ತಿರುವನಂತಪುರಂ: ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕ ರಾಹುಲ್ ಗಾಂಧಿ ಅವರು ಲೋಕಸಭೆಗೆ ಸ್ಪರ್ಧಿಸುವ ಕೇರಳದ ವಯನಾಡ್ ನ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಿಜೆಪಿಗೆ ಸೇರ್ಪಡೆಯಾಗಿ ಅಚ್ಚರಿ ಮೂಡಿಸಿದ್ದಾರೆ.
ವಯನಾಡ್ ಜಿಲ್ಲಾ ಕಾಂಗ್ರೆಸ್ ಸಮಿತಿ (ಡಿಸಿಸಿ) ಪ್ರಧಾನ ಕಾರ್ಯದರ್ಶಿ ಪಿಎಂ ಸುಧಾಕರನ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಾರೆ. ಇದು ಕಾಂಗ್ರೆಸ್ ಗೆ ದೊಡ್ಡ ಹಿನ್ನಡೆಯಾಗಿದೆ.
ಕಲ್ಪೆಟ್ಟಾದಲ್ಲಿರುವ ಚುನಾವಣಾ ಸಮಿತಿ ಕಚೇರಿಗೆ ತೆರಳಿ ಮಾತನಾಡಿದ ಸುಧಾಕರನ್, “ಲೋಕಸಭೆ ಚುನಾವಣೆಯಲ್ಲಿ ವಯನಾಡಿನಿಂದ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರಿಗೆ ಯಾರ ಕೈಗೂ ಸಿಗುವುದಿಲ್ಲ, ಸಾಮಾನ್ಯ ಜನರಿಗೆ ಸಿಗುವುದಿಲ್ಲ” ಎಂದು ಆರೋಪಿಸಿದರು.
“ನಾನು ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಅಭಿವೃದ್ಧಿಯ ರಾಜಕಾರಣದ ಅಭಿಮಾನಿ ಆಗಿರುವುದರಿಂದ ನಾನು ಬಿಜೆಪಿಗೆ ಸೇರುತ್ತಿದ್ದೇನೆ. ಬಿಜೆಪಿ ಇಂದಿನ ಸಮಾಜದಲ್ಲಿ ಹೆಚ್ಚು ಪ್ರಸ್ತುತವಾಗಿರುವ ಪಕ್ಷವಾಗಿದೆ, ಪ್ರಧಾನಿ ಮೋದಿಯವರ ಅಭಿವೃದ್ಧಿ ಯೋಜನೆಗಳು ಅನುಷ್ಠಾನಗೊಳ್ಳಲು ಕೆ. ಸುರೇಂದ್ರನ್ ಗೆಲ್ಲಬೇಕು. ವಯನಾಡ್‌ನಿಂದ ಸಂಸದರಾಗಿ ಆಯ್ಕೆಯಾಗ ಬೇಕು, ಆ ನಿಟ್ಟಿನಲ್ಲಿ ನಾನು ಶ್ರಮಿಸುತ್ತೇನೆ” ಎಂದು ಸುಧಾಕರನ್ ಹೇಳಿದ್ದಾರೆ.
ನಿವೃತ್ತ ಫಾರೆಸ್ಟ್ ರೇಂಜ್ ಆಫೀಸರ್ ಶಶಿ ಕುಮಾರ್ ಮತ್ತು ಸಿವಿಲ್ ಇಂಜಿನಿಯರ್ ಪ್ರಜೀಶ್ ಅವರು ಕೂಡಾ ಇದೇ ಸಂದರ್ಭದಲ್ಲಿ ಬಿಜೆಪಿ ಸೇರ್ಪಡೆಯಾದರು.