Advertisement

WayanadLandslide; ಮನೆಯವರ ಪ್ರಾಣ ಕಾಪಾಡಿ ಪ್ರವಾಹದಲ್ಲಿ ಕೊಚ್ಚಿಹೋದ ಹಸು…!

09:45 PM Jul 30, 2024 | Team Udayavani |

ಚಾಮರಾಜನಗರ: ಹಸುವೊಂದು ಅಂಬಾ ಎಂದು ಅರಚಿಕೊಂಡು ಮನೆಯಲ್ಲಿದ್ದವರನ್ನು ರಕ್ಷಿಸಿ ತಾನು ನೀರಿನಲ್ಲಿ ಕೊಚ್ಚಿಕೊಂಡು ಹೋದ ಹೃದಯ ವಿದ್ರಾವಕ ಘಟನೆ ಕೇರಳ ವಯನಾಡು ಜಿಲ್ಲೆ ಗುಡ್ಡ ಕುಸಿತ ಪ್ರಕರಣದಲ್ಲಿ ನಡೆದಿದ್ದು, ಅಲ್ಲಿ ಪಾರಾದವರು ಚಾಮರಾಜನಗರ ಪಟ್ಟಣದ ಉಪ್ಪಾರ ಬೀದಿಯವರ ಹತ್ತಿರದ ಸಂಬಂಧಿಗಳಾಗಿದ್ದಾರೆ.

Advertisement

ಚಾಮರಾಜನಗರ ಪಟ್ಟಣದ ಉಪ್ಪಾರ ಬೀದಿಯ ಲಕ್ಷ್ಮಮ್ಮ ಅವರು ವಯನಾಡು ಜಿಲ್ಲೆಯ ಮೇಪ್ಪಾಡಿಯ ಕೃಷ್ಣಾ ಎಂಬುವವರನ್ನು ಮದುವೆಯಾಗಿದ್ದಾರೆ. ಲಕ್ಷ್ಮಮ್ಮ ಅವರ ಮಗಳು ಪ್ರವೀದಾ ಅವರು ಮೇಪ್ಪಾಡಿಯಿಂದ 4 ಕಿ.ಮೀ. ದೂರದ  ಚೂರಲ್‌ಮಲಾದ ವಿನೋದ್ ಅವರನ್ನು ವಿವಾಹವಾಗಿದ್ದಾರೆ.

ಹೆರಿಗೆಗೆಂದು ಮೆಪ್ಪಾಡಿಯಲ್ಲಿನ ತಾಯಿ ಮನೆಗೆ ಪ್ರವೀದಾ ಬಂದಿದ್ದರು. ಪ್ರವೀದಾ ಪತಿ ವಿನೋದ್ ಚೂರಲ್‌ಮಲಾದಲ್ಲೇ ಇದ್ದರು. ಸೋಮವಾರ ಮಧ್ಯರಾತ್ರಿ ವಿನೋದ್ ಅವರ ಕೊಟ್ಟಿಗೆಯಲ್ಲಿದ್ದ ಹಸು ಒಂದೇ ಸಮನೆ ಅರಚಿಕೊಂಡಿದೆ. ಆಗ ನಿದ್ದೆಯಿಂದ ಎಚ್ಚರಗೊಂಡ ವಿನೋದ್ ಕೊಟ್ಟಿಗೆಗೆ ಹೋಗಿ ನೋಡಿದ್ದಾರೆ. ಕೊಟ್ಟಿಗೆಗೆ ನೀರು ತುಂಬಿಕೊಳ್ಳುತ್ತಿರುವುದನ್ನು ನೋಡಿದ ವಿನೋದ್ ತಕ್ಷಣ ತಮ್ಮ ಕುಟುಂಬದವರನ್ನು ಎತ್ತರದ ಗುಡ್ಡ ಕ್ಕೆ ಕರೆದೊಯ್ದು ಅಪಾಯದಿಂದ ಪಾರಾಗಿದ್ಧಾರೆ. ಈ ಸಂದರ್ಭದಲ್ಲಿ ಹಸು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ.

