ಹುಬ್ಬಳ್ಳಿ: ಮಹಾರಾಷ್ಟ್ರದ ಜತೆ ನೀರಿಗೆ ನೀರು ಒಡಂಬಡಿಕೆ ಮುಂದೆ ಹಲವು ಸಮಸ್ಯೆ-ಸವಾಲು ಎದುರಾಗಿದ್ದು, ಮಹಾರಾಷ್ಟ್ರದ ಹೊಸ ವರಸೆಯಿಂದ ಒಡಂಬಡಿಕೆ ಉತ್ಸಾಹ ಕುಗ್ಗಿದೆ. ಕೊಯ್ನಾದಿಂದ ನೀರು ಬಿಡುಗಡೆ ನಿರೀಕ್ಷೆಯಾಗಿಯೇ ಉಳಿಯುವಂತೆ ಮಾಡಿದೆ.
ಕೃಷ್ಣಾ ನದಿ ಸಂಪೂರ್ಣ ಬತ್ತಿದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಕೊಯ್ನಾದಿಂದ ನೀರು ಪಡೆಯುವ ರಾಜ್ಯದ ಯತ್ನಕ್ಕೆ ಇದುವರೆಗೂ ಸ್ಪಷ್ಟ ಸ್ಪಂದನೆ ದೊರೆತಿಲ್ಲ. ‘ನೀರಿಗೆ ನೀರು’ ಒಡಂಬಡಿಕೆ ಕುರಿತ ಮಹಾರಾಷ್ಟ್ರದ ಪ್ರಸ್ತಾಪಕ್ಕೆ ರಾಜ್ಯ ಸಮ್ಮತಿಸಿದೆ. ಆದರೆ, ಮಹಾರಾಷ್ಟ್ರ ಸರ್ಕಾರ ಇದೀಗ ಕಳೆದ 2-3 ವರ್ಷಗಳ ಹಿಂದೆ ನೀಡಿದ ನೀರಿಗೆ ಬದಲಾಗಿ ಅಷ್ಟು ಪ್ರಮಾಣದ ನೀರು ನೀಡಿದರೆ, ಒಡಂಬಡಿಕೆ ಹಾಗೂ ಕೊಯ್ನಾದಿಂದ ನೀರು ನೀಡಿಕೆ ಕುರಿತ ಹೊಸ ವರಸೆ ಹೊಸ ಸಮಸ್ಯೆ ಸೃಷ್ಟಿಸುವಂತೆ ಮಾಡಿದೆ.
ಮಹಾರಾಷ್ಟ್ರದಿಂದ ಹಣ ನೀಡಿ ನೀರು ಪಡೆಯಲಾಗುತ್ತಿತ್ತು. ಇದೀಗ ಮಹಾರಾಷ್ಟ್ರ ತನಗೂ ನೀರಿನ ಸಮಸ್ಯೆ ಎದುರಾಗುತ್ತಿದ್ದು, ಹಣದ ಬದಲು ನೀರಿಗೆ ನೀರು ನೀಡಿಕೆ ಒಡಂಬಡಿಕೆ ಪ್ರಸ್ತಾಪ ಮುಂದಿಟ್ಟಿತ್ತು. ಇದಕ್ಕೆ ರಾಜ್ಯ ಸರ್ಕಾರ ಸಮ್ಮಿತಿ ಸಹ ಸೂಚಿಸಿದೆ. ಈ ಬಾರಿ ಮಳೆಯ ತೀವ್ರ ಕೊರತೆಯಿಂದ ಕೃಷ್ಣಾ ನದಿ ಪಾತ್ರದಲ್ಲಿ ನೀರಿನ ಹಾಹಾಕಾರ ಇದ್ದು, ಕೊಯ್ನಾದಿಂದ ನೀರು ನೀಡಿಕೆ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಪ್ರಸ್ತಾಪ ಸಲ್ಲಿಸಿತ್ತು. ಬಿಜೆಪಿ ನಿಯೋಗ ಮಹಾರಾಷ್ಟ್ರ ಸಿಎಂ ಫಡ್ನವೀಸ್ ಅವರನ್ನು ಭೇಟಿ ಮಾಡಿ ಮನವಿ ಮಾಡಿತ್ತು. ನೀರಿಗೆ ನೀರು ಒಡಂಬಡಿಕೆಗೆ ಜಲಸಂಪನ್ಮೂಲ ಸಚಿವರು ಹಾಗೂ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಯಿಂದ ಪತ್ರ ಬೇಡಿಕೆಯಂತೆ ರಾಜ್ಯ ಸರ್ಕಾರ ಪತ್ರ ರವಾನಿಸಿತ್ತಲ್ಲದೆ, ಒಡಂಬಡಿಕೆಗೆ ನಿಯಮಗಳಿಗೆ ಒಪ್ಪಿಗೆ ಸೂಚಿಸಿತ್ತು.
