Advertisement

ಸೀಬರ್ಡ್‌ಗೆ ಕದ್ರಾ ದಿಂದಲೂನೀರು

02:37 PM Sep 20, 2019 | Team Udayavani |

ಕಾರವಾರ: ಸೀಬರ್ಡ್‌ ಯೋಜನೆಗೆ ಕದ್ರಾ ಜಲಾಶಯದಿಂದ ಕುಡಿಯುವ ನೀರಿನ ಸರಬರಾಜಿಗೆ ಸಮಗ್ರ ಯೋಜನಾ ವರದಿ ಸಲ್ಲಿಸುವಂತೆ ನಗರ ನೀರು ಸರಬರಾಜು ಇಲಾಖೆಗೆ ಜಿಲ್ಲಾಧಿಕಾರಿ ಡಾ.ಹರೀಶ್‌ ಕುಮಾರ್‌ ಸೂಚಿಸಿದ್ದಾರೆ.

Advertisement

ಸೀಬರ್ಡ್‌ ಯೋಜನೆಗೆ ಸಂಬಂಧಿಸಿದಂತೆ ಇತ್ತೀಚೆಗಷ್ಟೆ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚಿಸಲಾದ ವಿಷಯಗಳ ತುರ್ತು ಅನುಷ್ಠಾನ ಸಂಬಂಧಿಸಿದಂತೆ ಡಿಸಿ ಕಚೇರಿಯಲ್ಲಿ ನಿನ್ನೆ ಉನ್ನತ ಅಧಿಕಾರಿಗಳ ಸಭೆ ನಡೆಸಿದರು.

ಸೀಬರ್ಡ್‌ಗೆ ಸಂಬಂಧಿಸಿದಂತೆ ಪ್ರಸ್ತಾವಿತ ಗಂಗಾವಳಿ ನದಿಯಿಂದ ಕುಡಿಯುವ ನೀರು ಕೊಡುವ ಯೋಜನೆ ಪೈಪ್‌ಲೈನ್‌ ಅಳವಡಿಸುವ ಕಾಮಗಾರಿ ಈಗಾಗಲೇ ವಿಳಂಬವಾಗಿದೆ. ಒಂದೊಮ್ಮೆ ಗಂಗಾವಳಿ ನದಿ ಬತ್ತಿ ನೀರಿನ ಸಮಸ್ಯೆ ಉದ್ಭವಿಸುವ ಸಾಧ್ಯತೆಗಳೂ ಇವೆ. ಹಾಗಾಗಿ ಪ್ರಸ್ತಾವಿತ ಗಂಗಾವಳಿ ನದಿ ಯೋಜನೆಗೆ 42 ಕಿ.ಮೀ ದೂರವಿದೆ. ಕಾರವಾರ ಬಳಿಯ ಕದ್ರಾ ಜಲಾಶಯದಿಂದ 30 ಕಿಮೀ ದೂರದಲ್ಲಿ ಸೀಬರ್ಡ್‌ ನೌಕಾನೆಲೆ ಇರುವ ಕಾರಣ, ಕದ್ರಾ ಜಲಾಶಯದಿಂದ ನೀರು ಸರಬರಾಜು ಮಾಡುವುದು ಸೂಕ್ತವಾಗುತ್ತದೆ. ಈ ಹಿನ್ನೆಲೆಯಲ್ಲಿ ಕದ್ರಾ ಜಲಾಶಯದಿಂದ ಸೀಬರ್ಡ್‌ ಯೋಜನೆಗೆ ನೀರು ಸರಬರಾಜು ಮಾಡಲು ಅನುಕೂಲವಾಗುವಂತೆ ಸಮೀಕ್ಷೆ ನಡೆಸಿ ಸಮಗ್ರ ಪ್ರಸ್ತಾವನೆಯನ್ನು ಶೀಘ್ರ ಸಲ್ಲಿಸುವಂತೆ ಅವರು ನಗರ ನೀರು ಸರಬರಾಜು ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಧಿಕಾರಿಗಳು ಪ್ರಸ್ತಾಪಿಸಿದ ವಿಷಯವನ್ನು ಸಭೆಯಲ್ಲಿ ಹಾಜರಿದ್ದ ಸೀಬರ್ಡ್‌ ಅಧಿಕಾರಿಗಳು ಸಮ್ಮತಿಸಿದರು.

