Advertisement

ಜಲಚರ,ಅರಣ್ಯ ಸಂಪತ್ತಿನ ಮಾರಣ ಹೋಮ!

06:00 AM Aug 28, 2018 | |

ಜೋಡುಪಾಲ: ಕೊಡಗಿನಲ್ಲಿ ಉಂಟಾದ ಪ್ರಾಕೃತಿಕ ವಿಕೋಪದಿಂದ ಸಂಪಾಜೆ, ಊರುಬೈಲು ಬಳಿ ನದಿ, ತೋಡುಗಳಲ್ಲಿ ಜಲಚರಗಳು ಸತ್ತು ಬಿದ್ದಿವೆ ಹಾಗೂ ಕಡಮಕಲ್ಲು ಅರಣ್ಯ ಭಾಗದಲ್ಲಿ ಅಪಾರ ಪ್ರಮಾಣದ ಸಸ್ಯ ಸಂಪತ್ತು ನಾಶವಾಗಿದೆ.

Advertisement

ಪ್ರಕೃತಿ ಮುನಿಸು ಮಾನವನ ವಾಸ ಸ್ಥಾನದ ಜತೆಗೆ ನದಿ, ತೋಡಿನ ಜಲಚರಗಳ ಮೇಲೂ ವಕ್ಕರಿಸಿದೆ. ಅದಕ್ಕೆ ಅಲ್ಲಲ್ಲಿ ಸತ್ತು ಬಿದ್ದಿರುವ ಮೀನು, ನದಿ ನೀರಲ್ಲಿ ಕೊಚ್ಚಿಕೊಂಡು ಬಂದಿರುವ ಅಪಾರ ಪ್ರಮಾಣದ ಮರಮುಟ್ಟುಗಳು ಉದಾಹರಣೆ. ಹಾವು, ಹಕ್ಕಿ, ಇತರೆ ಕಾಡು ಪ್ರಾಣಿಗಳ ಆವಾಸಗಳಿಗೂ ಕಂಟಕ ಒದಗಿತ್ತು.

ಆಮ್ಲಜನಕದ ಕೊರತೆ
ಕೆಸರು ಮಿಶ್ರಿತ ಮಣ್ಣು ನೀರಿನೊಂದಿಗೆ ಸೇರಿದ ಕಾರಣ ಮೀನು, ಆಮೆ ಮೊದಲಾದ ಜಲಚರಗಳಿಗೆ ಆಮ್ಲಜನಕದ ಕೊರತೆ ಉಂಟಾಗಿ ಅವು ಅಸುನೀಗಿರಬಹುದು. ಮೀನುಗಳ ಸಂತಾನೋತ್ಪತ್ತಿ ಕಾಲಘಟ್ಟ ಇದಾಗಿರುವ ಕಾರಣ ಅಪಾಯ ಹೆಚ್ಚು. ಅವುಗಳ ನಾಶಗೊಂಡು ಸಂಖ್ಯೆ ಇಳಿಮುಖಗೊಳ್ಳುವ ಸಾಧ್ಯತೆ ಇದೆ.

ಊರುಬೈಲು, ಸಂಪಾಜೆ, ಕಲ್ಲುಗುಂಡಿ ಪರಿಸರದಲ್ಲಿ ಹರಿಯುವ ತೋಡು, ನದಿಗಳು ಕೆಸರು ನೀರನ್ನು ಹೊತ್ತುಕೊಂಡು ಹರಿಯುತ್ತಿವೆ. ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ಪ್ರಮಾಣ ಕೊಂಚ ತಗ್ಗಿದೆ.ನೀರು ಪೂರ್ತಿ ತಿಳಿಯಾದಲ್ಲಿ ಮಾತ್ರ ಜಲಚರ ಸಾವು ನಿಯಂತ್ರಣಕ್ಕೆ ಬರಬಹುದು.

ಅರಣ್ಯ ಸಂಪತ್ತು ನಾಶ
ಕಡಮಕಲ್ಲು ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಭಾರೀ ಪ್ರಮಾಣದ ಗುಡ್ಡ ಕುಸಿತ ಉಂಟಾಗಿ ಬೆಳೆಬಾಳುವ ಮರಗಳು ನದಿ ನೀರಲ್ಲಿ ಕೊಚ್ಚಿಕೊಂಡು ಬಂದಿವೆ. ಅವುಗಳ ಮೌಲ್ಯವೇ ಕೋಟ್ಯಂತರ ರೂ. ದಾಟಬಹುದು.

Advertisement

ಅರಣ್ಯ ಇಲಾಖೆಗೆ ಇದನ್ನು ಅಂದಾಜಿಸಲು ಸಾಧ್ಯವಾಗಿಲ್ಲ. ಸೇತುವೆ, ಕಿಂಡಿ ಅಣೆಕಟ್ಟಿನ ಪಿಲ್ಲರ್‌ಗಳ ಬಳಿ ಬೃಹತ್‌ ಗಾತ್ರದ ಮರಗಳು ತುಂಬಿದ್ದು, ನಾಶದ ಪ್ರಮಾಣಕ್ಕೆ ಸಾಕ್ಷಿಯಂತಿವೆ.ಪಾಲಿ ಜಾತಿಗೆ ಸೇರಿದ ಮರ ಹಾಗೂ ವಿರಳವಾಗಿ ಕಾಣಸಿಗುವ ಅರಣ್ಯ ಜಾತಿಯ ಗಿಡ, ಮರಗಳು ಕೂಡ ಧರಾಶಾಯಿ ಆಗಿವೆ. ಆನೆ ಸೀಳಿದಂತೆ ಇರುವ ಮರಗಳು ಉಪಯೋಗಕ್ಕೆ ಬಾರದ ಸ್ಥಿತಿಯಲ್ಲಿವೆ. ಜೋಡುಪಾಲ, ಕಲ್ಮಕಾರು, ಕೊಯನಾಡು, ಕಲ್ಲುಗುಂಡಿ ಬಳಿಯ ನದಿ, ತೋಡುಗಳಲ್ಲಿ ಈಗಲೂ ಮರದ ರಾಶಿಗಳು ತುಂಬಿವೆ. 

ನಾಲ್ಕೈದು ದಿವಸಗಳ ಹಿಂದಿನವರೆಗೂ ನೀರಿನ ಜತೆ ಮರದ ದಿಮ್ಮಿಗಳು ಕೊಚ್ಚಿಕೊಂಡು ಬರುತ್ತಿದ್ದವು ಅನ್ನುತ್ತಾರೆ ಕೊಯನಾಡು ಬಳಿ ಸಿಕ್ಕ ಅಪ್ಪಯ್ಯ.

Advertisement

Udayavani is now on Telegram. Click here to join our channel and stay updated with the latest news.

Next