ಉಡುಪಿ: ನಗರಸಭೆ ಅಧಿಕಾರಿಗಳಿಗೆ ಬಜೆ ಡ್ಯಾಂನಿಂದ ನೀರೆತ್ತುವ ಪ್ರಕ್ರಿಯೆಗೆ ಬಸ್ತಿ ಹಾಗೂ ಮಾಣಾಯಿ ಗ್ರಾಮಸ್ಥರು ತಡೆಯೊಡ್ಡಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಈ ಸಂದರ್ಭ ಶಾಸಕ ಕೆ.ರಘುಪತಿ ಭಟ್ ಸ್ಥಳಕ್ಕೆ ಭೇಟಿ ನೀಡಿ ಸಾರ್ವಜನಿಕರನ್ನು ಮನವೊಲಿಸಿ ನೀರು ಪಂಪಿಂಗ್ ಮಾಡುವ ಕಾರ್ಯಕ್ಕೆ ಅನುವು ಮಾಡಿಕೊಟ್ಟರು. ಸ್ವಂತ ಖರ್ಚಿನಿಂದ ಗ್ರಾಮಸ್ಥರಿಗೆ ಪ್ರತ್ಯೇಕವಾಗಿ ಟ್ಯಾಂಕರ್ ನೀರು ನೀಡುವುದಾಗಿ ಭರವಸೆ ನೀಡಿ ಬುಧವಾರ ಗ್ರಾಮಸ್ಥರನ್ನು ಭೇಟಿ ಮಾಡಿ ನೀರಿನ ವ್ಯವಸ್ಥೆಯನ್ನು ಕಲ್ಪಿಸಿದರು.
ಇದಲ್ಲದೆ ಭಟ್ ಅವರು ಉಡುಪಿ ನಗರದ ಭಾಗಗಳಲ್ಲಿ ಐದಾರು ಟ್ಯಾಂಕರ್ ಮೂಲಕ ನೀರು ಬಿಡುತ್ತಿದ್ದಾರೆ. ಆದರೆ ನೀತಿ ಸಂಹಿತೆ ಇರುವ ಕಾರಣ ಇದನ್ನು ಹೇಳಿಕೊಂಡಿಲ್ಲ ಎಂದು ಭಟ್ ತಿಳಿಸಿದ್ದಾರೆ.
ನಗರಸಭೆ ನೀರು
ಮೇ 4ರಿಂದ ಸ್ಥಗಿತಗೊಂಡ ಬಜೆ ಅಣೆಕಟ್ಟಿನ ನೀರು ಮೇ 8ರಂದು ಅಲ್ಲಲ್ಲಿ ಕೆಲವು ಪ್ರದೇಶಗಳಿಗೆ ಪೂರೈಕೆ ಆಗಿದೆ. ಮಲ್ಪೆ, ಕೊಡವೂರು, ಬಾಳೆಕಟ್ಟೆ, ಕಲ್ಮಾಡಿ, ಕಲ್ಮಾಡಿ ಚರ್ಚ್ ಹಿಂಭಾಗ, ಬಂಕೇರ್‌ಕಟ್ಟೆ, ಪಡುಕೆರೆ, ಶಾಂತಿನಗರ, ಮೂಡುಬೆಟ್ಟು, ಬಾಪುತೋಟಾ, ಸಸಿ ತೋಟ, ಮಲ್ಪೆ ಸೆಂಟ್ರಲ್, ಕೊಳ, ನೆರ್ಗಿ, ವಡಪಾಂಡೇಶ್ವರ, ಮಲ್ಪೆ ಬೀಚ್, ಚೆನ್ನಂಗಡಿ, ಹೆಬ್ಟಾರ್ ಮಾರ್ಗ, ಕೊಡವೂರು ಸೇತುವೆ ಸೇರಿದಂತೆ ಇತರೆ ಕಡೆ ನೀರು ಒದಗಿಸಲಾಗಿದೆ. ಹೆಚ್ಚುವರಿಯಾಗಿ 4 ಪಂಪ್ ಬಳಸಿಕೊಂಡು ಬಜೆ ಡ್ಯಾಂನಲ್ಲಿ ನೀರು ಒದಗಿಸುವ ಕಾರ್ಯ ಪ್ರಾರಂಭವಾಗಿದೆ.