Advertisement

ಟ್ಯಾಂಕರ್‌ನಲ್ಲಿ ನೀರು ಸಾಗಾಟ ಪರಿಹಾರ

08:33 PM May 06, 2019 | Team Udayavani |

ಪುಂಜಾಲಕಟ್ಟೆ: ಬಂಟ್ವಾಳ ತಾಲೂಕಿನ ಕಾವಳಪಡೂರು ಪಂಚಾಯತ್‌ ವ್ಯಾಪ್ತಿಯ ಕಾಡಬೆಟ್ಟು ಗ್ರಾಮದ ಗೋಕಲ್‌, ಬೊಗ್ರಮೇರು, ಗುರಿಕಂಡ, ಅಜ್ಜಿಮೇರು ಪರಿಸದಲ್ಲಿ ನೀರಿನ ಸಮಸ್ಯೆ ಉಂಟಾಗಿದ್ದು, ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಸೋಮವಾರ ಗ್ರಾಮ ಪಂಚಾಯತ್‌ಗೆ ಮನವಿಮಾಡಿದ್ದಾರೆ.

Advertisement

ಒಂದು ಸಾವಿರ ಲೀ. ನೀರಿಗೆ 350 ರೂ.
ಈ ಪರಿಸರದಲ್ಲಿ ಕುಡಿಯುವ ನೀರಿಗೂ ತತ್ವಾರ ಉಂಟಾಗಿದ್ದು, ಖಾಸಗಿಯವರಿಗೆ ಹಣ ತೆತ್ತು ನೀರು ಪಡೆದುಕೊಳ್ಳಲಾಗುತ್ತಿದೆ. ಒಂದು ಸಾವಿರ ಲೀ. ನೀರಿಗೆ 350 ರೂ. ಹಣ ನೀಡಲಾಗುತ್ತಿದೆ. ಕೂಲಿ ಕಾರ್ಮಿಕರಾಗಿದ್ದು, ಬಡ ವರ್ಗದವರಾದ ನಾವು ನೀರಿಗಾಗಿ ಇಷ್ಟು ದುಬಾರಿ ವೆಚ್ಚ ಮಾಡಲು ಅಸಾಧ್ಯವಾಗಿದ್ದು, ಇದರಿಂದ ಮಕ್ಕಳ, ವೃದ್ಧರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಇದು ಸ್ವಚ್ಛತೆಗೂ ಧಕ್ಕೆ ಉಂಟುಮಾಡಿದೆ. ಆದುದರಿಂದ ನಮಗೆ ನೀರಿನ ವ್ಯವಸ್ಥೆ ವ್ಯವಸ್ಥೆ ಮಾಡಿಕೊಡಬೇಕೆಂದು ಗ್ರಾಮಸ್ಥರು ಮನವಿಯಲ್ಲಿ ವಿವರಿಸಿದ್ದಾರೆ.

ಕಳೆದ 2 ದಶಕಗಳಿಂದ ನೀರಿನ ಸಮಸ್ಯೆ ಎದುರಿಸುತ್ತಿದ್ದು, ಸಂಬಂ ಧಿಸಿದ ಅಧಿಕಾರಿಗಳಿಗೆ, ಜನ ಪ್ರತಿನಿಧಿಗಳಿಗೆ ಮೌಖಿಕವಾಗಿ ಹಲವು ಬಾರಿ ದೂರು ನೀಡಿದ್ದರೂ ಅವರು ಗಮನ ಹರಿಸಿಲ್ಲ ಎಂದು ಆರೋಪಿಸಿರುವ ಗ್ರಾಮಸ್ಥರು, ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.

ಸಂತ್ರಸ್ಥರ ಮನವಿ ಸ್ವೀಕರಿಸಿದ ಗ್ರಾ.ಪಂ. ಅಧ್ಯಕ್ಷ ಪ್ರಮೋದ್‌ ಕುಮಾರ್‌ ರೈ ಅವರು ತಾಲೂಕು ಪಂಚಾಯತ್‌ ಕಾರ್ಯನಿರ್ವಹಣಾಧಿಕಾರಿ ಬಳಿ ಈ ಭಾಗದ ನೀರಿನ ಸಮಸ್ಯೆ ಬಗ್ಗೆ ದೂರವಾಣಿ ಮೂಲಕ ಮಾತನಾಡಿ ಗಮನ ಸೆಳೆದರು. ತಾ.ಪಂ. ಕಾರ್ಯನಿರ್ವಣಾಧಿಕಾರಿ ಅವರ ಸೂಚನೆಯಂತೆ ಖಾಸಗಿಯವರಿಂದ ಪ್ರತಿದಿನ 2-3 ಟ್ಯಾಂಕರ್‌ ನೀರು ಸರಬರಾಜು ನಡೆಸಲಾಗುವುದು ಎಂದು ಗ್ರಾಮಸ್ಥರಲ್ಲಿ ಅವರು ತಿಳಿಸಿದರು.

ಗ್ರಾಮಸ್ಥರಾದ ದಾಮೋದರ ಗೋಕಲ್‌, ದೇಜಪ್ಪ ಗೋಕಲ್‌, ಭೋಜ, ಅರುಣಾ ಆಚಾರ್ಯ, ಮೀನಾಕ್ಷಿ ಗುರಿಕಂಡ, ರವೀಶ್‌ ಆಚಾರ್ಯ, ಗೋಪಾಲ ಪೂಜಾರಿ ಬೊಗ್ರುಮೇರು ಮತ್ತಿತರರು ಉಪಸ್ಥಿತರಿದ್ದರು. ಈಗಾಗಲೆ ಇಲ್ಲಿ 2 ಕೊಳವೆ ಬಾವಿ ನಿರ್ಮಿಸಲಾಗಿದ್ದು, ವ್ಯರ್ಥವಾಗಿದೆ. ನೀರಿನ ಸಮಸ್ಯೆ ಬಗ್ಗೆ ಶಾಸಕರ ಗಮನಕ್ಕೂ ತರಲಾಗಿದ್ದು ಮತ್ತೂಂದು ಕೊಳವೆ ಬಾವಿ ನಿರ್ಮಿಸಲು ವ್ಯವಸ್ಥೆ ನಡೆಸಲಾಗುವುದು ಎಂದು ಅಧ್ಯಕ್ಷರು ತಿಳಿಸಿದ್ದಾರೆ.

