Advertisement
ಜಿಲ್ಲೆಗೆ ಸೋಮವಾರ 28,000 ಲಸಿಕೆ ವಿತರಣೆಯ ಗುರಿ ನೀಡಲಾಗಿತ್ತು. ಜನರು ಮುಂಜಾನೆ 4 ಗಂಟೆಗೆ ಬ್ರಹ್ಮಾವರ, ಉಡುಪಿ, ಕಾಪು, ಕಾರ್ಕಳ, ಹೆಬ್ರಿ, ಕುಂದಾಪುರ, ಬೈಂದೂರು ತಾಲೂಕಿನ ಲಸಿಕಾ ಕೇಂದ್ರದ ಮುಂದೆ ಸರದಿ ಸಾಲಿನಲ್ಲಿ ನಿಂತು ಟೋಕನ್ ಪಡೆದುಕೊಳ್ಳುತ್ತಿರುವ ದೃಶ್ಯ ಕಂಡು ಬಂತು.
Related Articles
Advertisement
ರಾಜ್ಯದಲ್ಲಿ ಪ್ರಾರಂಭದಲ್ಲಿ 60 ವರ್ಷ ಮೇಲ್ಪಟ್ಟವರಿಗೆ ಲಸಿಕೆಯನ್ನು ವಿತರಿಸಲಾಗಿತ್ತು. ಅನಂತರ ಹಂತ ಹಂತವಾಗಿ 45 ವರ್ಷ ಮೇಲ್ಪಟ್ಟವರಿಗೆ ಹಾಗೂ ರಾಜ್ಯ, ಕೇಂದ್ರ ಗುರುತಿಸಿದ ಸುಮಾರು 56ಕ್ಕೂ ಅಧಿಕ ಆದ್ಯತಾ ಗುಂಪುಗಳಿಗೆ ವಿತರಣೆಯ ಜತೆಗೆ ಜುಲೈಯಲ್ಲಿ 18 ವರ್ಷ ಮೇಲ್ಪಟ್ಟ ಕಾಲೇಜು, ಡಿಪ್ಲೊಮಾ ವಿದ್ಯಾರ್ಥಿಗಳಿಗೆ ವಿತರಿಸಲಾಗಿದೆ. ಇದೀಗ ಸರಕಾರ ಈ ಎಲ್ಲ ಆದ್ಯತಾ ಗುಂಪುಗಳನ್ನು ಒಂದೇ ವರ್ಗಕ್ಕೆ ಸೇರ್ಪಡೆ ಮಾಡಿದ್ದು, ಜಿಲ್ಲೆಯಲ್ಲಿ ಇದೀಗ ಪ್ರಥಮ ಹಾಗೂ ದ್ವಿತೀಯ ಡೋಸ್ ನೀಡಲಾಗುತ್ತಿದೆ.
ಒಂದೇ ದಿನ 28,625 ಲಸಿಕೆ ವಿತರಣೆ:
ಸೋಮವಾರ ಜಿಲ್ಲೆಯ ಸರಕಾರಿ ಲಸಿಕಾ ಕೇಂದ್ರದಲ್ಲಿ ಒಟ್ಟು 28,625 ಮಂದಿ ಲಸಿಕೆ ವಿತರಿಸಲಾಗಿದೆ. 18-44ವರ್ಷದೊಳಗಿನವರಲ್ಲಿ 18,504 ಮಂದಿ ಮೊದಲ, 1927 ಎರಡನೇ ಡೋಸ್, 45 ವರ್ಷ ಮೇಲ್ಪಟ್ಟವರು 5,075 ಮಂದಿ ಮೊದಲ, 3,103 ಎರಡನೇ ಡೋಸ್, ಮುಂಚೂಣಿ/ ಆರೋಗ್ಯ ಕಾರ್ಯಕರ್ತರು 16 ಮಂದಿ ಎರಡನೇ ಡೋಸ್ ಸೇರಿದಂತೆ ಒಟ್ಟು 23,579 ಮಂದಿ ಮೊದಲ ಹಾಗೂ 5,046 ಎರಡನೇ ಡೋಸ್ ಪಡೆದುಕೊಂಡರು. ಒಟ್ಟು ಜಿಲ್ಲೆಯಾದ್ಯಂತ 28,625 ಮಂದಿ ಲಸಿಕೆ ಪಡೆದುಕೊಂಡಿದ್ದಾರೆ.
