Advertisement

ಮೋದಿಗಾಗಿ ಶ್ರೀಶೈಲಕ್ಕೆ ಪಾದಯಾತ್ರೆ

09:39 PM Mar 23, 2019 | Team Udayavani |

ಕಲಬುರಗಿ: ಜನತೆ ತಮ್ಮ ಕಷ್ಟ, ಕಾರ್ಪಣ್ಯಗಳನ್ನು ನಿವಾರಿಸಪ್ಪ ದೇವರೇ ಎಂದು ಹರಕೆ ಹೊತ್ತುಕೊಳ್ಳುವುದು ಸಾಮಾನ್ಯ. ಆದರೆ, ಜಿಲ್ಲೆಯ ಜೇವರ್ಗಿ ತಾಲೂಕಿನ ನಾಲ್ವರು ಯುವಕರು ನರೇಂದ್ರ ಮೋದಿ “ಮತ್ತೂಮ್ಮೆ ಪ್ರಧಾನಿ’ ಆಗಬೇಕೆಂಬ ಹರಕೆ ಹೊತ್ತು ಆಂಧ್ರಪ್ರದೇಶದ ಶ್ರೀಶೈಲ ಮಲ್ಲಿಕಾರ್ಜುನನ ಮೊರೆ ಹೋಗಿದ್ದಾರೆ.

Advertisement

ಪ್ರಧಾನಿ ನರೇಂದ್ರ ಮೋದಿ ಅಭಿಮಾನಿಗಳಾದ ಜೇವರ್ಗಿ ತಾಲೂಕಿನ ಕಲ್ಲೂರು (ಬಿ) ಗ್ರಾಮದ ನಿಂಗು ಆಜಾದ್‌, ಸಿದ್ಧು ಭರತ್‌, ಬೈಲಪ್ಪ ಕಲ್ಲೂರು, ಮಲ್ಲಿಕಾರ್ಜುನ ಕಲ್ಲೂರು ಶ್ರೀ ಕ್ಷೇತ್ರ ಶ್ರೀಶೈಲಕ್ಕೆ ಪಾದಯಾತ್ರೆ ಹಮ್ಮಿಕೊಂಡವರು. ಮಾ.22 ರಂದು ಅಂದರೆ ಶುಕ್ರವಾರ ಬೆಳಗ್ಗೆ ತಮ್ಮ ಗ್ರಾಮದಿಂದ ನಾಲ್ವರು ಯುವಕರು ಪಾದಯಾತ್ರೆ ಹೊರಡುವ ಮೂಲಕ ಮೋದಿ ಅವರನ್ನು ಮತ್ತೂಮ್ಮೆ ಪ್ರಧಾನಿ ಮಾಡಪ್ಪ ಮಲ್ಲಯ್ಯ ಎಂದು ಹರಕೆ ಹೊತ್ತು ಶ್ರೀಶೈಲಕ್ಕೆ ಪ್ರಯಾಣ ಬೆಳೆಸಲಿದ್ದಾರೆ. 
 
ಚಕ್ರವರ್ತಿ ಸೂಲಿಬೆಲೆ ನೇತೃತ್ವದ ಯುವ ಬ್ರಿಗೇಡ್‌, ಟೀಂ ಮೋದಿ ಸಂಘಟನೆಯಲ್ಲಿ ಸಕ್ರಿಯವಾಗಿರುವ ಇವರು ಮೋದಿ ಬಗ್ಗೆ ಅಪಾರ ಅಭಿಮಾನ ಹೊಂದಿದ್ದಾರೆ. ನಾಲ್ವರು 21ರಿಂದ 23 ವಯಸ್ಸಿನ ಅಸುಪಾಸಿನವರಾಗಿದ್ದಾರೆ. ನಿಂಗು ಮತ್ತು ಸಿದ್ಧು ಬಿಎ ಪದವಿಧರರಾಗಿದ್ದರೆ, ಬೈಲಪ್ಪ , ಮಲ್ಲಿಕಾರ್ಜುನ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರತಿ ವರ್ಷ ಕಲ್ಲೂರು (ಬಿ) ಗ್ರಾಮದಿಂದ ಅನೇಕರು ಹರಕೆ ಹೊತ್ತು ಶ್ರೀಶೈಲಕ್ಕೆ ಪಾದಯಾತ್ರೆ ಕೈಗೊಳ್ಳುತ್ತಾರೆ. 

