Advertisement

ಸೋಲಾರ್‌ ಪಂಪ್‌ನಿಂದ ನಳ್ಳಿ ನೀರು

12:01 PM Oct 08, 2022 | Team Udayavani |

ಪುತ್ತೂರು: ಪಂಚಾಯತ್‌ಗಳು ವಿದ್ಯುತ್‌ ಬಿಲ್‌ ಹೊರೆಯಿಂದ ನಲುಗುತ್ತಿರುವ ಮಧ್ಯೆ ಪುತ್ತೂರಿನ ಗ್ರಾ.ಪಂ.ವೊಂದು ಸೌರಶಕ್ತಿ ಆಧಾರಿತ ಪಂಪ್‌ ಬಳಸಿ ಮನೆ-ಮನೆಗೆ ನೀರೋದಗಿಸಲು ಹೊರಟಿದೆ. ಪುತ್ತೂರು ತಾಲೂಕಿನಲ್ಲಿ ಪ್ರಪ್ರಥಮ ಬಾರಿಗೆ ಆರ್ಯಾಪು ಗ್ರಾ.ಪಂ. ವಿದ್ಯುತ್‌ ಪಂಪ್‌ಗೆ ಪರ್ಯಾಯವಾಗಿ ಸೋಲಾರ್‌ ಪಂಪ್‌ ಅಳವಡಿಸಿ ಯಶಸ್ಸು ಸಾಧಿಸಿದೆ.

Advertisement

2.40 ಲಕ್ಷ ರೂ. ಉಳಿಕೆ

ಸೋಲಾರ್‌ ಆಧಾರಿತ ಪಂಪ್‌ ಅನ್ನು ಕೊಲ್ಯದಲ್ಲಿ ಅಳವಡಿಸಿದ್ದು ಇದಕ್ಕಾಗಿ 4.25 ಲಕ್ಷ ರೂ. ವೆಚ್ಚ ಭರಿಸಲಾಗಿದೆ. ತನ್ಮೂಲಕ ವಿದ್ಯುತ್‌ ಬಿಲ್‌ ಪಾವತಿಯ ಹೊರೆ ಇಲ್ಲದೆ ನೀರು ಪೂರೈಕೆ ಮಾಡುತ್ತಿದೆ. ಪರಿಸರದ 84 ಮನೆಗಳಿಗೆ ನಳ್ಳಿ ನೀರು ಪೂರೈಸಲಾಗುತ್ತಿದೆ. ಈ ಹಿಂದೆ ವಿದ್ಯುತ್‌ ಆಧಾರಿತ ಪಂಪ್‌ ಬಳಕೆಯ ಸಂದರ್ಭದಲ್ಲಿ ತಿಂಗಳಿಗೆ 20 ಸಾವಿರ ರೂ. ವಿದ್ಯುತ್‌ ಬಿಲ್‌ ಬರುತ್ತಿತ್ತು. ಈಗ ಆ ಸಮಸ್ಯೆ ಇಲ್ಲ. ಶೂನ್ಯ ಖರ್ಚಿನಲ್ಲಿ ನೀರು ಪೂರೈಸಬಹುದಾಗಿದೆ. ಇದರಿಂದ ಗ್ರಾ.ಪಂ.ಗೆ ವರ್ಷಕ್ಕೆ 2.40 ಲಕ್ಷ ರೂ.ಖರ್ಚು ಉಳಿಕೆಯಾಗುತ್ತಿದೆ.

ಮೂರೂವರೆ ತಾಸಿನಲ್ಲಿ ಭರ್ತಿ

5 ಎಚ್‌ಪಿ ಸಾಮರ್ಥ್ಯದ ಸೋಲಾರ್‌ ಆಧಾರಿತ ಪಂಪ್‌ ಅನ್ನು ಮೂರುವರೆ ತಾಸು ಚಾಲೂ ಮಾಡಿದರೆ 50 ಸಾವಿರ ಲೀಟರ್‌ ವಾಟರ್‌ ಟ್ಯಾಂಕ್‌ನಲ್ಲಿ ನೀರು ಭರ್ತಿ ಆಗುತ್ತದೆ. ಪಂಪ್‌ಗೆ ಐದು ವರ್ಷ ಗ್ಯಾರೆಂಟಿ ಇದೆ. ಹೆಚ್ಚು ಮಳೆ ಬೀಳುವ ಸಮಯ ನೀರು ಬರುವ ವೇಗ ನಿಧಾನವಾಗಿರುತ್ತದೆ. ಉಳಿದಂತೆ ಪ್ರತೀ ದಿನವು ವಿದ್ಯುತ್‌ ಪಂಪ್‌ ಸಾಮರ್ಥ್ಯದಂತೆ ನೀರೊದಗಿಸುತ್ತಿದೆ.