1.82 ಲಕ್ಷ ಜನರಿಗೆ ಲಸಿಕೆ ಪೂರ್ಣ:
ಜಿಲ್ಲೆಯಲ್ಲಿ 45 ವರ್ಷ ಮೇಲ್ಪಟ್ಟವರಲ್ಲಿ 3,16,996 ಮಂದಿ ಪ್ರಥಮ, 1,55,421 ಮಂದಿ ಎರಡನೇ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ. ಆರೋಗ್ಯ ಹಾಗೂ ಮುಂಚೂಣಿ ಕಾರ್ಯಕರ್ತರಲ್ಲಿ 31,642 ಮಂದಿ ಪ್ರಥಮ 23,660 ಮಂದಿ ಎರಡನೇ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ. 18ರಿಂದ 44 ವರ್ಷದೊಳಗಿನ 1,82,658 ಪ್ರಥಮ ಹಾಗೂ6297 ಮಂದಿ ಎರಡನೇ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ. ಜಿಲ್ಲೆಯಾದ್ಯಂತ ಒಟ್ಟು 5,31,296ಮಂದಿ ಪ್ರಥಮ ಹಾಗೂ 1,85,378 ಎರಡನೇ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ.
ದ್ವಿತೀಯ ಸ್ಥಾನ :
ಬೆಂಗಳೂರಿನ ಕರ್ನಾಟಕ ರಾಜ್ಯ ಕೋವಿಡ್ ವಾರ್ ರೂಮ್ ಜು. 30ರ ವರದಿಯಲ್ಲಿ ಕೋವಿಡ್ ಲಸಿಕೀಕರಣದಲ್ಲಿ ಬೆಂಗಳೂರು ನಗರ ಶೇ. 86.76 ಹಾಗೂ ಉಡುಪಿ ಜಿಲ್ಲೆಯಲ್ಲಿ ಶೇ. 62.55 ಸಾಧನೆ ಯೊಂದಿಗೆ ರಾಜ್ಯದಲ್ಲಿ ಕ್ರಮವಾಗಿ ಪ್ರಥಮ
ಹಾಗೂ ದ್ವಿತೀಯ ಸ್ಥಾನ ಪಡೆದುಕೊಂಡಿವೆ. ದ.ಕ. ಶೇ. 55.91, ಮೈಸೂರು ಶೇ. 55.80, ರಾಮನಗರ ಜಿಲ್ಲೆ ಶೇ. 53.80, ಕೊಡಗು ಶೇ. 50.49 ಸಾಧನೆಗಳೊಂದಿಗೆ ಮೂರ ರಿಂದ ಏಳನೇ ಸ್ಥಾನ ಗಳಿಸಿವೆ. ಹಾವೇರಿ ಜಿಲ್ಲೆ ಶೇ. 28.87 ಮಂದಿಗೆ ಲಸಿಕೆಯನ್ನು ನೀಡಿ ಕೊನೆಯ ಸ್ಥಾನದಲ್ಲಿದೆ.
150 ಡೋಸ್ ಲಭ್ಯ; 300ಕ್ಕೂ ಹೆಚ್ಚು ಜನ!
ಬ್ರಹ್ಮಾವರ: ಬೆಳಗ್ಗೆ 7ರಿಂದ ಟೋಕನ್ ವಿತರಣೆ ಎಂದು ಮಾಹಿತಿ ನೀಡಿದ್ದರೂ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದ ಎದುರು ಮುಂಜಾನೆ 4 ಗಂಟೆಗೇ ಜನರು ಸೇರಲಾರಂಭಿಸಿದ್ದರು. 150 ಡೋಸ್ ಲಭ್ಯವಿದ್ದರೆ, 300ಕ್ಕೂ ಹೆಚ್ಚು ಮಂದಿ ಕಾದಿದ್ದರು. ಹೆಚ್ಚು ಜನಸಾಂದ್ರತೆಯ ಪ್ರದೇಶಗಳಿಗೆ ಲಸಿಕೆ ಸಂಖ್ಯೆಯನ್ನು ಹೆಚ್ಚಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಜಿಲ್ಲೆಯಲ್ಲಿ ಸೋಮವಾರ 28,000 ಕೊವಿಶೀಲ್ಡ್ ಲಸಿಕೆ ವಿತರಣೆ ಗುರಿ ನೀಡಲಾಗಿದೆ. 7 ತಾಲೂಕಿನ ಎಲ್ಲ ಕೇಂದ್ರಗಳಿಗೆ ಹಂಚಲಾಗಿದೆ. 18 ವರ್ಷ ಮೇಲ್ಪಟ್ಟ ಎಲ್ಲ ವರ್ಗದವರಿಗೆ ಒಂದನೇ ಹಾಗೂ ಎರಡನೇ ಡೋಸ್ ಲಸಿಕೆ ವಿತರಣೆಯಾಗಿದೆ. 28,625 ಲಸಿಕೆ ವಿತರಿಸಲಾಗಿದೆ. – ಡಾ| ನಾಗಭೂಷಣ, ಡಾ| ಎಂ.ಜಿ. ರಾಮ, ಉಡುಪಿ ಡಿಎಚ್‌ಒ ಮತ್ತು ಕೋವಿಡ್ ಲಸಿಕಾಧಿಕಾರಿ