Advertisement

ಎರಡು ವರ್ಷದಲ್ಲಿ ಎಲ್ಲ ಕೆರೆಗಳಿಗೆ ನೀರು

02:22 PM Aug 04, 2020 | mahesh |

ನಾಯಕನಹಟ್ಟಿ: ಎರಡು ವರ್ಷದಲ್ಲಿ ಮೊಳಕಾಲ್ಮೂರು ಕ್ಷೇತ್ರದ ಎಲ್ಲ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಪೂರ್ಣಗೊಳಿಸುವ ಸಂಕಲ್ಪ ಮಾಡಲಾಗಿದೆ
ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಹೇಳಿದರು.

Advertisement

ಪಟ್ಟಣದ ಚಿಕ್ಕಕೆರೆ ಪ್ರದೇಶದಲ್ಲಿ 53 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಸೋಮವಾರ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ನಿರಂತರವಾಗಿ ಬರಪೀಡಿತವಾಗಿರುವ ಕ್ಷೇತ್ರದ ಜನರು ಕೆರೆಗಳಿಗೆ ನೀರು ತುಂಬಿಸುವ ಬೇಡಿಕೆ ಇಡುತ್ತಿದ್ದರು. ಸಿಎಂ ಆಗಿದ್ದ ಎಸ್‌. ನಿಜಲಿಂಗಪ್ಪನವರು ಮೊಳಕಾಲ್ಮೂರು ಕ್ಷೇತ್ರವನ್ನು ಪ್ರತಿನಿಧಿಸಿದ್ದರೂ ನೀರಾವರಿ ಯೋಜನೆ ಜಾರಿಯಾಗಿರಲಿಲ್ಲ. ಆದರೆ ಸಿಎಂ ಬಿ.ಎಸ್‌. ಯಡಿಯೂರಪ್ಪ ಈ ಯೋಜನೆಗೆ ಹಣ ಬಿಡುಗಡೆ ಮಾಡಿದ್ದಾರೆ. ಫೆಬ್ರವರಿಯಲ್ಲಿ ಯೋಜನೆಗೆ ಅನುಮೋದನೆ ದೊರೆತಿದ್ದರೂ ಕೋವಿಡ್‌ ಕಾರಣ ಶಂಕುಸ್ಥಾಪನೆ ವಿಳಂಬವಾಗಿದೆ. ಈ ಯೋಜನೆಯಲ್ಲಿ
ಬಿಟ್ಟು ಹೋದ ಕೆರೆಗಳನ್ನು ಯೋಜನೆಯಲ್ಲಿ ಸೇರಿಸಿ ಡಿಪಿಆರ್‌ ಸಿದ್ಧಗೊಳಿಸುವಂತೆ ಸೂಚಿಸಲಾಗುವುದು ಎಂದರು.

ಮುಂದಿನ ಎರಡು ವರ್ಷಗಳ ಕಾಲ ನಾನು ಶಾಸಕನಾಗಿ, ಮಂತ್ರಿಯಾಗಿರುತ್ತೇನೆ. ಈ ಅವಧಿಯಲ್ಲಿ ತುಂಗಭದ್ರಾ ಹಿನ್ನೀರಿನಿಂದ ಕುಡಿಯುವ ನೀರು ಹಾಗೂ ಭದ್ರಾ ಮೇಲ್ದಂಡೆ ಯೋಜನೆಯಿಂದ ಕೆರೆಗಳಿಗೆ ನೀರು ತುಂಬಿಸುವುದು ನನ್ನ ಸಂಕಲ್ಪ. 2008ರಲ್ಲಿ ಬಿ.ಎಸ್‌. ಯಡಿಯೂರಪ್ಪನವರು ಭದ್ರಾ ಮೇಲ್ದಂಡೆ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಈ ಯೋಜನೆ ಕೇವಲ ಮೊಳಕಾಲ್ಮೂರು ಕ್ಷೇತ್ರಕ್ಕಷ್ಟೇ ಸೀಮಿತವಾಗಿಲ್ಲ. 2044 ಕೋಟಿ ರೂ. ವೆಚ್ಚದಲ್ಲಿ ಜಿಲ್ಲೆಯ
137 ಕೆರೆಗಳಿಗೆ ನೀರು ತುಂಬಿಸಲಾಗುವುದು ಎಂದು ತಿಳಿಸಿದರು.

ತುಂಗಭದ್ರಾ ಹಿನ್ನೀರಿನಿಂದ ಕುಡಿಯುವ ನೀರು ಪೂರೈಕೆ ಯೋಜನೆಯ 606 ಕಿ.ಮೀ ಉದ್ದದ ಕಾಮಗಾರಿಯಲ್ಲಿ 476 ಕಿಮೀ ಕಾಮಗಾರಿ ಪೂರ್ಣಗೊಂಡಿದೆ.
ಉಳಿದ 130 ಕಿಮೀ ಉದ್ದದ ಪೈಪ್‌ಲೈನ್‌ ಕಾಮಗಾರಿ ಬಾಕಿ ಇದೆ. ಡಿಸೆಂಬರ್‌ ವೇಳೆಗೆ ಮುಕ್ತಾಯಗೊಳ್ಳಲಿದೆ. ಕ್ಷೇತ್ರದ ಎಲ್ಲ ಹಳ್ಳಿಗಳಿಗೆ ನೀರು ಪೂರೈಸಲಾಗುವುದು. ಎಸ್ಸಿಪಿ ಹಾಗೂ ಟಿಎಸ್ಪಿ ಯೋಜನೆಯಡಿ 200 ಕೋಟಿ ರೂ. ವೆಚ್ಚದ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದರು.