ನೀರಿಗೆ ನೀರು ಒಡಂಬಡಿಕೆಯಂತೆ ಮಹಾರಾಷ್ಟ್ರ ನೀಡುವ 4 ಟಿಎಂಸಿ ಅಡಿ ನೀರಿಗೆ ಬದಲಾಗಿ, ಕರ್ನಾಟಕ ತುಬಚಿ-ಬಬಲೇಶ್ವರ ಏತನೀರಾವರಿ ಯೋಜನೆಯಿಂದ ಮಹಾರಾಷ್ಟ್ರದ ಜತ್ತ್ ತಾಲೂಕು ಭಾಗಕ್ಕೆ 4 ಟಿಎಂಸಿ ಅಡಿ ನೀರು ನೀಡಬೇಕು ಎಂಬುದಾದಿತ್ತು. ಇದಕ್ಕೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿತ್ತು. ಒಡಂಬಡಿಕೆಗೆ ಎರಡು ರಾಜ್ಯಗಳು ಸಮ್ಮಿತಿಸಿದ್ದರಿಂದ ಕೊಯ್ನಾದಿಂದ ನೀರು ಬಿಡುಗಡೆ ಆಗಬಹುದು ಎಂಬ ನಿರೀಕ್ಷೆ ಇತ್ತಾದರೂ, ನೀರು ಬಿಡುಗಡೆ ಪೂರ್ವದಲ್ಲಿ ಒಡಂಬಡಿಕೆಗೆ ಸಹಿ ಆಗಬೇಕು. 2016ರಿಂದ ನೀಡಿದ ಸುಮಾರು 6.5 ಟಿಎಂಸಿ ಅಡಿಯಷ್ಟು ನೀರಿಗೆ ಅಷ್ಟೇ ಪ್ರಮಾಣದ ನೀರು ನೀಡಬೇಕೆಂಬ ಷರತ್ತಿಗೆ ಮಹಾರಾಷ್ಟ್ರ ಮುಂದಾಗಿದೆ ಎಂದು ಹೇಳಲಾಗುತ್ತಿದ್ದು, ಇದು ಹೊಸ ಸಮಸ್ಯೆ ಸೃಷ್ಟಿಸಿದ್ದರೆ, ಒಡಂಬಡಿಕೆಗೆ ಕೆಲವೊಂದು ಸವಾಲುಗಳು ಎದುರಾಗಿವೆ.
