Advertisement
ಕೆಆರ್‌ಎಸ್ ಅಣೆಕಟ್ಟೆಯಲ್ಲಿರುವ ನೀರನ್ನು ಕುಡಿಯುವ ನೀರಿನ ಉದ್ದೇಶಕ್ಕೆ ಮೀಸಲಿಡಲಾಗಿದೆ. ಹಾಗಾಗಿ ಅಚ್ಚುಕಟ್ಟು ವ್ಯಾಪ್ತಿಯ ರೈತರು ಯಾವ ಕಾರಣಕ್ಕೂ ಹೊಸ ಬೆಳೆ ಬೆಳೆಯಬಾರದು. ಬೆಳೆ ಬೆಳೆಯಲು ಪೂರ್ವ ಸಿದ್ಧತೆಯನ್ನೂ ನಡೆಸದಂತೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಪ್ರಕಟಣೆ ಹೊರಡಿಸಿದ್ದರು. ಇದೀಗ ತಮಿಳುನಾಡಿನಲ್ಲಿ ರೈತರು ಬೆಳೆದಿರುವ ಬೆಳೆಗೆ ನೀರು ಹರಿಸುತ್ತಿರುವ ರಾಜ್ಯಸರ್ಕಾರ ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Related Articles
Advertisement
ರೈತರ ಹಿತ ಕಡೆಗಣನೆ: ಒಣಗುತ್ತಿರುವ ಬೆಳೆಗಳಿಗೆ ನೀರು ಹರಿಸುವಂತೆ ಒಂದು ತಿಂಗಳು ಸತತ ಹೋರಾಟ ನಡೆಸಿದ ಪರಿಣಾಮ ಜು.16ರಿಂದ ಹತ್ತು ದಿನಗಳ ಕಾಲ ನಾಲೆಗಳಿಗೆ ನೀರು ಬಿಡುಗಡೆ ಮಾಡುವ ನಿರ್ಧಾರ ಕೈಗೊಂಡ ಬೆನ್ನ ಹಿಂದೆಯೇ ರಾಜ್ಯಸರ್ಕಾರ ತಮಿಳುನಾಡಿಗೆ ನೀರನ್ನು ಹರಿಯಬಿಟ್ಟು ಕಾವೇರಿ ಕಣಿವೆ ಪ್ರದೇಶದ ರೈತರ ಹಿತವನ್ನು ಕಡೆಗಣಿಸಿದೆ.
ರೈತರ ಆಕ್ರೋಶ: ಒಣಗುವ ಹಂತದಲ್ಲಿದ್ದ ಬೆಳೆಗಳಿಗೆ ಸಕಾಲದಲ್ಲಿ ನೀರು ಕೊಡದೆ ರೈತರು ನಷ್ಟ ಅನುಭವಿಸುವಂತೆ ಮಾಡಿದ ಜೆಡಿಎಸ್ -ಕಾಂಗ್ರೆಸ್ ನೇತೃತ್ವದ ಮೈತ್ರಿ ಸರ್ಕಾರ ಹಾಲಿ ನಾಲೆಗಳಿಗೆ ಬಿಡುಗಡೆ ಮಾಡಿರುವ ನೀರು ಕೊನೆಯ ಭಾಗಕ್ಕೆ ತಲುಪದಿರುವ ಹೊತ್ತಿನಲ್ಲೇ ತಮಿಳುನಾಡಿಗೆ ನೀರು ಬಿಡುಗಡೆಗೊಳಿಸಿರುವುದು ರೈತರ ಆಕ್ರೋಶಕ್ಕೆ ಕಿಚ್ಚು ಹೆಚ್ಚುವಂತೆ ಮಾಡಿದೆ.
ಕೆಆರ್‌ಎಸ್ ಜಲಾಶಯದ ಒಳಹರಿವನ್ನು ಆಧರಿಸಿ ತಮಿಳುನಾಡಿಗೆ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ತಿಳಿಸಿತ್ತು. ಅಣೆಕಟ್ಟೆಗೆ ಒಳಹರಿವು ಸಂಪೂರ್ಣ ಕುಸಿದಿರುವಾಗ ನೀರು ಹರಿಸುವ ತುರ್ತು ಅಗತ್ಯವೇನಿತ್ತು. ರಾಜ್ಯಸರ್ಕಾರ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಿ ಕಣಿವೆ ಪ್ರದೇಶದ ರೈತರ ಬದುಕಿಗೆ ಸಮಾಧಿ ಕಟ್ಟುತ್ತಿದೆ ಎನ್ನುವುದು ರೈತರ ಆರೋಪವಾಗಿದೆ.
