ಕುಣಿಗಲ್: ನೀರಾವರಿ ಸಲಹಾ ಸಮಿತಿ ತೀರ್ಮಾನದಂತೆ ಶುಕ್ರವಾರ ಮಾರ್ಕೋನಹಳ್ಳಿ ಜಲಾಶಯದ ಅಚ್ಚುಕಟ್ಟು ಪ್ರದೇಶದ ಸಾಲು ಕೆರೆಗಳಿಗೆ ಮತ್ತು ರಾಗಿ ಬೆಳೆಗೆ ನೀರು ಬಿಡಲಾಯಿತು.
ನೀರು ಹರಿವಿಗೆ ಚಾಲನೆ ನೀಡಿದ ಬಳಿಕ ಮಾರ್ಕೋನಹಳ್ಳಿ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಡಾ.ರಂಗನಾಥ್, ಜಲಾಶಯದ ಪೂರ್ಣ ನೀರಿನ ಮಟ್ಟ 88.50 ಅಡಿ ಇದ್ದು, ಪ್ರಸ್ತುತ 82 ಅಡಿ ನೀರಿದೆ. ಮಲೆನಾಡು ಪ್ರದೇಶದಲ್ಲಿ ಉತ್ತಮ ಮಳೆಯಾಗಿ ಗೂರೂರು ಜಲಾಶಯ ಪರಿಪೂರ್ಣವಾಗಿ ತುಂಬಿದೆ. ಅಮೃತೂರು ಹೋಬಳಿ ವ್ಯಾಪ್ತಿಯಲ್ಲಿ ಕೆರೆ ಕಟ್ಟೆಗಳು ಬರಿದಾಗಿ ಅಂತರ್ಜಲ ಮಟ್ಟ ಕುಸಿದಿದ್ದು, ಕೊಳವೆ ಬಾವಿಗಳು ಬರಿದಾಗಿ ಜನ-ಜಾನುವಾರುಗಳ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಈಗ ಜಲಾಶಯದಲ್ಲಿ ಲಭ್ಯವಿರುವ ನೀರಿನ ಮಟ್ಟದ ಅನುಗುಣವಾಗಿ ಈ ವ್ಯಾಪ್ತಿಯಲ್ಲಿ ಸಾಲು ಕೆರೆ ತುಂಬಿಸಿ ಅಂರ್ತಜಲ ಮಟ್ಟ ಹೆಚ್ಚಿಸಿ ಕುಡಿಯುವ ನೀರಿಗೆ ಅನುಕೂಲ ಮಾಡಿಕೊಡುವುದರ ಜತೆಗೆ ಸುಮಾರು 15 ಸಾವಿರ ಎಕರೆ ರಾಗಿ ಬೆಳೆಗೆ ನೀರು ಕೊಡಲು ನೀರಾವರಿ ಸಲಹಾ ಸಮಿತಿ ತೀರ್ಮಾನದಂತೆ ನೀರು ಹರಿಸಲಾಗಿದೆ ಎಂದು ಹೇಳಿದರು.
ಜಿಲ್ಲೆಯ ನೀರಿನ ಪಾಲು ಕೊಡಿ: ತುಮಕೂರು ಜಿಲ್ಲೆಯ ಪಾಲಿನ 24 ಟಿ.ಎಂ.ಸಿ, ಕುಣಿಗಲ್ ಪಾಲಿನ 4 ಟಿ.ಎಂ.ಸಿ ನೀರು ನಿಗದಿತ ಅವಧಿಯೊಳಗೆ ಹರಿಸಬೇಕು. ಹೇಮಾವತಿ ನದಿ ಉಕ್ಕಿ ಹರಿಯುತ್ತಿದ್ದು, ನೀರು ಸಮುದ್ರ ಸೇರುವ ಮುನ್ನ ಜಿಲ್ಲೆಗೆ 24 ಟಿಎಂಸಿ ಹರಿಸಲು ಸರ್ಕಾರ ಹಾಗೂ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಎರಡು ದಿನದಲ್ಲಿ ಕಾಮಗಾರಿ ಪೂರ್ಣ: ಮಾಜಿ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್, ಮಾರ್ಕೋನಹಳ್ಳಿ ಎಡ ಮತ್ತು ಬಲದಂಡೆ ನಾಲಾ ಅಗಲೀಕರಣಕ್ಕೆ ಸುಮಾರು 60 ಕೋಟಿ ರೂ. ಅನುದಾನ ನೀಡಿದ್ದರು. ಅನುದಾನ ಬಳಸಿ ನಾಲೆ ಆಧುನೀಕರಣಗೊಳಿಸಲಾಗಿದೆ. ಇನ್ನು ಶೇ.2 ರಷ್ಟು ಕಾಮಗಾರಿ ಬಾಕಿ ಇದ್ದು, ಎರಡು ದಿನದಲ್ಲಿ ಪೂರ್ಣಗೊಳಿಸಿ ಜಮೀನುಗಳಿಗೆ ನೀರು ಹರಿಸಲಾಗುವುದು ಎಂದು ಭರವಸೆ ನೀಡಿದರು.
ಸಿಎಂ ವಿಶ್ವಾಸ ದ್ರೋಹ ಮಾಡಲ್ಲ: 25 ವರ್ಷದಿಂದ ಕುಣಿಗಲ್ ತಾಲೂಕಿಗೆ ಹರಿಯಬೇಕಾದ ಹೇಮೆ ನೀರು ಹರಿಯಲಿಲ್ಲ, ಇದರಿಂದ ತಾಲೂಕಿನ ನಾಗರಿಕರು ಮತ್ತು ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಇದನ್ನು ಅರಿತು ಸಂಸದ ಡಿ.ಕೆ.ಸುರೇಶ್ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, 614 ಕೋಟಿ ರೂ. ವೆಚ್ಚದಲ್ಲಿ ಲಿಂಕ್ ಕೆನಾಲ್ಗೆ ಅನುಮೋದನೆ ನೀಡಿದ್ದರಯರು. ಈ ಸಂಬಂಧ ಈಗಾಗಲೇ ಇ-ಟೆಂಡರ್ ಕರೆಯಲಾಗಿದೆ. ಆದರೆ ಇದನ್ನು ವಿರೋಧಿಸಿ ತುಮಕೂರು ಬಿಜೆಪಿಯ ಕೆಲ ಮುಖಂಡರು ಸಿಎಂ ಯಡಿಯೂರಪ್ಪಗೆ ದೂರು ಸಲ್ಲಿಸಿದ್ದಾರೆ. ಈ ಸಂಬಂಧ ಯಡಿಯೂರಪ್ಪ ಅವರನ್ನು ಭೇಟಿಯಾದಾಗ ‘ನೀರಿನ ವಿಚಾರದಲ್ಲಿ ರಾಜಕಾರಣ ಮಾಡುವುದಿಲ್ಲ’ ಎಂದು ಭರವಸೆ ನೀಡಿದ್ದಾರೆ. ಹಾಗಾಗಿ ಸಿಎಂ ವಿಶ್ವಾಸ ದ್ರೋಹ ಮಾಡುವುದಿಲ್ಲ ಎಂದು ನಂಬಿರುವುದಾಗಿ ಶಾಸಕರು ತಿಳಿಸಿದರು.
ತಹಶಿಲ್ದಾರ್ ವಿ.ಆರ್. ವಿಶ್ವನಾಥ್, ಇಇ ಮಂಜೇಶ್‌ಗೌಡ, ಎಇಇ ಗಂಗಾಧರ್ ಮತ್ತಿತರರು ಇದ್ದರು.