Advertisement

ಆಲಮಟ್ಟಿ ಜಲಾಶಯ ಕಾಲುವೆಗಳಿಗೆ ನೀರು ಹರಿಸಿ: ಬೆಳ್ಳುಬ್ಬಿ

02:28 PM Jul 06, 2018 | |

ಆಲಮಟ್ಟಿ: ಮುಂಗಾರು ಹಂಗಾಮಿಗೆ ರೈತರು ತಮ್ಮ ಜಮೀನುಗಳಿಗೆ ಬಿತ್ತನೆ ಮಾಡಲು ಆಲಮಟ್ಟಿ ಲಾಲಬಹಾದ್ದೂರ ಶಾಸ್ತ್ರಿ ಜಲಾಶಯ ವ್ಯಾಪ್ತಿಯ ಎಲ್ಲ ಕಾಲುವೆಗಳಿಗೆ ನೀರು ಹರಿಸಬೇಕು ಹಾಗೂ ಕಾಲುವೆ ವ್ಯಾಪ್ತಿಯಲ್ಲಿ ನೀರಾವರಿಯಿಂದ ವಂಚಿತಗೊಂಡಿರುವ ಜಮೀನುಗಳಿಗೆ ನೀರುಣಿಸಲು ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಚಿವ ಎಸ್‌.ಕೆ. ಬೆಳ್ಳುಬ್ಬಿ ನೇತೃತ್ವದಲ್ಲಿ ರೈತರು ಮುಖ್ಯ ಅಭಿಯಂತರರಿಗೆ ಮನವಿ ಸಲ್ಲಿಸಿದರು.

Advertisement

ಸ್ಥಳೀಯ ಕೃಷ್ಣಾ ಭಾಗ್ಯ ಜಲ ನಿಗಮದ ಮುಖ್ಯ ಅಭಿಯಂತರ ಕಚೇರಿಯಲ್ಲಿ ಮನವಿ ಸಲ್ಲಿಸಿ ಮಾತನಾಡಿದ ಮಾಜಿ ಸಚಿವ ಎಸ್‌.ಕೆ. ಬೆಳ್ಳುಬ್ಬಿ, ಪ್ರಸಕ್ತ ಮುಂಗಾರು ಮಳೆ ಈ ಭಾಗದಲ್ಲಿ ಕೈಕೊಟ್ಟಿದ್ದರಿಂದ ರೈತಾಪಿ ಸಮೂಹ ತೀವ್ರ ಚಿಂತೆಗೀಡಾಗಿದೆ. ರೈತರ ನೆರವಿಗೆ ಸರ್ಕಾರ ಮುಂದಾಗಬೇಕಾಗಿದೆ. ಶಾಸ್ತ್ರಿ ಜಲಾಶಯ ನಿರ್ಮಾಣಕ್ಕಾಗಿ ಲಕ್ಷಾಂತರ ಎಕರೆ ಜಮೀನು ಹಾಗೂ ಸುಮಾರು 4 ಲಕ್ಷ ಕುಟುಂಬಗಳು ತಮ್ಮ ಆಸ್ತಿ, ಮನೆ ಮಠಗಳನ್ನು ಕಳೆದುಕೊಂಡು ತ್ಯಾಗ ಮಾಡಿದ್ದಾರೆ. ಅವರ ನೆರವಿಗೆ ಬರಬೇಕಾದರೆ ಜಲಾಶಯ ವ್ಯಾಪ್ತಿಯ ಸುಮಾರು 30 ಸಾವಿರ ಹೆಕ್ಟೇರ್‌ ಪ್ರದೇಶಕ್ಕೆ ಜು.12ರೊಳಗೆ ಎಲ್ಲ ಕಾಲುವೆಗಳಿಗೆ ನೀರು ಹರಿಸಬೇಕು ಎಂದು ಒತ್ತಾಯಿಸಿದರು.

