Advertisement
ಈ ಬಾರಿ, ತುಂಬೆ ಡ್ಯಾಂನಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿ ನಗರದಲ್ಲಿ ಕುಡಿ ಯುವ ನೀರಿಗೆ ಸಮಸ್ಯೆ ಉಲ್ಬಣಿಸಿತ್ತು. ಹೀಗಾಗಿ ಕೈಗಾರಿಕೆಗಳಿಗೆ ಅವಶ್ಯ ನೀರನ್ನು ಪರ್ಯಾಯ ಮೂಲಗಳಿಂದ ಒದಗಿಸ ಬೇಕು ಎಂದು ಆಡಳಿತ ವ್ಯವಸ್ಥೆ ಚಿಂತನೆ ನಡೆಸುತ್ತಿತ್ತು. ಆದರೆ ಇದೀಗ ತುಂಬೆ ಡ್ಯಾಂನ ನೀರನ್ನು ಕೆನರಾ ಕೈಗಾರಿಕಾ ಪ್ರದೇಶಕ್ಕೆ ಹರಿಸಲು ಯೋಜನೆಯೊಂದನ್ನು ರೂಪಿಸಲಾಗುತ್ತಿದೆ.
ಈ ಕೈಗಾರಿಕಾ ಪ್ರದೇಶದಲ್ಲಿ ಸುಮಾರು 600 ಎಕ್ರೆಯಷ್ಟು ಭೂಮಿ ಕೆಐಎಡಿಬಿ ವಶದಲ್ಲಿದೆ. ಇದರಲ್ಲಿ 67.87 ಎಕ್ರೆ ಭೂಮಿಯನ್ನು ಹೊಸ ಜೈಲು ನಿರ್ಮಾಣಕ್ಕೆ ಮೀಸಲಿಡಲಾಗಿದೆ. ಉಳಿದ ಭೂಮಿ ಇನ್ನಷ್ಟೇ ಕೈಗಾರಿಕೆಗಳಿಗೆ ನೀಡಬೇಕಾಗಿದೆ. ಇದಕ್ಕೆ ಪೂರಕವಾಗಿ ಈ ಪ್ರದೇಶಕ್ಕೆ ನೀರು ಸರಬರಾಜಿಗಾಗಿ ನೇತ್ರಾವತಿ ನದಿಯಿಂದ ನೇರವಾಗಿ ಪೈಪ್‌ಲೈನ್ ಅಳವಡಿಸುವ ಬಗ್ಗೆ ಚಿಂತಿಸಲಾಗಿತ್ತು. ಆದರೆ ಇದು ದುಬಾರಿಯಾಗುವ ಕಾರಣದಿಂದ ಸದ್ಯದ ಮಾಹಿತಿ ಪ್ರಕಾರ, ಇನ್ಫೋಸಿಸ್ ಎಸ್‌ಇಝಡ್ ನೇತ್ರಾ ಕ್ಯಾಂಪಸ್‌ನಲ್ಲಿರುವ ನೀರು ಸಂಸ್ಕರಣಾ ಘಟಕಕ್ಕೆ ನೇತ್ರಾವತಿಯಿಂದ ಬಂದ ನೀರಿನಲ್ಲಿ ಒಂದಂಶವನ್ನು ಕೆನರಾ 1ನೇ ಹಂತ ಕೈಗಾರಿಕಾ ಪ್ರದೇಶದವರೆಗೆ ನೀರು ಸರಬರಾಜು ಮಾಡಲು ಕೆಐಎಡಿಬಿ ನಿರ್ಧರಿಸಿದೆ. ಇದಕ್ಕಾಗಿ 4 ಕೋ.ರೂ.ಗಳ ಯೋಜನೆಗೆ ಟೆಂಡರ್ ಆಹ್ವಾನಿಸಿದೆ. ಸದ್ಯಕ್ಕೆ ನೇತ್ರಾವತಿಯಿಂದ ಕೆನರಾ ಕೈಗಾರಿಕಾ ವ್ಯಾಪ್ತಿಗೆ ಅರ್ಧ ಎಂಜಿಡಿ ನೀರು ಬಳಸಲು ಉದ್ದೇಶಿಸಿಸಲಾಗಿದೆ. ಎಲ್ಲರಿಗೂ ನೇತ್ರಾವತಿಯೇ ಆಧಾರ