Advertisement

ರಿಂಗ್‌ ಅಳವಡಿಕೆಗೆ ಅವಕಾಶ ಬೇಕು
ಈ ಭಾಗದ ಜನರಿಗೆ ಉದ್ಯೋಗ ಖಾತರಿ ಯೋಜನೆಯಲ್ಲಿ ಬಾವಿ ನಿರ್ಮಿಸಲು ಅವಕಾಶವಿದೆ. ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಂಡಲ್ಲಿ ಶಾಶ್ವತವಾಗಿ ನೀರಿನ ಸಮಸ್ಯೆ ದೂರಗೊಳಿಸಬಹುದು. ಉದ್ಯೋಗ ಖಾತರಿ ಯೋಜನೆಯಲ್ಲಿ ರಿಂಗ್‌ ಅಳವಡಿಕೆಗೆ ಈಗ ಅವಕಾಶವಿಲ್ಲದ ಕಾರಣ ಜನರು ಬಾವಿ ನಿರ್ಮಿಸಲು ಮುಂದೆ ಬರುತ್ತಿಲ್ಲ. ಉದ್ಯೋಗ ಖಾತರಿ ಯೋಜನೆಯಲ್ಲಿ ರಿಂಗ್‌ ಅಳವಡಿಸಲು ಅವಕಾಶ ನೀಡಬೇಕು.
-ಪ್ರಮೋದ್‌ ಕುಮಾರ್‌ ರೈ, ಅಧ್ಯಕ್ಷರು, ಕಾವಳಪಡೂರು ಗ್ರಾ.ಪಂ.

 ಬಾವಿ ತೋಡಲು ಅವಕಾಶ ಇದೆ
ಬೊಗ್ರುಮೇರು, ಗುರಿಕಂಡ ಪ್ರದೇಶದಲ್ಲಿ ನೀರಿನ ಸಮಸ್ಯೆ ಇದೆ. ಎತ್ತರ ಭಾಗವಾದುದರಿಂದ ನೀರು ಸರಬರಾಜು ಸಮರ್ಪಕವಾಗಿ ಸಾಧ್ಯವಾಗುತ್ತಿಲ್ಲ. ಈ ಭಾಗದಲ್ಲಿ 2 ಹೊಸ ಕೊಳವೆ ಬಾವಿ ಕೊರೆಸಲಾಗಿದ್ದು, ನಿಷ್ಪ್ರಯೋಜಕವಾಗಿದೆ. ಹಳೆಯ ಕೊಳವೆ ಬಾವಿಗೆ ಕ್ರೆಶಿಂಗ್‌ ಮಾಡಿದ್ದೇವೆ. ಟಾಸ್ಕ್ಪೋರ್ಸ್‌ನಲ್ಲಿ ಇನ್ನೊಂದು ಕೊಳವೆ ಬಾವಿ ನಿರ್ಮಿಸಲು ಒಪ್ಪಿಗೆ ದೊರಕಿದೆ. ಗ್ರಾಮಸ್ಥರಿಗೆ ಎನ್‌ಆರ್‌ಜಿಯಲ್ಲಿ ಬಾವಿ ತೋಡಲು ಅವಕಾಶ ಇದೆ. ಗ್ರಾಮಸ್ಥರಿಗೆ ಉತ್ಸಾಹ ಇದ್ದರೆ ಆ ಯೋಜನೆಯ ಸವಲತ್ತನ್ನು ಬಳಕೆ ಮಾಡಬಹುದು.
 -ಗಣೇಶ್‌ ಶೆಟ್ಟಿಗಾರ್‌, ಕಾರ್ಯದರ್ಶಿ, ಕಾವಳಪಡೂರು ಗ್ರಾಮ ಪಂಚಾಯತ್‌

 ಕೊಳವೆಬಾವಿಗೆ ಸ್ಥಳ ಪರೀಕ್ಷೆ
ಈ ಭಾಗದ ಜನರ ನೀರಿನ ಸಮಸ್ಯೆ ಗಮನಕ್ಕೆ ಬಂದಿದ್ದು, ಹೊಸ ಕೊಳವೆ ಬಾವಿ ನಿರ್ಮಾಣಕ್ಕೆ ಜಿ.ಪಂ. ಎಂಜಿನಿಯರಿಂಗ್‌ ಇಲಾಖೆ ಎಂಜಿನಿಯರ್‌ ಜತೆ ಮಾತುಕತೆ ನಡೆಸಲಾಗಿದ್ದು, ಇನ್ನರೆಡು ದಿನದಲ್ಲಿ ಹೊಸ ಕೊಳವೆಬಾವಿ ನಿರ್ಮಾಣಕ್ಕೆ ಸ್ಥಳ ಪರೀಕ್ಷೆ ನಡೆಸಲಾಗುವುದು.
– ಬಿ. ಪದ್ಮಶೇಖರ ಜೈನ್‌, ಜಿ.ಪಂ. ಸದಸ್ಯರು, ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next