Advertisement

ಕದ್ದುಮುಚ್ಚಿ ತಮಿಳುನಾಡಿಗೆ ನೀರು: ರೈತರ ಆಕ್ರೋಶ

09:23 PM Jul 20, 2019 | Lakshmi GovindaRaj |

ಎಚ್‌.ಡಿ.ಕೋಟೆ/ಮೈಸೂರು: ಕಬಿನಿ ಜಲಾಶಯದಿಂದ ರಾತ್ರೋರಾತ್ರಿ ಕದ್ದುಮುಚ್ಚಿ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ ಎಂದು ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

2,284 ಅಡಿ ಗರಿಷ್ಠ ನೀರು ಸಂಗ್ರಹಣ ಸಾಮರ್ಥ್ಯದ ಜಲಾಶಯ ಭರ್ತಿಗೆ ಇನ್ನೂ 14 ಅಡಿ ಬಾಕಿ ಇದೆ. ಜಲಾಶಯ ಭರ್ತಿಯಾಗುವ ಮುನ್ನವೇ ಅಧಿಕಾರಿಗಳು ತಮಿಳುನಾಡಿಗೆ ನೀರು ಹರಿಬಿಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಜಲಾಶಯದ ಕ್ರಸ್ಟ್‌ ಗೇಟ್‌ ತೆರೆಯದೆ, ಸುಭಾಷ್‌ ಪವರ್‌ ಕಾರ್ಪೊರೇಷನ್‌ ಗೇಟ್‌ ಮೂಲಕ ನದಿಗೆ ನೀರು ಹರಿಸಲಾಗಿದ್ದು, ಜಲಾಶಯ ಗರಿಷ್ಠ ಮಟ್ಟ ತಲುಪುವ ಮುನ್ನವೇ ತಮಿಳುನಾಡಿಗೆ ನೀರು ಹರಿದಿದೆ ಎಂದು ಕಬಿನಿ ಅಚ್ಚುಕಟ್ಟು ಪ್ರದೇಶದ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುಭಾಷ್‌ ಪವರ್‌ ಕಾರ್ಪೊರೇಷನ್‌ ಕಂಪನಿಯಲ್ಲಿ ತಮಿಳರೇ ಹೆಚ್ಚಾಗಿ ಕೆಲಸ ಮಾಡುತ್ತಿರುವುದಲ್ಲದೆ, ಇತ್ತೀಚೆಗೆ ತಮಿಳುನಾಡು ಅಧಿಕಾರಿಗಳ ತಂಡ ಕಬಿನಿ ಜಲಾಶಯಕ್ಕೆ ಭೇಟಿ ನೀಡಿದ್ದು ವಿವಾದಕ್ಕೆ ಕಾರಣವಾಗಿತ್ತು.

ಇದರ ಬೆನ್ನಲ್ಲೇ ವಿದ್ಯುತ್‌ ಉತ್ಪಾದನಾ ಕಂಪನಿಗೆ ನೀರು ಹರಿಸುವ ಗೇಟ್‌ ಮೂಲಕ ಅಕ್ರಮವಾಗಿ ತಮಿಳುನಾಡಿಗೆ ಅಧಿಕಾರಿಗಳು ನೀರು ಬಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ರಾತ್ರೋ ರಾತ್ರಿ 3 ಸಾವಿರಕ್ಕೂ ಹೆಚ್ಚು ಕ್ಯೂಸೆಕ್‌ ನೀರು ಬಿಟ್ಟಿರುವ ಪರಿಣಾಮ,

Advertisement

ಶುಕ್ರವಾರ 70 ಅಡಿ ಇದ್ದ ಜಲಾಶಯದ ನೀರಿನ ಮಟ್ಟ ಶನಿವಾರ ಬೆಳಗ್ಗೆ ವೇಳೆಗೆ 69 ಅಡಿಗೆ ಕುಸಿದಿದೆ. ಒಂದೇ ದಿನಕ್ಕೆ ಜಲಾಶಯದ ನೀರಿನ ಮಟ್ಟ ಒಂದು ಅಡಿ ಕಡಿಮೆಯಾಗಿದ್ದು, ತಮಿಳುನಾಡಿಗೆ ನೀರು ಬಿಡುವುದನ್ನು ಕೂಡಲೇ ನಿಲ್ಲಿಸಿ,