ಗಂಗಾವಳಿ ನದಿಗೆ ವೆಂಟೆಡ್‌ ಬ್ಯಾರೇಜ್‌: ಅಗಸೂರು ಬಳಿ ಗಂಗಾವಳಿ ನದಿಗೆ ನಿರ್ಮಿಸಲು ಉದ್ದೇಶಿಸಿರುವ ವೆಂಟೆಡ್‌ ಬ್ಯಾರೇಜ್‌ ಕೂಡ ಶೀಘ್ರ ಪೂರ್ಣಗೊಳಿಸುವ ಸಂಬಂಧ ಕ್ರಮವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಸೀಬರ್ಡ್‌ ಯೋಜನೆಗೆ ಶಿರವಾಡ ಕೊಂಕಣ ರೈಲ್ವೆ ಪ್ರದೇಶದಲ್ಲಿ ನಿರ್ಮಿಸಲು ಉದ್ದೇಶಿಸಿರುವ 220 ಕೆವಿ ವಿದ್ಯುತ್‌ ಉಪಸ್ಥಾವರ ಘಟಕಕ್ಕೆ ಅನುಮೋದನೆ ಪಡೆಯಲಾಗಿದೆ. ನಿರ್ಮಾಣ ಕಾರ್ಯವು ಶೀಘ್ರ ಅನುಷ್ಠಾನವಾಗಲಿದೆ. ಈ ಬಗ್ಗೆ ಹುಬ್ಬಳಿ ವಿದ್ಯುತ್‌ ಪ್ರಸರಣ ನಿಗಮದ ಅಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕು ಎಂದು ಸೂಚಿಸಿದರು.

ಅಂಕೋಲಾ ತಾಲೂಕು ಅಲಗೇರಿಯಲ್ಲಿ ಸೀಬರ್ಡ್‌ ವತಿಯಿಂದ ನಿರ್ಮಿಸಲು ಉದ್ದೇಶಿಸಿರುವ ನಾಗರಿಕ ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದಂತೆ ಬರುವ ವಾರ ಮೂಲಸೌಲಭ್ಯ ಅಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿಯವರು ಜಿಲ್ಲೆಗೆ ಆಗಮಿಸಲಿದ್ದು ಅವರು ಈ ಸಂಬಂಧ ಸಭೆ ನಡೆಸಲಿದ್ದಾರೆ ಎಂದರು.

Advertisement

ಅಪರ ಜಿಲ್ಲಾಧಿಕಾರಿ ನಾಗರಾಜ್‌ ಸಿಂಗ್ರೇರ್‌, ಸೀಬರ್ಡ್‌ ಯೋಜನೆ ಅನುಷ್ಠಾನ ಉಪನಿರ್ದೇಶಕ ಕ್ಯಾಪ್ಟನ್‌ ಕಿರಣರೆಡ್ಡಿ, ಕಾರವಾರ ಉಪ ಅರಣ್ಯ ಸಂರಕ್ಷಣಾಧಿಕಾರಿ ವಸಂತರೆಡ್ಡಿ, ಕಾರವಾರ ಉಪ ವಿಭಾಗಾಧಿಕಾರಿ ಅಭಿಜಿನ್‌, ತಹಶೀಲ್ದಾರ್‌ ಆರ್‌.ವಿ. ಕಟ್ಟಿ, ಅಶೋಕ್‌ ಗುರಾಣಿ, ನಗರ ನೀರು ಸರಬರಾಜು ಇಲಾಖೆ ಸಹಾಯಕ ಕಾರ್ಯಪಾಲ

ಎಂಜಿನಿಯರ್‌ ಪಿ.ಸುರೇಶ್‌, ಬಂದರು ಅಧಿಕಾರಿ ಕ್ಯಾಪ್ಟನ್‌ ಗಾಂವ್ಕರ್‌, ಐಆರ್‌ಬಿ ಮುಖ್ಯ ಪ್ರಧಾನ ವ್ಯವಸ್ಥಾಪಕ ಮೋಹನ್‌ ದಾಸ್‌, ಕೊಂಕಣ್‌ ರೈಲ್ವೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಅನಂತಮೂರ್ತಿ ಮತ್ತಿತರರುಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next