ರಾಜ್ಯದಲ್ಲಿ ಬಗರ್‌ಹುಕುಂ ಜಮೀನುಗಳಿಗೆ ಹಕ್ಕುಪತ್ರ ಒದಗಿಸುವ ಕಾರ್ಯ ಕಳೆದ 10 ವರ್ಷಗಳಿಂದ ಸ್ಥಗಿತಗೊಂಡಿದೆ. ಕ್ಷೇತ್ರದಲ್ಲಿ ಎಲ್ಲ ಅರ್ಹ ಫಲಾನುಭವಿಗಳಿಗೆ ಒಂದು ತಿಂಗಳಲ್ಲಿ ಹಕ್ಕುಪತ್ರಗಳನ್ನು ನೀಡಲಾಗುವುದು. ಈ ಬಗ್ಗೆ ಸಭೆಗಳನ್ನು ನಡೆಸಲಾಗುತ್ತಿದೆ. ಬೀದರ್‌ -ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿ 150
ಎ ಕಾಮಗಾರಿಗೆ ಕೇಂದ್ರ ಸಚಿವ ನಿತಿನ್‌ ಗಡ್ಕರಿಯವರಿಂದ ಒಪ್ಪಿಗೆ ಪಡೆಯಲಾಗಿದೆ. ಈ ಹೆದ್ದಾರಿ ಪೂರ್ಣಗೊಳ್ಳುವ ಹಂತ ತಲುಪಿದೆ. ಶೀಘ್ರದಲ್ಲಿ ಕ್ಷೇತ್ರದಲ್ಲಿ ಜವಳಿ ಪಾರ್ಕ್‌ ನಿರ್ಮಾಣವನ್ನು ಶೀಘ್ರದಲ್ಲಿ ಆರಂಭಿಸಲಾಗುವುದು. ತೋಟಗಾರಿಕೆ ಇಲಾಖೆಗೆ 260 ಎಕರೆ ಜಮೀನು ಮಂಜೂರು ಮಾಡಿಸಲಾಗಿದೆ. 30 ಕೋಟಿ
ರೂ. ವೆಚ್ಚದಲ್ಲಿ ಮೊಳಕಾಲ್ಮೂರು ಪಟ್ಟಣದಲ್ಲಿ ರಸ್ತೆ ನಿರ್ಮಿಸಲಾಗುತ್ತಿದೆ. ಮುಂದಿನ ಅವ  ಯಲ್ಲಿ ಕ್ಷೇತ್ರದ ಪೂರ್ಣ ಪ್ರಗತಿಯ ಗುರಿ ಹೊಂದಿರುವುದಾಗಿ ಹೇಳಿದರು.

Advertisement

ವೇದಿಕೆಯ ಮೇಲಿದ್ದ ಎಲ್ಲರೂ ಹಸಿರು ಶಾಲನ್ನು ಹೊದ್ದಿದ್ದು ವಿಶೇಷವಾಗಿತ್ತು. ಜಿಪಂ ಸದಸ್ಯರಾದ ಎಚ್‌.ಪಿ. ಶಶಿರೇಖಾ, ಓಬಳೇಶ್‌, ಒ. ಮಂಜುನಾಥ್‌, ಬಿಜೆಪಿ
ಮಂಡಲ ಅಧ್ಯಕ್ಷ ಈ. ರಾಮರೆಡ್ಡಿ, ಡಾ| ಮಂಜುನಾಥ್‌, ನಗರ ಘಟಕದ ಅಧ್ಯಕ್ಷ ಎನ್‌. ಮಹಾಂತಣ್ಣ, ಡಿ.ಆರ್‌. ಬಸವರಾಜ್‌, ಸಿ.ಬಿ. ಮೋಹನ್‌, ಪರಮೇಶ್‌, ಎಂ.ವೈ.ಟಿ. ಸ್ವಾಮಿ, ಶಿವಣ್ಣ ಮತ್ತಿತರರು ಇದ್ದರು.

ಕಾರ್ಯಕ್ರಮಕ್ಕೆ ಮಳೆ ಅಡ್ಡಿ
ವೇದಿಕೆ ಕಾರ್ಯಕ್ರಮ ಆರಂಭವಾದ ತಕ್ಷಣ ಜೋರಾದ ಮಳೆ ಸುರಿಯಿತು. ಕೊಡೆ ನೆರವಿನಿಂದ ಶ್ರೀರಾಮುಲು ಭಾಷಣ ಮುಂದುವರಿಸಿದರು. ವೇದಿಕೆಯ
ಮುಂದಿದ್ದ ಜನರು ಕುಳಿತಿದ್ದ ಕುರ್ಚಿಗಳನ್ನು ಆಸರೆಯಾಗಿ ಹಿಡಿದುಕೊಂಡು ಸಚಿವರ ಭಾಷಣವನ್ನು ಆಲಿಸಿದರು. ಸಾಮಾಜಿಕ ಅಂತರ ಕಾಪಾಡಲು ಪೊಲೀಸರು ಹೆಣಗಾಡಿದರು.  ಕಾರ್ಯಕ್ರಮವನ್ನು ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ವೇದಿಕೆಯ ಮುಂಭಾಗದಲ್ಲಿ 150 ಕುರ್ಚಿಗಳನ್ನಷ್ಟೇ ಹಾಕಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next