Advertisement

ತೊಡಿಕಾನ ದೇವರಗುಂಡಿ ಜಲಪಾತ

01:08 AM Jul 05, 2019 | mahesh |

ಅರಂತೋಡು: ತೊಡಿಕಾನ ದೇವರ ಗುಂಡಿ ಜಲಪಾತ ನೋಡಲು ಬಲು ಸುಂದರ ವಾಗಿದ್ದು, ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ತುಸು ದೂರದಿಂದಲೇ ಜಲಪಾತದ ಸೊಬ ಗನ್ನು ಆಸ್ವಾದಿಸಬೇಕಾಗಿದ್ದು, ನೀರಿಗಿಳಿದರೆ ಪ್ರಾಣಾಪಾಯ ಖಂಡಿತ.

Advertisement

ಈ ಹಿಂದೆ ನೀರಿಗಿಳಿದ ಕೆಲವು ಪ್ರವಾಸಿಗರು ನೀರಿನ ಸೆಳೆತಕ್ಕೆ ಸಿಲುಕಿ ಅಪಾಯ ತಂದು ಕೊಂಡಿದ್ದಾರೆ. ಹೀಗಾಗಿ, ಈಗ ಜಲಪಾತದ ತಳ ಭಾಗಕ್ಕೆ ಇಳಿಯುವುದನ್ನು ನಿಷೇಧಿಸಲಾಗಿದೆ.

ತೊಡಿಕಾನದಲ್ಲಿ ಸುಳ್ಯ ಸೀಮೆಯ ಅತೀಪುರಾತನವಾದ ಶ್ರೀ ಮಲ್ಲಿಕಾರ್ಜುನ ದೇವಾ ಲಯ ಇದೆ. ಇಲ್ಲಿಗೆ ನಿತ್ಯ ನೂರಾರು ಭಕ್ತರು, ಉತ್ಸವದ ದಿನಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಆಸ್ತಿಕರು ಹಾಗೂ ಪ್ರವಾಸಿಗಳು ಬರುತ್ತಾರೆ. ದೇವಾಲಯಕ್ಕೆ ಬರುವ ಚಾರಣಪ್ರಿಯರು ದೇವರ ಗುಂಡಿ ಜಲಪಾತದ ಸೊಬಗನ್ನು ಕಣ್ತುಂಬಿಕೊಳ್ಳಲು ಹೋಗುತ್ತಾರೆ. ಜಲಪಾತದ ನೀರಿಗೆ ಮೈಯೊಡ್ಡಿ ಸ್ನಾನ ಮಾಡುವುದಕ್ಕಾಗಿ ಹೊಂಡಕ್ಕೂ ಇಳಿಯುತ್ತಾರೆ. ಇದು ಅಪಾಯಕಾರಿ ಸಾಹಸವಾಗಿದೆ.

ಮಳೆಗಾಲದಲ್ಲಿ ಬಹುತೇಕ ಜಲಪಾತಗಳು ಜೀವ ತಳೆದು, ಬೇಸಗೆಯ ದಿನಗಳಲ್ಲಿ ಬರಿದಾಗುತ್ತವೆ.

ಆದರೆ, ತೊಡಿಕಾನ ಗ್ರಾಮದ ದ.ಕ. ಮತ್ತು ಕೊಡಗು ಜಿಲ್ಲೆಗಳ ಗಡಿಭಾಗದಲ್ಲಿರುವ ದೇವರ ಗುಂಡಿ ಜಲಪಾತ ಇದಕ್ಕೊಂದು ಅಪವಾದ. ಇದು ವರ್ಷಪೂರ್ತಿ ಪರಿಸರಪ್ರೇಮಿಗಳನ್ನು ಸಂತೋಷಗೊಳಿಸುತ್ತದೆ. ಬೇಸಗೆಯಲ್ಲಿ ನೀರಿನ ಪ್ರಮಾಣ ಕಡಿಮೆಯಾದರೂ ಜಲಪಾತದ ಸೊಬಗಿಗೆ ನಷ್ಟವೇನೂ ಆಗುವುದಿಲ್ಲ.

Advertisement

ಇಲ್ಲಿಗೆ ಬರುವ ದಾರಿಯೂ ಸುಲಭವಾಗಿದೆ. ಸುಳ್ಯದಿಂದ ತೊಡಿಕಾನಕ್ಕೆ ಖಾಸಗಿ ಬಸ್‌ ಸಂಚಾರವಿದೆ. ಬಸ್ಸಿನಲ್ಲಿ 40 ನಿಮಿಷ, ಸ್ವಂತ ವಾಹನವಿದ್ದರೆ ಕೇವಲ 30 ನಿಮಿಷ ಸಾಕು. ಸುಳ್ಯದಿಂದ 11 ಕಿ.ಮೀ. ದೂರ ಸುಳ್ಯ – ಮಡಿಕೇರಿ ರಾಜ್ಯ ರಸ್ತೆಯಲ್ಲಿ ಸಾಗಿದರೆ ಅರಂತೋಡು ಎಂಬ ಊರು ಸಿಗುತ್ತದೆ. ಬಲಭಾಗದಲ್ಲಿ ಶ್ರೀ ಮಲ್ಲಿಕಾರ್ಜುನ ದೇವಾಲಯದ ದ್ವಾರವಿದೆ. ಈ ದ್ವಾರದ ಮೂಲಕ 6 ಕಿ.ಮೀ. ಪ್ರಯಾಣಿಸಿದರೆ ತೊಡಿಕಾನದ ಮಲ್ಲಿಕಾರ್ಜುನ ದೇವಾಲಯ ಸಿಗುತ್ತದೆ.