ನೀರಿಗೆ ನೀರು ನೀಡಿಕೆ ಒಡಂಬಡಿಕೆಗೆ ಎರಡು ರಾಜ್ಯಗಳು ಸಮ್ಮಿತಿಸಿವೆಯಾದರೂ, ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ನೀರು ನೀಡಲು ದೊಡ್ಡ ಸಮಸ್ಯೆ ಇಲ್ಲ. ಆದರೆ, ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ನೀರು ನೀಡಲು ಹಲವು ತಾಂತ್ರಿಕ ಸಮಸ್ಯೆಗಳು ಎದುರಾಗಿವೆ. ವಿಜಯಪುರ ಜಿಲ್ಲೆಯಲ್ಲಿನ ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆಯಿಂದ ಮಹಾರಾಷ್ಟ್ರದ ಜತ್ತ್ ತಾಲೂಕಿಗೆ 4 ಟಿಎಂಸಿ ನೀರು ನೀಡಬೇಕಾದರೆ, ತಿಕೋಟಾ ನೀರು ವಿಲೇವಾರಿ ಜಾಕ್‌ವೆಲ್ನಿಂದ ಜತ್ತ್ ತಾಲೂಕು ಗಡಿವರೆಗೆ ಸುಮಾರು 20 ಕಿಮೀ ಉದ್ದದ ಪೈಪ್‌ಲೈನ್ ಆಗಬೇಕು. ಇದಕ್ಕೆ ಅಂದಾಜು 200 ಕೋಟಿ ರೂ. ವೆಚ್ಚ ಆಗಬಹುದೆಂದು ಅಂದಾಜಿಸಲಾಗಿದ್ದು, ಈ ಕಾಮಗಾರಿ ಯಾರು ಮಾಡಬೇಕು. ಮಹಾರಾಷ್ಟ್ರದವರೇ ಮಾಡಿಕೊಳ್ಳಬೇಕೇ ಅಥವಾ ಎರಡೂ ರಾಜ್ಯಗಳು ಸಮಾನವಾಗಿ ಮಾಡಬೇಕೆ ಎಂಬ ಪ್ರಶ್ನೆ ಎದುರಾಗಿದೆ. ತನಗೆ ಬೇಕಾದ ನೀರು ಪಡೆಯಲು ಮಹಾರಾಷ್ಟ್ರ ಕಾಮಗಾರಿ ವೆಚ್ಚವನ್ನು ತಾನೇ ಭರಿಸಬೇಕಾಗಿದೆ. ಆದರೆ ಈ ವಿಚಾರವಾಗಿ ಇನ್ನೂ ಸ್ಪಷ್ಟತೆ ಬಂದಿಲ್ಲ. ಈ ಹಿಂದೆ ನೀಡಿದ ನೀರಿನ ಬಾಕಿ ಹಾಗೂ ಒಡಂಬಡಿಕೆಯಂತೆ 4 ಟಿಎಂಸಿ ಅಡಿಯಷ್ಟು ನೀರು ಸೇರಿ ಒಟ್ಟು 10.5 ಟಿಎಂಸಿ ಅಡಿಯಷ್ಟು ನೀರು ಕರ್ನಾಟಕದಿಂದ ಬರಬೇಕಾಗಿದೆ ಎಂಬ ಮಹಾರಾಷ್ಟ್ರ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳ ಅನಿಸಿಕೆ, ನೀರಿಲ್ಲದ ಸಂಕಷ್ಟ ಸ್ಥಿತಿಯಲ್ಲಿ ರಾಜ್ಯಕ್ಕೆ ಮತ್ತೂಂದು ಬರೆ ಎಳೆಯುವ ಸ್ಥಿತಿ ತಂದೊಡ್ಡಿದೆ. ಪಡೆದ ನೀರಿಗಾಗಿ ಈಗಾಗಲೇ ಸರಿಸುಮಾರು 35 ಕೋಟಿ ರೂ. ಹಣ ಪಾವತಿಸಲಾಗಿದೆ ಎಂಬುದು ರಾಜ್ಯದ ಜಲಸಂಪನ್ಮೂಲ ಇಲಾಖೆ ಅನಿಸಿಕೆ. ಒಡಂಬಡಿಕೆ ಕುರಿತ ಗೊಂದಲ ಮುಂದುವರಿದಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿ ಗೊಂದಲ ನಿವಾರಣೆ ಮಾಡಿ ನೀರು ಪಡೆಯಲು ಮುಂದಾಗಬೇಕಾದವರೇ ಸ್ವತಃ ಗೊಂದಲ, ಒತ್ತಡಕ್ಕೆ ಸಿಲುಕಿದ್ದಾರೆ.
•ಅಮರೇಗೌಡ ಗೋನವಾರ