ಎಂದವರು ಹನುಮಪ್ಪ.

ಪೈಚಾರು ಬಳಿಯ ಬೈಕ್‌ ಸವಾರ ಸಂತೋಷ್‌ ಯುವ ಮತದಾರ. “ವಯನಾಡಿನಲ್ಲಿ ರಾಹುಲ್‌ ಮತ್ತು ವಾರಾಣಸಿಯಲ್ಲಿ ಮೋದಿ ನಿಂತಿದ್ದಾರೆ. ಅವರಿಬ್ಬರದ್ದೂ ಪ್ರಧಾನಿ ಹುದ್ದೆ ಮೇಲೆ ಕಣ್ಣು. ಹಾಗಾಗಿ ಅವರ ಕ್ಷೇತ್ರದಲ್ಲೇ ನಾಗುತ್ತಿದೆ ಎಂಬುದೇ ಕುತೂಹಲ’ ಎಂದು ಮಾತು ಮುಗಿಸಿದರು.

“ಪಕ್ಷದ ನಾಯಕರು ಎರಡು ಸಲ ಮನೆಗೆ ಬಂದು ತಮ್ಮ ಸಾಧನೆಯ ಪತ್ರ ಕೊಟ್ಟಿದ್ದಾರೆ. ಎಲ್ಲವೂ ಕೋಟಿ ರೂ.ಗಳಲ್ಲಿ ಇದೆ. ಅದು ಎಲ್ಲಿ ಅನುಷ್ಠಾನ ಆಗಿದೆ ಅಂತ ಆ ದೇವರಿಗೇ ಗೊತ್ತು’ ಎಂದು ರಾಜಕೀಯ ಪಕ್ಷವೊಂದರ ಅಭ್ಯರ್ಥಿ ನೀಡಿದ ಭಿತ್ತಿಪತ್ರ ತಂಡದ ಕೈಗೆ ಇಟ್ಟವರು ಅಡಾRರಿನ ಬೋಳುಬೈಲು ಪ್ರಯಾಣಿಕರ ತಂಗುದಾಣದಲ್ಲಿ ನಿಂತಿದ್ದ ದರ್ಣಪ್ಪ.

ನಮ್ಮ ಸಮಸ್ಯೆ ನಮಗೆ
ಕಲ್ಮಡ್ಕ, ಬಾಳಿಲ, ಪಂಜ ಮೊದಲಾದ ಭಾಗಗಳಲ್ಲಿ ವಿದ್ಯುತ್‌ ಸಮಸ್ಯೆ ಸಿಕ್ಕಾಪಟ್ಟೆ ಇದೆ. ತೋಟ ಕರಟಿ ಹೋಗಿದೆ. ಈ ರಾಜಕೀಯ ಯಾರಿಗೆ ಬೇಕು, ಅದರ‌ ಉಸಾಬರಿಯೇ ಬೇಡ ಎಂಬಂತೆ ಮುಖ ತಿರುಗಿಸಿದವರು ಪಂಜದ ರಾಧಾಕೃಷ್ಣ. ಅಜ್ಜಾವರ, ಮಂಡೆಕೋಲು, ಆಲೆಟ್ಟಿ ಭಾಗದಲ್ಲಿ ಕಾಡಾನೆ ಹಾವಳಿಯಿಂದ ಕೃಷಿಗೆ ನಷ್ಟ ತಪ್ಪಿಲ್ಲ. ಶಾಶ್ವತ ಪರಿಹಾರ ಸಿಕ್ಕಿಲ್ಲ. ವೋಟು ಬರುತ್ತೆ, ಹೋಗುತ್ತೆ. ನಮ್ಮ ಸಮಸ್ಯೆ ಕಳೆಯೋಲ್ಲ ಎಂದು ಅಳಲು ತೋಡಿಕೊಂಡವರು ಬಾಲಕೃಷ್ಣ ಮತ್ತು ಗೆಳೆಯರು.

ಅರಂತೋಡು ಬಳಿ ಮಡಿಕೇರಿ ಬಸ್‌ಗೆ ಕಾಯುತ್ತಿದ್ದ ರಾಮಣ್ಣ ಅವರ ಮರುಪ್ರಶ್ನೆ ಹೀಗಿದೆ- ಹೊಸದಾಗಿ ಏನೂ ಹೇಳಬೇಕಿಲ್ಲ. ಹಳದಿ ರೋಗದಿಂದ ಅಡಿಕೆ ತೋಟ ಸರ್ವನಾಶ ಆಗಿದೆ. ಅದಕ್ಕೆ ನಯಾಪೈಸೆ ಪರಿಹಾರ ಸಿಕ್ಕಿಲ್ಲ. ವೋಟುಗೆ ಖರ್ಚು ಮಾಡುವ ಹಣದಲ್ಲಿ ಕೃಷಿ ನಷ್ಟ ಭರಿಸಬಹುದಲ್ವಾ? ಇರಬಹುದು ಎಂದುಕೊಂಡು ಮುಂದೆ ಸಾಗಿದೆವು.