ತುಂಬೆ ಡ್ಯಾಂನಿಂದ ನಗರಕ್ಕೆ 160 ಎಂಎಲ್‌ಡಿ (ದಿನವೊಂದಕ್ಕೆ ಮಿಲಿಯ ಲೀಟರ್) ನೀರು ಪೂರೈಕೆಯಾಗುತ್ತಿದೆ. ಎಂಜಿಡಿ (ಮಿಲಿಯ ಗ್ಯಾಲನ್ಸ್) ಲೆಕ್ಕಾಚಾರದಲ್ಲಿ 160 ಎಂಎಲ್‌ಡಿ ಅಂದರೆ ಸುಮಾರು 35 ಎಂಜಿಡಿ. ತುಂಬೆ ಡ್ಯಾಂನಿಂದ ಎಂಸಿಎಫ್‌ಗೆ 2 ಎಂಜಿಡಿ ಹಾಗೂ ಎನ್‌ಎಂಪಿಟಿಗೆ 0.5 ಎಂಜಿಡಿ, ಇತರ ಕೈಗಾರಿಕೆಗಳಿಗೆ 1 ಎಂಜಿಡಿ ನೀರು ಪೂರೈಕೆಯಾಗುತ್ತಿದೆ. ಬಂಟ್ವಾಳ ಸಮೀಪವಿರುವ ಎಎಂಆರ್ ಡ್ಯಾಂನಿಂದ ಎಂಆರ್‌ಪಿಎಲ್‌ಗೆ 6 ಎಂಜಿಡಿ, ವಿಶೇಷ ಆರ್ಥಿಕ ವಲಯಕ್ಕೆ (ಎಸ್‌ಇಝೆಡ್) 8 ಎಂಜಿಡಿ ನೀರು ಪೂರೈಕೆಯಾಗುತ್ತದೆ. ಅಂದರೆ ಒಟ್ಟು ಸುಮಾರು 18 ಎಂಜಿಡಿಯಷ್ಟು ನೀರು ವಿವಿಧ ಕೈಗಾರಿಕೆಗಳಿಗೆ ತುಂಬೆ, ಎಎಂಆರ್ ಡ್ಯಾಂನಿಂದ ಪೂರೈಕೆಯಾಗುತ್ತಿದೆ. ಜತೆಗೆ, ಮಂಗಳೂರು ವಿಶ್ವವಿದ್ಯಾನಿಲಯ, ಇನ್ಫೋಸಿಸ್, ಮಡಿವಾಲಪಡು³ ಏತ ನೀರಾವರಿ ಸ್ಥಾವರ, ಸಜೀಪ ಮೂಡ, ಸಜಿಪ ಮುನ್ನೂರು ಏತ ನೀರಾವರಿ ಯೋಜನೆ, ಕರೋಪಾಡಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಬಂಟ್ವಾಳ ಪುರಸಭಾ ವ್ಯಾಪ್ತಿಗೆ ನೀರು ಸೇರಿದಂತೆ ವಿವಿಧ ಕಾರಣಗಳಿಂದ ನೇತ್ರಾವತಿ ನದಿಯನ್ನು ಅವಲಂಬಿಸಲಾಗುತ್ತಿದೆ.
