Advertisement

‘ನೀರು ಪೂರೈಕೆಗೆ ವಾರ್ಡ್‌ಗೊಂದು ಟ್ಯಾಂಕರ್‌ ನಿಗದಿ’

02:28 AM May 26, 2019 | Team Udayavani |

ಮಹಾನಗರ: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಜನರಿಗೆ ಟ್ಯಾಂಕರ್‌ನಲ್ಲಿ ನೀರು ಪೂರೈಕೆ ಮಾಡುವ ಕುರಿತಂತೆ ವಾರ್ಡ್‌ಗೊಂದು ಟ್ಯಾಂಕರ್‌ ನಿಗದಿ ಪಡಿಸಲು ಮಹಾನಗರ ಪಾಲಿಕೆಗೆ ಸೂಚನೆ ನೀಡಲಾಗಿದೆ ಎಂದು ನಗರಾಭಿವೃದ್ಧಿ ಖಾತೆಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌ ತಿಳಿಸಿದರು.

Advertisement

ಶನಿವಾರ ನಗರದ ಬೆಂದೂರ್‌ವೆಲ್ನಲ್ಲಿರುವ ಪಾಲಿಕೆಯ ನೀರು ಶುದ್ಧೀಕರಣ ಘಟಕಕ್ಕೆ ಭೇಟಿ ನೀಡಿ ನೀರು ಸರಬರಾಜು ವ್ಯವಸ್ಥೆ ಬಗ್ಗೆ ಅವರು ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಆಯುಕ್ತ ನಾರಾಯಣಪ್ಪ, ನೀರು ಸರಬರಾಜು ವಿಭಾಗದ ಎಂಜಿನಿಯರ್‌ಗಳಾದ ನರೇಶ್‌ ಶೆಣೈ, ದೇವರಾಜ್‌, ಮಾಜಿ ಮೇಯರ್‌ಗಳಾದ ಭಾಸ್ಕರ್‌ ಕೆ., ಹರಿನಾಥ್‌ ಮತ್ತು ಎಂ. ಶಶಿಧರ ಹೆಗ್ಡೆ, ಮಾಜಿ ಕಾರ್ಪೊರೇಟರ್‌ಗಳಾದ ನವೀನ್‌ ಆರ್‌. ಡಿ’ಸೋಜಾ, ಅಪ್ಪಿ, ಎ.ಸಿ. ವಿನಯರಾಜ್‌, ಅಶೋಕ್‌ ಕುಮಾರ್‌ ಡಿ.ಕೆ., ಪ್ರಕಾಶ್‌ ಸಾಲ್ಯಾನ್‌, ಆಶಾ ಡಿ’ಸಿಲ್ವಾ, ರತಿಕಲಾ, ಕವಿತಾ ವಾಸು, ಅಬ್ದುಲ್ ರವೂಫ್‌ ಮುಂತಾದವರು ಉಪಸ್ಥಿತರಿದ್ದು, ಅವರೊಂದಿಗೆ ಸಚಿವರು ಚರ್ಚಿಸಿದರು.