ಬೆಳೆದು ನಿಂತಿರುವ ಬೆಳೆಗಳಿಗೆ ಹತ್ತು ದಿನಗಳ ಕಾಲ ಹರಿಸುತ್ತಿರುವ ನೀರು ಯಾವುದಕ್ಕೂ ಸಾಲದು. ಇಪ್ಪತ್ತು ದಿನಗಳ ಕಾಲ ನೀರು ಹರಿಸಿದರಷ್ಟೇ ಒಣಗುವ ಹಂತದಲ್ಲಿರುವ ಕಬ್ಬು ಕೊಂಚ ಚೇತರಿಸಿಕೊಳ್ಳಲು ಸಾಧ್ಯವಾಗಲಿದೆ. ಅದರ ಬಗ್ಗೆ ಗಮನಹರಿಸಬೇಕಾದ ಸರ್ಕಾರ ಬೆಳೆಗಳ ಸ್ಥಿತಿ-ಗತಿಯನ್ನು ಪರಿಶೀಲಿಸುವ ಗೋಜಿಗೆ ಹೋಗದೆ, ರೈತರ ಸಂಕಷ್ಟ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳದೆ ತಮಿಳುನಾಡಿಗೆ ನೀರು ಹರಿಸುವ ನಿರ್ಧಾರ ಕೈಗೊಂಡು ರೈತರನ್ನು ಸಾವಿನ ಅಂಚಿಗೆ ದೂಡಿದೆ ಎಂದು ರೈತಸಂಘ (ಮೂಲ ಸಂಘಟನೆ) ಜಿಲ್ಲಾಧ್ಯಕ್ಷ ಬೋರಾಪುರ ಶಂಕರೇಗೌಡ ಆರೋಪಿಸಿದ್ದಾರೆ.
ರಾಜ್ಯಸರ್ಕಾರ ಮಳೆ ಇಲ್ಲದೆ ಕಾವೇರಿ ಕಣಿವೆ ಪ್ರದೇಶದ ಕೃಷಿ ಚಟುವಟಿಕೆ ಸ್ಥಬ್ಧಗೊಂಡಿರುವುದು, ಕೆರೆ-ಕಟ್ಟೆಗಳು ಬರಿದಾಗಿ ಜನ-ಜಾನುವಾರುಗಳು ನೀರಿಲ್ಲದೆ ಪರದಾಡುತ್ತಿರುವ ಕರಾಳತೆಯನ್ನು ಪ್ರಾಧಿಕಾರಕ್ಕೆ ಮನದಟ್ಟು ಮಾಡಿಕೊಡುವಲ್ಲಿ ವಿಫಲವಾಗಿದೆ. ನಮ್ಮ ಹಕ್ಕಿನ ನೀರನ್ನು ಉಳಿಸಿಕೊಳ್ಳಲಾಗದೆ ಅಧಿಕಾರ ಉಳಿವಿಗೆ ರಾಜಕೀಯ ದೊಂಬರಾಟ ನಡೆಸುತ್ತಿದ್ದಾರೆ. ಜನರಿಂದ ಆಯ್ಕೆಯಾದ ಶಾಸಕರು ಸ್ಥಳೀಯ ರೈತರ ರಕ್ಷಣೆಗೆ ಧಾವಿಸದೆ ರೆಸಾರ್ಟ್ ರಾಜಕಾರಣ ನಡೆಸುತ್ತಾ ಮೋಜು-ಮಸ್ತಿಯಲ್ಲಿ ತೊಡಗಿದ್ದಾರೆ ಎಂದು ರೈತ ನಾಯಕಿ ಸುನಂದಾ ಜಯರಾಂ ಕಿಡಿಕಾರಿದ್ದಾರೆ.