Related Articles
ಮುಡಿಪು ಸಮೀಪ ಇರಾ-ಚೇಳೂರು-ಕುರ್ನಾಡು ಗ್ರಾ.ಪಂ. ವ್ಯಾಪ್ತಿಯ ಕೆನರಾ ಕೈಗಾರಿಕಾ ಪ್ರದೇಶದಲ್ಲಿ ನೂತನ ಸುಸಜ್ಜಿತ ಜೈಲು ಕಟ್ಟಡ ನಿರ್ಮಾಣ ಕಾಮಗಾರಿ ಶೀಘ್ರದಲ್ಲಿಯೇ ಆರಂಭವಾಗಲಿದೆ. ಜೈಲು ನಿರ್ಮಾಣಕ್ಕಾಗಿ ಮೀಸಲಿರಿಸಿರುವ 67.87 ಎಕ್ರೆ ಜಮೀನಿಗೆ ಈಗಾಗಲೇ ಲೋಕೋಪಯೋಗಿ ಇಲಾಖೆ ವತಿಯಿಂದ ಆವರಣ ಗೋಡೆಯನ್ನು ನಿರ್ಮಾಣ ಮಾಡಿ ನಿವೇಶನವನ್ನು ಭದ್ರ ಪಡಿಸಲಾಗಿದೆ. 200 ಕೋಟಿ ರೂ. ವೆಚ್ಚದಲ್ಲಿ ಜೈಲು ನಿರ್ಮಾಣ ಮಾಡಲಾಗುತ್ತದೆ. ಇದಕ್ಕಾಗಿ 2017ರ ಬಜೆಟ್‌ನಲ್ಲಿ 7.5 ಕೋಟಿ ರೂ. ಒದಗಿಸಲಾಗಿತ್ತು. ಜೈಲು ಕಟ್ಟಡವನ್ನು 3 ಹಂತಗಳಲ್ಲಿ ನಿರ್ಮಿಸಿ 3- 4 ವರ್ಷಗಳಲ್ಲಿ ಪೂರ್ಣಗೊಳಿಸುವ ಉದ್ದೇಶವಿದೆ. ಮೊದಲ ಹಂತದಲ್ಲಿ 110 ಕೋ.ರೂ.ಮೊತ್ತದ ಕಾಮಗಾರಿಗೆ ಟೆಂಡರ್ ಸಿದ್ಧಪಡಿಸಲಾಗಿದೆ. ಇದಕ್ಕೆ ಪೂರಕವಾಗಿ ಇದೀಗ ಕೆನರಾ ಕೈಗಾರಿಕಾ ಪ್ರದೇಶಕ್ಕೆ ಮುಡಿಪುವಿನಿಂದ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ವಿಸ್ತರಣೆ ನಡೆಯುತ್ತಿದೆ.
Advertisement
ಅರ್ಧ ಎಂಜಿಡಿ ನೀರು- ಯೋಜನೆಮುಡಿಪು ಸಮೀಪದ ಮೂಳೂರುವಿನಲ್ಲಿರುವ ಕೆನರಾ 1ನೇ ಹಂತ ಕೈಗಾರಿಕಾ ಪ್ರದೇಶಕ್ಕೆ ಅರ್ಧ ಎಂಜಿಡಿಯಷ್ಟು ನೀರನ್ನು ನೇತ್ರಾವತಿಯಿಂದ ಬಳಸುವ ಬಗ್ಗೆ ಯೋಜನೆ ರೂಪಿಸಲಾಗುತ್ತಿದೆ. ಸದ್ಯಕ್ಕೆ ಇನ್ಫೋಸಿಸ್ ಎಸ್‌ಇಝಡ್ ನೇತ್ರಾ ಕ್ಯಾಂಪಸ್‌ನಲ್ಲಿರುವ ನೀರು ಸಂಸ್ಕರಣಾ ಘಟಕದಿಂದ ಕೆನರಾ ಪ್ರದೇಶಕ್ಕೆ ನೀರು ಸರಬರಾಜು ಮಾಡಲು ಪೈಪ್‌ಲೈನ್ ಅಳವಡಿಸಲು ಉದ್ದೇಶಿಸಲಾಗಿದೆ.
– ಕೆ.ಎಸ್. ಕುಮಾರಪ್ಪ, ಅಭಿವೃದ್ಧಿ ಅಧಿಕಾರಿ, ಕಾರ್ಯನಿರ್ವಾಹಕ ಎಂಜಿನಿಯರ್, ಕೆಐಎಡಿಬಿ-ಮಂಗಳೂರು