ದೇವಾಲಯದ ಬಳಿಯಿಂದ ತೊಡಿಕಾನ – ಪಟ್ಟಿ-ಭಾಗಮಂಡಲ ಕಚ್ಚಾ ರಸ್ತೆಯಲ್ಲಿ ಸುಮಾರು 1.8 ಕಿ.ಮೀ. ಸಾಗಿದರೆ ಜಲಪಾತ ಕಾಣಸಿಗುತ್ತದೆ. ಮುಂದೆ ಸಾಗುತ್ತಿದಂತೆ ಇದೇ ಹೊಳೆಯ ಚಿಕ್ಕ ಪುಟ್ಟ ತೊರೆಗಳು ಮನಸನ್ನು ಪುಳಕಗೊಳಿಸುತ್ತವೆ. ಸುತ್ತಮುತ್ತಲ ಹಸುರು ಬೆಟ್ಟ-ಗುಡ್ಡಗಳು, ಅಡಿಕೆ, ತೆಂಗಿನ ತೋಟಗಳು ತಂಪಾದ ಗಾಳಿಗೆ ತೊನೆದಾಡುತ್ತ ತಂಪೆರೆಯುತ್ತವೆ. ಹಕ್ಕಿಗಳ ಇಂಚರ, ದುಂಬಿಗಳ ಝೇಂಕಾರ, ಕೋಗಿಲೆಗಳ ಗಾನ ಮನಸಿಗೆ ಮುದ ನೀಡುತ್ತವೆ. ಸ್ವಲ್ಪ ಮುಂದೆ ಸಾಗಿದರೆ ಜೇರುಂಡೆಗಳ ಸದ್ದು ಕೊಂಚ ಭಯ ಹುಟ್ಟಿಸುತ್ತದೆ. ಮಳೆಗಾಲದಲ್ಲಿ ಜಿಗಣೆ ಕಾಟವೂ ಇದೆ.ಜಲಪಾತವನ್ನು ನೋಡಿ, ಆದರೆ ನೀರಿಗಿಳಿಯಬೇಡಿ ಎಂದು ಸ್ಥಳೀಯರು ಮನವಿ ಮಾಡುತ್ತಿರುತ್ತಾರೆ.

ಫ‌ಲಕ ಅಳವಡಿಸಲಾಗಿದೆ
ದೇವರಗುಂಡಿ ಜಲಪಾತದ ಗುಂಡಿಗೆ ಇಳಿದರೆ ಅಪಾಯ ಇದೆ. ಈ ಕಾರಣದಿಂದ ಯಾರೂ ಜಲಪಾತದ ಬುಡಕ್ಕೆ ತೆರಳಬಾರದು. ಈ ಹಿಂದೆ ಅನೇಕರು ಪ್ರಾಣ ಕಳೆದುಕೊಂಡಿದ್ದರಿಂದ ಜಲಪಾತದ ಬಳಿ ಮುನ್ನೆಚ್ಚರಿಕೆ ಫ‌ಲಕವನ್ನೂ ಅಳವಡಿಸಲಾಗಿದೆ. ಭಕ್ತರು ನೀರಿಗಿಳಿಯದೆ ದೂರದಿಂದಲೇ ಜಲಪಾತದ ಸೌಂದರ್ಯವನ್ನು ಸವಿಯಲು ಯಾವ ಅಡ್ಡಿಯೂ ಇಲ್ಲ.
– ಆನಂದ ಕಲ್ಲಗದ್ದೆ ವ್ಯವಸ್ಥಾಪಕರು, ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಾಲಯ
ಚಿಕ್ಕದಾದ ಗುಂಡಿ

ಜಲಪಾತದ ತಳಭಾಗ ದೂರದಿಂದ ನೋಡುವಾಗ ಸಣ್ಣ ತೊರೆಯೊಂದರ ಗುಂಡಿಯಂತೆ ಭಾಸವಾಗುತ್ತದೆ. ಅದು ತುಂಬ ಕಿರಿದಾಗಿದೆ. ಆದರೆ, ಆಳ ಮಾತ್ರ ಅಳತೆಗೆ ನಿಲುಕದಷ್ಟಿದೆ. ಆಳದಲ್ಲಿ ನೀರಿನ ಸೆಳೆತವೂ ಇದ್ದು, ಇದಕ್ಕೆ ಸಿಲುಕಿ ಹಲವರು ಜೀವ ಕಳೆದುಕೊಂಡಿದ್ದಾರೆ ಎಂದು ಸ್ಥಳೀಯರು ವಿವರಿಸುತ್ತಾರೆ. ಇಲ್ಲಿ ಜಲಪಾತ ನೋಡಲೆಂದು ಬಂದ ನಾಲ್ಕು ಮಂದಿ ನೀರಿಗಿಳಿದು ಪ್ರಾಣ ಕಳೆದುಕೊಂಡಿದ್ದಾರೆ.

ತೇಜೇಶ್ವರ್‌ ಕುಂದಲ್ಪಾಡಿ

Advertisement

Udayavani is now on Telegram. Click here to join our channel and stay updated with the latest news.

Next