ತಾಲೂಕಿನ ನಾನಾ ಭಾಗಗಳಲ್ಲಿ ದಕ್ಷಿಣ ಕನ್ನಡ ಕ್ಷೇತ್ರದ ಫಲಿತಾಂಶದ ಬಗೆಗಿನ ಕುತೂಹಲದಷ್ಟೇ ಮಂಡ್ಯ, ಹಾಸನ, ವಾರಾಣಸಿ, ವಯನಾಡು ಮೇಲೂ ಇದೆ. ಕಸ್ತೂರಿರಂಗನ್‌ ವರದಿ ಆತಂಕ, ಮೊಬೈಲ್‌ ನೆಟ್‌ವರ್ಕ್‌ ಸಮಸ್ಯೆಗಳೇ ದೊಡ್ಡ ತಲೆನೋವಿನ ಸಂಗತಿ ಅನ್ನುವ ಸುಬ್ರಹ್ಮಣ್ಯ, ಕೊಲ್ಲಮೊಗ್ರು, ಹರಿಹರ ಪಳ್ಳತ್ತಡ್ಕ ನಿವಾಸಿಗಳು, ಗೆದ್ದವರಿಂದ ಈ ಸಮಸ್ಯೆ ನೀಗುವ ಯಾವ ಭರವಸೆಯು ಉಳಿದಿಲ್ಲ ಅನ್ನುತ್ತಾರೆ. ಕಡಬದಲ್ಲಿÉ ಹೊಸ ತಾಲೂಕಿನ ಸಂಭ್ರಮವಿದ್ದರೂ ಮೂಲ ಸೌಕರ್ಯ ಬೇಕೆಂಬ ಬೇಡಿಕೆ ಕೇಳಿಬಂದಿತು. ಆದರೂ ರಾಷ್ಟ್ರೀಯ ಸಂಗತಿ ಗಳು ಸ್ಥಳೀಯ ಸಮಸ್ಯೆಗಳನ್ನು ಬದಿಗೆ ಸರಿಸಿರುವುದು ಸ್ಪಷ್ಟ,

ಮೋದಿ, ರಾಹುಲ್‌ ಬರ್ತಾರಾ?
ಕೇರಳ-ಕರ್ನಾಟಕ ಗಡಿ ಬಳಿಯ ನಿವಾಸಿ ಧನುಷ್‌ ಅವರು ಗಡಿ ಬಳಿಯ ಚುನಾವಣ ಹವಾದ ಅರಿವು ನೀಡಿದರು. ನಾವು ಕೇರಳ, ಪುತ್ತೂರು ಗಡಿ ಪ್ರದೇಶದಲ್ಲಿದ್ದೇವೆ. ಜಾಲೂÕರು ಬಳಿ ಚೆಕ್‌ಪೋಸ್ಟ್‌ ಇದೆ. ಪ್ರತಿ ನಿತ್ಯ ವಾಹನ ತಪಾಸಣೆ ಮಾಡಲಾಗುತ್ತಿದೆ. ಆದರೂ ಇಲ್ಲಿ ಹಣ ಹಂಚಿಕೆ ಸ್ವಲ್ಪ ಕಡಿಮೆ. ಆದರೆ ಘಟ್ಟ ಪ್ರದೇಶದಲ್ಲಿ ಕೋಟಿ ಕೋಟಿ ಹಣದ ವ್ಯವಹಾರ ನಡೆಯುತ್ತದೆ. ಅಲ್ಲಿ ಚೆಕ್‌ಪೋಸ್ಟ್‌ ಇಲ್ವಾ? ಎಂದು ಕೇಳಿದರು.
ಸುಳ್ಯಕ್ಕೆ ಮೋದಿ, ರಾಹುಲ್‌, ರೆಡ್ಡಿ ಬ್ರದರ್ ಬರ್ತಾರಾ? ಎಂದು ಕೇಳಿದವರು ಟೆಕ್ಸ್‌ ಟೈಲ್ಸ್‌ ವೊಂದರ ಮಾಲಕರು.

  • ಕಿರಣ್‌ ಪ್ರಸಾದ್‌ ಕುಂಡಡ್ಕ
Advertisement

Udayavani is now on Telegram. Click here to join our channel and stay updated with the latest news.

Next