Advertisement

ಪ್ರತೀ ವರ್ಷ ಅನುದಾನ ಮೀಸಲು

ಆರ್ಯಾಪು ಗ್ರಾಮ ಪಂಚಾಯತ್‌ನ ಒಟ್ಟು ಜನಸಂಖ್ಯೆ 9,500. ಇದರಲ್ಲಿ 1250 ನಳ್ಳಿ ಸಂಪರ್ಕ ಹೊಂದಿರುವ ಮನೆಗಳಿವೆ. ಒಟ್ಟು 31 ಕೊಳವೆಬಾವಿ ಇದೆ. ಈಗಾಗಲೇ ಕಲ್ಲಪೆìಯಲ್ಲಿ ಎರಡನೇ ಸೋಲಾರ್‌ ಪಂಪ್‌ ಅಳವಡಿಸಲು ಅನುದಾನ ಇರಿಸಿದ್ದು ಒಂದು ತಿಂಗಳಲ್ಲಿ ಅನುಷ್ಠಾನಗೊಳ್ಳಲಿದೆ. ಜೆಜೆಎಂನಲ್ಲಿ ಎಂಟು ಸೋಲಾರ್‌ ಪಂಪ್‌ ಅಳವಡಿಸಲಾಗುತ್ತದೆ. ಉಳಿದ 21 ಕೊಳವೆಬಾವಿಗಳಿಗೆ ಸೋಲಾರ್‌ ಪಂಪ್‌ ಅಳವಡಿಸುವ ಸಲುವಾಗಿ ಪ್ರತೀ ವರ್ಷ ಅನುದಾನ ಮೀಸಲಿಡಲು ಆಡಳಿತ ಮಂಡಳಿ ನಿರ್ಧರಿಸಿದೆ.

ಗ್ರಾ.ಪಂ., ಮನೆ, ಶಾಲೆಗೆ ಸೋಲಾರ್‌ ಬೆಳಕು

ಆರ್ಯಾಪು ಗ್ರಾ.ಪಂ. ಕಚೇರಿ, ಸಭಾಭವನವು ಸೋಲಾರ್‌ ವ್ಯವಸ್ಥೆಯಲ್ಲೇ ಬೆಳಕು ಕಂಡಿದೆ. 3 ಕೆ.ವಿ.ಸಾಮರ್ಥ್ಯದ ಸೋಲಾರ್‌ ಅಳವಡಿಸಿ ಇನ್‌ವರ್ಟರ್‌ ಮೂಲಕ ವಿದ್ಯುತ್‌ ಹರಿಸಿ ದಿನ ನಿತ್ಯದ ಅಗತ್ಯತೆಗಳಿಗೆ ಬಳಸಲಾಗುತ್ತಿದೆ. ಇಲ್ಲಿ ವಿದ್ಯುತ್‌ ಬಳಕೆ ತೀರಾ ಕಡಿಮೆ ಇದ್ದು ತಿಂಗಳಿಗೆ ಕೇವಲ 1000 ರೂ. ಬಿಲ್‌ ಬರುತ್ತದೆ. ಅಮೃತ ಗ್ರಾಮ ಪಂಚಾಯತ್‌ನಲ್ಲಿ ಹಂಟ್ಯಾರು ಶಾಲೆಯಲ್ಲಿ ಸೋಲಾರ್‌ ಆಧಾರಿತ ಸ್ಮಾರ್ಟ್‌ ಕ್ಲಾಸ್‌ ಅನುಷ್ಠಾನಿಸಲಾಗಿದೆ. ಕುರಿಯ ಶಾಲೆಯಲ್ಲಿ ಸೋಲಾರ್‌ ಆಧಾರಿತ ಸ್ಮಾರ್ಟ್‌ ಕ್ಲಾಸ್‌ ತೆರೆಯಲು ಯೋಜನೆ ರೂಪಿಸಲಾಗಿದೆ. ಈಗಾಗಲೇ 75 ನೇ ವರ್ಷದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ 75 ಮನೆಗಳಿಗೆ ಸೋಲಾರ್‌ ಹೋಂ ಲೈಟ್‌ ನೀಡಲಾಗಿದೆ. 60 ಮಂದಿ ಎಸ್‌ಸಿ-ಎಸ್‌ಟಿ ಫಲಾನುಭವಿಗಳಿಗೆ, 10 ಅಂಗವಿಕಲ ಫಲಾನುಭವಿಗಳಿಗೆ, 5 ಇತರ ಫಲಾನುಭವಿಗಳಿಗೆ ಹೋಂ ಲೈಟ್‌ ನೀಡಲಾಗಿದೆ.