ನಾಲೆಗಳಿಗೆ ನೀರು ಬಿಡಿ, ಜನ-ಜಾನುವಾರುಗಳಿಗೆ ನೀರಿಲ್ಲದೆ ಪರದಾಡುತ್ತಿರುವ ಈ ಸಂದರ್ಭದಲ್ಲಿ ಅಧಿಕಾರಿಗಳು ಕಬಿನಿ ಬಲದಂಡೆ ನಾಲೆಗೆ ನೀರು ಬಿಡಬೇಕು ಎಂದು ಅಚ್ಚುಕಟ್ಟು ಭಾಗದ ರೈತರು ಒತ್ತಾಯಿಸಿದ್ದಾರೆ.

ಕಬಿನಿ, ಕೆಆರ್‌ಎಸ್‌ ಜಲಾಶಯಗಳು ಭರ್ತಿಯಾಗುವ ಮೊದಲೇ ತಮಿಳುನಾಡಿಗೆ ನೀರು ಹರಿಸುವ ಮೂಲಕ ರಾಜ್ಯದ ರೈತರಿಗೆ ದ್ರೋಹ ಬಗೆಯುತ್ತಿರುವ ರಾಜ್ಯ ಸರ್ಕಾರ ನೀರುಗಂಟಿ ಕೆಲಸ ಮಾಡುತ್ತಿದೆ ಎಂದು ಕಬಿನಿ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಕುರುಬೂರು ಶಾಂತಕುಮಾರ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಬಿನಿ ಜಲಾಶಯದ ನೀರಿನ ಮಟ್ಟ 84 ಅಡಿ ಹಾಲಿ ಸಂಗ್ರಹ ಇರುವುದು 69 ಅಡಿ, ಕೆಆರ್‌ಎಸ್‌ನ ನೀರಿನ ಸಂಗ್ರಹ ಮಟ್ಟ 124ಅಡಿ ಹಾಲಿ ಸಂಗ್ರಹ ವಿರುವುದು 90 ಅಡಿ ಮಾತ್ರ ಮಳೆಗಾಲ ಸ್ವಲ್ಪಮಟ್ಟಿಗೆ ಪ್ರಾರಂಭವಾಗಿದ್ದು ಜಲಾಶಯಕ್ಕೆ ಸಾಧಾರಣ ಮಟ್ಟದ ಒಳಹರಿವು ಇರುವಾಗ ನೀರು ಬಿಡುವುದು ಸರಿಯಲ್ಲ.

ಕೇರಳದ ವೈನಾಡು ಭಾಗದಲ್ಲಿ ಈಗ ಸ್ವಲ್ಪಮಟ್ಟಿಗೆ ಮಳೆ ಬರುತ್ತಿರುವ ಹಿನ್ನೆಲೆಯಲ್ಲಿ ಕಬಿನಿ ಜಲಾಶಯಕ್ಕೆ 4,700 ಕ್ಯೂಸೆಕ್‌ ನೀರು ಹರಿದು ಬರುತ್ತಿದ್ದು ಕೇವಲ 69 ಅಡಿ ಮಾತ್ರ ತುಂಬಿರುವಾಗ ಒಳಹರಿವಿನ ಪ್ರಮಾಣದಲ್ಲಿ ತಮಿಳುನಾಡಿಗೆ ನದಿ ಮೂಲಕ 3,000 ಕ್ಯೂಸೆಕ್‌ ನೀರು ಹರಿಸುತ್ತಿರುವುದು ಅಚ್ಚುಕಟ್ಟು ರೈತರಿಗೆ ದ್ರೋಹವೆಸಗಿದಂತಾಗಿದೆ.