ಅದೇ ರೀತಿ ಈ ವರ್ಷವೂ ಅಂದಾಜು 40 ಮಂದಿ ಗ್ರಾಮಸ್ಥರು ಪಾದಯಾತ್ರೆ ಕೈಗೊಳ್ಳುತ್ತಿದ್ದಾರೆ. ಗ್ರಾಮಸ್ಥರೊಂದಿಗೆ ಈ ನಾಲ್ವರು ಯುವಕರು ನರೇಂದ್ರ ಮೋದಿ ಮತ್ತೆ ಪ್ರಧಾನಿ ಆಗಬೇಕೆಂಬ ಹರಕೆ ಹೊತ್ತು ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಲು ಮುಂದಾಗಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಐದು ವರ್ಷಗಳ ಕಾಲ ಯಾವುದೇ ಕಪ್ಪು ಚುಕ್ಕೆ ಇಲ್ಲದೇ ಆಳ್ವಿಕೆ ನಡೆಸಿ ಜಗತ್ತೇ ಭಾರತದತ್ತ ಮುಖ ಮಾಡುವಂತೆ ಮಾಡಿದ್ದಾರೆ. ಭವ್ಯ ಭಾರತ ನಿರ್ಮಾಣಕ್ಕೆ ಪ್ರಧಾನಿ ಮೋದಿ ಪಣ ತೊಟ್ಟಿದ್ದಾರೆ. ಇಡೀ
ವಿಶ್ವವೇ ಯೋಗ ದಿನ ಆಚರಿಸುವಂತೆ ಮಾಡಿದ ಮೋದಿ ಅದರ ಕೀರ್ತಿಯನ್ನು ದೇಶದ ಜನತೆಗೆ ಅರ್ಪಿಸಿದ್ದಾರೆ. ದೇಶವನ್ನು ಪ್ರಪಂಚದಲ್ಲಿ ಗೌರವ ಸ್ಥಾನದಿಂದ ನೋಡಲು ಮೋದಿ ಅವರೇ ಮತ್ತೂಮ್ಮೆ ಪ್ರಧಾನಿಯಾಗಬೇಕು ಎನ್ನುತ್ತಾರೆ ನಿಂಗು ಆಜಾದ್‌ ಮತ್ತು ಸಿದ್ಧು ಭರತ್‌.
 
ನಾವೆಲ್ಲರೂ ಇದೇ ಮೊದಲ ಬಾರಿಗೆ ದೂರದ ಶ್ರೀಶೈಲಕ್ಕೆ ಪಾದಯಾತ್ರೆಯಲ್ಲಿ ಹೊರಡಲು ತೀರ್ಮಾನಿಸಿದ್ದೇವೆ. ಪ್ರಸಕ್ತ
ಲೋಕಸಭೆ ಚುನಾವಣೆಯಲ್ಲೂ ಭರ್ಜರಿ ಬಹುಮತದೊಂದಿಗೆ ಮೋದಿ ಅವರು ಮತ್ತೂಮ್ಮೆ ಪ್ರಧಾನಿ ಆಗಬೇಕೆಂದು ಮಲ್ಲಿಕಾರ್ಜುನನಿಗೆ ವಿಶೇಷ ಪೂಜೆ ಮಾಡಿಸಿ ಬೇಡಿಕೊಳ್ಳುತ್ತೇವೆ. ದೇವರ ಕೃಪೆಯಿಂದ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗುತ್ತಾರೆ ಎನ್ನುವ ವಿಶ್ವಾಸ ನಮ್ಮದು ಎನ್ನುತ್ತಾರೆ ಯುವಕರು.

ಕಲ್ಲೂರು (ಬಿ) ಗ್ರಾಮದಿಂದ ಶ್ರೀಶೈಲ 400 ಕಿಮೀ ದೂರವಿದೆ. ಪಾದಯಾತ್ರೆ ಮೂಲಕ ತೆರಳಲು ಸುಮಾರು ಒಂಭತ್ತು ದಿನಗಳು ಬೇಕಾಗುತ್ತದೆ. ನಿತ್ಯ ಅಂದಾಜು 50 ಕಿಮೀ ಕ್ರಮಿಸಿದರೂ ಒಂಭತ್ತು ದಿನದಲ್ಲಿ ಶ್ರೀಶೈಲಕ್ಕೆ ತಲುಪುವ ವಿಶ್ವಾಸವಿದೆ. ಅಲ್ಲಿಗೆ ತಲುಪಿದ ನಂತರ ನಮ್ಮ ಮೆಚ್ಚಿನ ಮೋದಿ ಮತ್ತೆ ಪ್ರಧಾನಿಯಾಗಲಿ ಎಂದು ನಾವು ನಾಲ್ವರು ಮಲ್ಲಯ್ಯನಲ್ಲಿ ಪ್ರಾರ್ಥಿಸುತ್ತೇವೆ ಎಂದು ಅಭಿಮಾನದಿಂದ ನುಡಿಯುತ್ತಾರೆ. 

Advertisement

„ರಂಗಪ್ಪಗಧಾರ

Advertisement

Udayavani is now on Telegram. Click here to join our channel and stay updated with the latest news.

Next