ವಾರ್ಡ್‌ಗೊಂದು ಟ್ಯಾಂಕರ್‌
ಪ್ರಸ್ತುತ ಪಾಲಿಕೆಯಲ್ಲಿ 25 ಟ್ಯಾಂಕರ್‌ಗಳಿದ್ದು, ಇನ್ನೂ 30 ಟ್ಯಾಂಕರ್‌ಗಳನ್ನು ಗುರುತಿಸಲಾಗಿದೆ. ಎಂಜಿನಿಯರ್‌ಗಳ ಸಂಘದ ಸಹಕಾರದೊಂದಿಗೆ ಈ ಟ್ಯಾಂಕರ್‌ಗಳನ್ನು ಪಡೆದು ವಾರ್ಡ್‌ಗೊಂದು ಟ್ಯಾಂಕರನ್ನು ನಿಗದಿ ಪಡಿಸಿ ನೀರು ಸರಬರಾಜು ಮಾಡಲಾಗುವುದು ಎಂದು ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ಮನೆಗೊಂದು ಬಾವಿ
ಟ್ಯಾಂಕರ್‌ಗಳಿಗೆ ನೀರು ಸರಬರಾಜು ಬಗ್ಗೆ ಪಾಲಿಕೆ ವ್ಯಾಪ್ತಿಯ
ಸಾರ್ವಜನಿಕ ಬಾವಿಗಳನ್ನು ಸ್ವಚ್ಛಗೊಳಿಸಲಾಗಿದೆ.ಈಗಾಗಲೇ 114 ಕೊಳವೆ ಬಾವಿಗಳಿದ್ದು, ಹೆಚ್ಚುವರಿಯಾಗಿ 15 ಕೊಳವೆ ಬಾವಿಗಳನ್ನು ಕೊರೆಯಲು ನಿರ್ಧರಿಸಲಾಗಿದೆ. ಇದರ ಹೊರತಾಗಿ ಖಾಸಗಿ ಬಾವಿಗಳನ್ನು ಸ್ವತ್ಛಗೊಳಿಸಲು ಮನವಿ ಸಲ್ಲಿಸಿದರೆ ವ್ಯವಸ್ಥೆ ಮಾಡ ಲಾಗುವುದು. ಮಂಗಳೂರಿನಲ್ಲಿ ರೇಷನಿಂಗ್‌ ನಿಯಮ ಜಾರಿಗೊಳಿಸಿದ್ದರಿಂದ ಒಂದು ಹಂತದ ತನಕ ನೀರು ಪೂರೈಕೆ ಮಾಡಲು ಸಾಧ್ಯವಾಗಿದೆ. ರೇಷನಿಂಗ್‌ ವ್ಯವಸ್ಥೆ ಮುಂದು ವರಿಸಿಕೊಂಡು ಹೋಗುವುದರಿಂದ ಜೂನ್‌ 6ರಿಂದ 10 ತನಕವೂ ನಗರದಲ್ಲಿ ನೀರು ಸರಬರಾಜು ಮಾಡಲು ಸಾಧ್ಯವಾಗ ಬಹುದು ಎಂದು ನಿರೀಕ್ಷಿಸಲಾಗಿದೆ ಎಂದು ಸಚಿವ ಯು.ಟಿ. ಖಾದರ್‌ ತಿಳಿಸಿದರು.

Advertisement

ಸಿವಿಲ್‌ ಎಂಜಿನಿಯರ್‌ಗಳ ಸೇವೆ ಬಳಕೆ
ಮಹಾನಗರ ಪಾಲಿಕೆಯಲ್ಲಿ ನೀರು ಪೂರೈಕೆ ವ್ಯವಸ್ಥೆಗೆ ಸಂಬಂಧಿಸಿ 5 ಮಂದಿ ಎಂಜಿನಿಯರುಗಳಿದ್ದು, ಪ್ರಸ್ತುತ ನೀರಿನ ಸಮಸ್ಯೆ ತೀವ್ರವಾಗಿರುವುದರಿಂದ ಈ ಐದು ಮಂದಿ ಎಂಜಿನಿಯರುಗಳಿಂದ ನಿಭಾಯಿಸಲು ಕಷ್ಟವಾಗುತ್ತಿದೆ. ಹಾಗಾಗಿ ಪಾಲಿಕೆಯಲ್ಲಿರುವ 12 ಜನ ಸಿವಿಲ್‌ ಎಂಜಿನಿಯರ್‌ಗಳ ಸೇವೆಯನ್ನು ತಾತ್ಕಾಲಿಕವಾಗಿ ನೀರು ಪೂರೈಕೆ ವ್ಯವಸ್ಥೆಯ ನಿರ್ವಹಣೆಗೆ ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಸಚಿವ ಖಾದರ್‌ ತಿಳಿಸಿದರು.

ಕಂಟ್ರೋಲ್ ರೂಂ
ನಗರದಲ್ಲಿ ಯಾವುದೇ ಪ್ರದೇಶದಲ್ಲಿ ನೀರು ಬಾರದಿದ್ದರೆ ಅಥವಾ ನೀರಿನ ಸಮಸ್ಯೆ ಇದ್ದರೆ ಅಂಥವರು ಮಹಾನಗರ ಪಾಲಿಕೆಯ ಕಂಟ್ರೋಲ್ ರೂಂ. ಸಂಪರ್ಕಿಸ ಬಹುದು: ಕಂಟ್ರೋಲ್ ರೂಂ ನಂಬರ್‌: 0824- 2220303, 0824- 2220362.ಜೂನ್‌ ಮೊದಲ ವಾರದಲ್ಲಿ ಮಳೆ ಬರ ಬಹುದೆಂದು ಹವಾಮಾನ ಇಲಾಖೆ ತಿಳಿಸಿದ್ದು, ಮಳೆ ಬಂದು ನೀರಿನ ಸಮಸ್ಯೆ ನೀಗುವಂತಾಗಲಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next