ಮುಳವಾಡ ಏತ ನೀರಾವರಿ ಹಾಗೂ ಆಲಮಟ್ಟಿ ಎಡದಂಡೆ, ಬಲದಂಡೆ ಸೇರಿದಂತೆ ವ್ಯಾಪ್ತಿಯ ಕಾಲುವೆಗಳಿಂದ ನೀರಾವರಿಗೊಳಪಡುತ್ತಿದ್ದರೂ ಕೂಡ ಕೆಲ ತಾಂತ್ರಿಕ ಸಮಸ್ಯೆಗಳಿಂದ ನೀರಾವರಿಯಿಂದ ವಂಚಿತಗೊಂಡಿವೆ. ಉದಾಹರಣೆಯಾಗಿ ಮುಳವಾಡ ಏತ ನೀರಾವರಿ ಯೋಜನೆಯಲ್ಲಿ ಚಿಮ್ಮಲಗಿ, ಕೊಲ್ಹಾರದ ಕೆಲ ಪ್ರದೇಶಗಳು ತಾಂತ್ರಿಕ ಸಮಸ್ಯೆಗಳಿಂದ ನೀರಾವರಿಯಿಂದ ವಂಚಿತಗೊಂಡಿವೆಯಾದರೂ ಅವುಗಳನ್ನು ಕೃಷ್ಣಾ ಅಚ್ಚುಕಟ್ಟು
ಪ್ರದೇಶದಲ್ಲಿಯೇ ಇವೆ. ಅವೆಲ್ಲಕ್ಕೂ ನೀರು ಪೂರೈಸಲಾಗುತ್ತಿದೆ ಎಂದು ದಾಖಲೆಯಲ್ಲಿವೆ. ಇದರಿಂದ ರೈತರಿಗೆ ತೀವ್ರ ತೊಂದರೆಯಾಗಲಿವೆ. ಆದ್ದರಿಂದ ಆ ಎಲ್ಲ ಪ್ರದೇಶಗಳಿಗೆ ನೀರು ಹರಿಸಲು ವಿಶೇಷ ಕಾಳಜಿವಹಿಸಬೇಕು ಎಂದರು.

ಈಗಾಗಲೇ ಕಾಲುವೆ ನಿರ್ಮಾಣವಾಗಿದ್ದರೂ ಕೂಡ ಕೋಲ್ಹಾರ ಪಟ್ಟಣದ ರಾಚೋಟೇಶ್ವರ ದೇವಸ್ಥಾನದ ಪಕ್ಕ ಹಾಗೂ ಯು.ಕೆ.ಪಿ. ಕೋಲ್ಹಾರ ರಸ್ತೆ ಅಕ್ಕಪಕ್ಕ ಸುಮಾರು 500 ಎಕರೆ ಅದರಂತೆ ಕೋಲ್ಹಾರ ಮಹಾದೇವಪ್ಪನ ಮಡ್ಡಿ ಹತ್ತಿರ ಸಾವಿರ ಎಕರೆ, ಗಣಿ ಮತ್ತು ಚಿಮ್ಮಲಗಿ ಗ್ರಾಮಗಳ ಸುಮಾರು ಐದನೂರು ಎಕರೆ ಜಮೀನುಗಳು ನೀರಾವರಿಗೆ ಒಳಪಟ್ಟರು ಸಹ ಆ ಭೂಮಿಗಳೂ ಇನ್ನೂ ನೀರು ಕಾಣುತ್ತಿಲ್ಲ. ಈ ಜಮೀನುಗಳಿಗೆ ನೀರಾವರಿ ಸೌಲಭ್ಯ ಒದಗಿಸಿಕೊಡಲು ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಚಿವ ಎಸ್‌.ಕೆ.ಬೆಳ್ಳುಬ್ಬಿ ಹೇಳಿದರು.

ಮನವಿ ಸ್ವೀಕರಿಸಿ ಮಾತನಾಡಿದ ಮುಖ್ಯ ಅಭಿಯಂತರ ಎಸ್‌.ಎಚ್‌.ಮಂಜಪ್ಪ, ಕೃಷ್ಣಾ ಮೇಲ್ದಂಡೆ ಯೋಜನೆ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನಿಸಿದಂತೆ ಎಲ್ಲ ಕಾಲುವೆಗಳಿಗೂ ನೀರು ಹರಿಸಲು ಕ್ರಮಕೈಗೊಳ್ಳಲಾಗುವುದು ಎಂದರು. ಈ ಸಂದರ್ಭದಲ್ಲಿ ಎಸ್‌.ಎಂ. ಪಾಟೀಲ, ಕರವೀರ ಮಡಿವಾಳ, ಎಸ್‌.ವೈ. ಬೀಳಗಿ, ಸಂಗಪ್ಪ ಹುಚ್ಚಪ್ಪಗೋಳ, ಅಂದಾನಿ ತೋಳಮಟ್ಟಿ, ಶೇಖರ ದೊಡಮನಿ, ಸದಾನಂದ ಸಾತಿಹಾಳ, ಶಿವು ದೊಡಮನಿ, ರಾಜು ನದಾಫ್‌, ಅಶೋಕ ಉಳ್ಳಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next