ರಾಜ್ಯಸರ್ಕಾರ ತಮಿಳುನಾಡಿಗೆ ನೀರು ಬಿಡುವ ನೀರು ಗಂಟಿ ಕೆಲಸವನ್ನು ಮಾಡುತ್ತಿದೆ. ಅಚ್ಚುಕಟ್ಟು ರೈತರನ್ನು ಬಲಿಕೊಟ್ಟು ತಮಿಳುನಾಡಿಗೆ ನೀರು ಹರಿಸುವ ಔಚಿತ್ಯವಾದರೂ ಏನು?, ಬರಗಾಲದಿಂದ ರೈತರು ತತ್ತರಿಸಿದ್ದಾರೆ.

ಜನ-ಜಾನುವಾರುಗಳಿಗೆ ಕುಡಿಯುವ ನೀರು ಸಿಗದಂತಾಗಿದೆ ಈ ಭಾಗದ ರೈತರಿಗೆ ನಾಲೆಗಳ ಮೂಲಕ ತಕ್ಷಣವೇ ನೀರು ಹರಿಸಬೇಕು ಜಲಾಶಯಗಳ ಭರ್ತಿಗೆ ಮೊದಲು ತಮಿಳುನಾಡಿಗೆ ನೀರು ಹರಿಸುವುದನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.

ನೀರು ನಿಲ್ಲಿಸದಿದ್ದರೆ ಡ್ಯಾಂಗೆ ಮುತ್ತಿಗೆ: ಪೂರ್ವ ಮುಂಗಾರು ಕೈಕೊಟ್ಟ ಕಾರಣ ಜಲಾಶಯ ಇನ್ನೂ ಭರ್ತಿಯಾಗಿಲ್ಲ. ಮುಂಗಾರು ಮಳೆ ತಡವಾಗಿ ಆಗಮಿಸಿದರೂ ಒಂದು ವಾರದ ಅವಧಿಯಲ್ಲಿ ಮತ್ತೆ ಕ್ಷೀಣಿಸಿದೆ. ಜಲಾಶಯ ಭರ್ತಿಗೆ ಇನ್ನೂ 12 ಅಡಿಗಳಷ್ಟು ನೀರು ಸಂಗ್ರಹವಾಗಬೇಕಿದೆ.

ಅಚ್ಚುಕಟ್ಟು ಪ್ರದೇಶಕ್ಕೆ ಮುಂದಿನ ಖಾರೀಫ್‌ ಬೆಳೆಗೆ ನೀರು ಕೊಡಬೇಕಿದ್ದರೂ ಸರ್ಕಾರ ತಮಿಳುನಾಡಿಗೆ ನೀರು ಬಿಟ್ಟಿರುವುದು ಸರಿಯಲ್ಲ, ಕೂಡಲೇ ನದಿಗೆ ಹರಿಸುತ್ತಿರುವ ನೀರನ್ನು ನಿಲ್ಲಿಸದಿದ್ದರೆ ಕಬಿನಿ ಜಲಾಶಯಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆ ಈ ಭಾಗದ ರೈತರು ಎಚ್ಚರಿಕೆ ನೀಡಿದ್ದಾರೆ.

ಮೇಲಧಿಕಾರಿಗಳ ಆದೇಶದನ್ವಯ ಜಲಾಶಯದ ಪಕ್ಕದ ಸುಭಾಷ್‌ ಪವರ್‌ ಹೌಸ್‌ ಜಲಾಶಯದ ಮೂಲಕ ಮುಂಭಾಗದ ನದಿಗೆ 3,000 ಕ್ಯೂಸೆಕ್‌ ನೀರು ಬಿಡಲಾಗುತ್ತಿದೆ. ಮೇಲಧಿಕಾರಿಗಳ ಮುಂದಿನ ಆದೇಶದ ವರೆಗೂ ಹರಿಸಬೇಕಿದೆ.
-ಎನ್‌.ಸುಜಾತಾ, ಕಬಿನಿ ಜಲಾಶಯ ಇಇ

Advertisement

Udayavani is now on Telegram. Click here to join our channel and stay updated with the latest news.

Next