ನವದೆಹಲಿ: ಕೊರೊನಾ ವೈರಸ್ ನಿಂದಾಗಿ ನಲುಗಿ ಹೋಗಿರುವ ಆರ್ಥಿಕತೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಘೋಷಿಸಿರುವ ಕ್ರಮಗಳು ಹಣದ ಹರಿವು ಹೆಚ್ಚುವಂತೆ ಮಾಡುವುದಲ್ಲದೆ, ಉದ್ಯಮಿಗಳ ಸಬಲೀಕರಣಕ್ಕೆ ದಾರಿ ಮಾಡಿಕೊಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ಕೊರೊನಾ ದಿಂದಾಗಿ ಕೈಗಾರಿಕೆಗಳು ಹಾಗೂ ಸೂಕ್ಷ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳು ಭಾರೀ ಸಂಕಷ್ಟ ಅನುಭವಿಸಿವೆ. ಈಗ ಸರ್ಕಾರ ಕೈಗೊಂಡಿರುವ ಕ್ರಮಗಳಿಂದಾಗಿ ಹಣದ ಹರಿವು ಹೆಚ್ಚುತ್ತದೆ, ಉದ್ಯಮಿಗಳು ಸಬಲರಾಗುತ್ತಾರೆ ಮತ್ತು ಅವರ ಸ್ಪರ್ಧಾತ್ಮಕತೆಗೆ ಬಲ ಬರುತ್ತದೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
3 ಕೋಟಿ ಮಂದಿಗೆ ಅನುಕೂಲ: ಯೋಗಿ
ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೂ ದೇಶದ ಆರ್ಥಿಕತೆಗೆ ಉತ್ತೇಜನ ನೀಡಲು ಘೋಷಿಸಲಾದ 20 ಲಕ್ಷ ಕೋಟಿ ರೂ. ಗಳ ಪ್ಯಾಕೇಜ್ ಅನ್ನು ಸ್ವಾಗತಿಸಿದ್ದಾರೆ. ನಮ್ಮ ರಾಜ್ಯದ ಎಂಎಸ್ ಎಂಇ ವಲಯದಲ್ಲಿನ ಸುಮಾರು ಮೂರು ಕೋಟಿ ಜನರಿಗೆ ವಿತ್ತ ಸಚಿವೆ ನಿರ್ಮಲಾ ಘೋಷಿಸಿರುವ ಕ್ರಮಗಳಿಂದ ಅನುಕೂಲವಾಗಲಿದೆ ಎಂದಿದ್ದಾರೆ. ಜತೆಗೆ, ಎಂಎಸ್‌ಎಂಇ ವಲಯವನ್ನು ಗಮನದಲ್ಲಿಟ್ಟುಕೊಂಡು, ಉತ್ತರಪ್ರದೇಶ ಸರ್ಕಾರವು ಗುರುವಾರದಿಂದ ಸಾಲ ಮೇಳವನ್ನು ಆಯೋಜಿಸಿದೆ.
ಅಲ್ಲಿ ಸುಮಾರು 36 ಸಾವಿರ ಉದ್ಯಮಿಗಳಿಗೆ 1,600- 2,000 ಕೋಟಿ ರೂ.ಗಳ ಸಾಲವನ್ನು ವಿತರಿಸಲಾಗುತ್ತದೆ ಎಂದೂ ಅವರು ಹೇಳಿದ್ದಾರೆ. ನಾನು ಪ್ರಧಾನಿ ಮೋದಿ ಹಾಗೂ ಸಚಿವೆ ನಿರ್ಮಲಾರಿಗೆ ಧನ್ಯವಾದ ಹೇಳಬಯಸುತ್ತೇನೆ. ಪ್ರಸ್ತುತ, ಅತಿ ಹೆಚ್ಚು ಎಂಎಸ್‌ಎಂಇ ಗಳು ಇರುವುದು ಉತ್ತರಪ್ರದೇಶದಲ್ಲಿ. ಇಲ್ಲಿನ ಮೂರು ಕೋಟಿ ಜನರು ನೇರವಾಗಿ ಹಾಗೂ ಪರೋಕ್ಷವಾಗಿ ಈ ವಲಯದೊಂದಿಗೆ ಸಂಬಂಧ ಹೊಂದಿದ್ದಾರೆ. ಈಗ ಘೋಷಿಸಿರುವ ಪ್ಯಾಕೇಜ್ ಅವರಿಗೆ ಬಲ ತುಂಬಿದೆ ಎಂದೂ ಸಿಎಂ ಆದಿತ್ಯನಾಥ್ ಹೇಳಿದ್ದಾರೆ.