ಚೂರಲ್‌ಮಲಾದಿಂದ ನಾಲ್ಕು ಕಿ.ಮೀ. ದೂರದ ಮೆಪ್ಪಾಡಿಯಲ್ಲಿದ್ದ ಪ್ರವೀದಾ ಈ ಘಟನೆಯ ಬಳಿಕ ತನ್ನ ತಂದೆ ತಾಯಿಯೊಡನೆ ತಾಯಿಯ ಊರಾದ ಚಾಮರಾಜನಗರಕ್ಕೆ ಮರಳಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಪ್ರವೀದಾ, ಗುಡ್ಡದಲ್ಲಿ ಸಿಲುಕಿರುವ ತಮ್ಮ ಪತಿಯನ್ನು ರಕ್ಷಿಸಿ ಕರೆತರಬೇಕು ಎಂದು ಮನವಿ ಮಾಡಿದರು. ವಿನೋದ್ ತಮ್ಮ ಜೊತೆ ಫೋನ್ ಸಂಪರ್ಕದಲ್ಲಿದ್ದಾರೆ. ಆ ಗುಡ್ಡದಲ್ಲಿ ವಿನೋದ್ ಅವರ ಜೊತೆ ಇನ್ನೂ ಹಲವಾರು ಜನರಿದ್ದಾರೆಂದು ತಿಳಿಸಿದ್ದಾರೆ. ಗುಡ್ಡ ಕುಸಿತವಾದ ಚೂರಲ್‌ಮಲಾದಲ್ಲಿ ಸಾವಿರಾರು ಜನ ವಾಸವಿದ್ದರು ಎಂದು ಪ್ರವೀದಾ ತಿಳಿಸಿದರು.

ಇದನ್ನೂ ಓದಿ:Wayanad landslides; ಪ್ರಕೃತಿಯ ಮುನಿಸಿಗೆ ಒಂದು ಪಟ್ಟಣವೇ ಕೊಚ್ಚಿ ಹೋಗಿದೆ…

ದಂಪತಿಗಳಿಬ್ಬರ ರಕ್ಷಣೆ- ಇನ್ನೊಂದು ಜೋಡಿ ಕಾಣೆ

ಚೂರಲ್‌ಮಲಾದಲ್ಲಿ ನಡೆದ ಗುಡ್ಡ ಕುಸಿತ ಪ್ರಕರಣದಲ್ಲಿ ನಗರ ಮೂಲದ ದಂಪತಿಯನ್ನು ರಕ್ಷಿಸಲಾಗಿದ್ದು, ತಾಲೂಕಿನ ಇರಸವಾಡಿ ಗ್ರಾಮದ ದಂಪತಿ ಕಾಣೆಯಾಗಿದ್ದಾರೆ.

ನಗರದ ಉಪ್ಪಾರ ಬೀದಿಯ ನಿವಾಸಿಗಳಾಗಿದ್ದು, ಚೂರಲ್‌ಮಲಾದಲ್ಲಿ ಉದ್ಯೋಗಕ್ಕೆಂದು ವಲಸೆ ಹೋಗಿದ್ದ ಮಹದೇವಸ್ವಾಮಿ ಮತ್ತು ಸುಜಾತಾ ದಂಪತಿಯನ್ನು ಎನ್‌ಡಿಆರ್‌ಎಫ್ ತಂಡ ರಕ್ಷಿಸಿದೆ. ಇಬ್ಬರನ್ನೂ ಮೇಪ್ಪಾಡಿಯ ಶಾಲೆಯಲ್ಲಿ ತೆರೆಯಲಾಗಿರುವ ಶಿಬಿರಕ್ಕೆ ಕಳುಹಿಸಲಾಗಿದೆ. ಈ ವಿಷಯನ್ನು ಮಹದೇವಸ್ವಾಮಿ ಬಂಧುಗಳು ತಿಳಿಸಿದ್ದಾರೆ.

ಇಬ್ಬರು ದಂಪತಿ ಕಾಣೆ

ಘಟನೆಯಲ್ಲಿ ತಾಲೂಕಿನ ಇರಸವಾಡಿ ಮೂಲದ, ವಯನಾಡು ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ವಾಸವಿದ್ದ ರಾಜೇಂದ್ರ (55) ಹಾಗೂ ರತ್ನಮ್ಮ (45) ಕಾಣೆಯಾಗಿದ್ದಾರೆಂದು ತಿಳಿದುಬಂದಿದೆ. ಈ ದಂಪತಿ ಕೆಲವು ವರ್ಷಗಳ ಹಿಂದೆ ನಾಗವಳ್ಳಿಯಲ್ಲಿ ಪೆಟ್ಟಿಗೆ ಅಂಗಡಿ ಇಟ್ಟುಕೊಂಡಿದ್ದರು. ಕೆಲಸಕ್ಕಾಗಿ ಕೇರಳಕ್ಕೆ ವಲಸೆ ಹೋಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next