ಎಂಟು ಸೋಲಾರ್‌ ಪಂಪ್‌ಗೆ ಒಪ್ಪಿಗೆ

ರಾಜ್ಯದಲ್ಲೇ ಜಲ ಜೀವನ್‌ ಮಿಷನ್‌ ಯೋಜನೆಯಡಿ ಸೋಲಾರ್‌ ಪಂಪ್‌ ಗೆ ಪ್ರಸ್ತಾವನೆ ಸಲ್ಲಿಸಿದ ಮೊದಲ ಪಂಚಾಯತ್‌ ಆರ್ಯಾಪು ಗ್ರಾ.ಪಂ. ವ್ಯಾಪ್ತಿಯ ಆರ್ಯಾಪು ಹಾಗೂ ಕುರಿಯ ಗ್ರಾಮಗಳಿಗೆ ತಲಾ 4 ರಂತೆ ಒಟ್ಟು ಎಂಟು ಸೋಲಾರ್‌ ಪಂಪ್‌ ಅಳವಡಿಕೆಯ ಬೇಡಿಕೆಗೆ ಒಪ್ಪಿಗೆ ಸಿಕ್ಕಿದೆ. ನಿಯಮ ಪ್ರಕಾರ ಜೆಜೆಎಂನಲ್ಲಿ ವಿದ್ಯುತ್‌ ಪಂಪ್‌ ಅಳವಡಿಕೆಗೆ ಮಾತ್ರ ಅವಕಾಶ ಇದ್ದರೂ ಆರ್ಯಾಪು ಪಂಚಾಯತ್‌ ಈಗಾಗಲೇ ಸೋಲಾರ್‌ ಪಂಪ್‌ ಅಳವಡಿಸಿ ಯಶಸ್ಸು ಕಂಡಿರುವ ಕಾರಣ ಅನುಮತಿ ಸಿಕ್ಕಿದೆ.

ಗ್ರಾಮವನ್ನು ಬೆಳಗುವ ಉದ್ದೇಶ: ಮಡಂತ್ಯಾರು ಗ್ರಾ.ಪಂ.ನಲ್ಲಿ ಸೋಲಾರ್‌ ಪಂಪ್‌ ಅಳವಡಿಸಿ ಯಶಸ್ಸಿಯಾಗಿದ್ದು ಆ ಮಾದರಿಯನ್ನು ಆರ್ಯಾಪಿನಲ್ಲಿ ಅನುಷ್ಠಾನಿಸಿ ಯಶಸ್ಸು ಪಡೆದಿದ್ದೇವೆ. ಕಲ್ಲಪೆìಯಲ್ಲಿ ಸೋಲಾರ್‌ ಪಂಪ್‌ ಅಳವಡಿಸಲು ಯೋಜನೆ ರೂಪಿಸಲಾಗಿದೆ. ವಿದ್ಯುತ್‌ ಖರ್ಚಿಗೆ ಕಡಿವಾಣ ಹಾಕಿ ಸೋಲಾರ್‌ ಬಳಸಿ ಗ್ರಾಮವನ್ನು ಬೆಳಗುವ ಉದ್ದೇಶ ಹೊಂದಲಾಗಿದೆ. –ನಾಗೇಶ್‌, ಪಿಡಿಒ ಆರ್ಯಾಪು ಗ್ರಾ.ಪಂ.

ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next