ಮಂಗಳೂರು: ಮಂಗಳೂರು ನಗರಕ್ಕೆ ನೀರು ಪೂರೈಸುವ ತುಂಬೆ ಡ್ಯಾಂನಲ್ಲಿ ನೀರಿನ ಮಟ್ಟದಲ್ಲಿ ತೀವ್ರ ಕುಸಿತ ಉಂಟಾಗಿರುವ ಕಾರಣದಿಂದಾಗಿ ನಾಳೆ (ಮೇ 4) ರಿಂದ ಮಂಗಳೂರು ನಗರ ವ್ಯಾಪ್ತಿಯಲ್ಲಿ ರೇಷನಿಂಗ್ ಮೂಲಕ ನೀರಿನ ಪೂರೈಕೆ ಮಾಡಲಾಗುವುದು ಎಂದು ಜಿಲ್ಲಾಡಳಿತ ಪತ್ರಿಕಾ ಪ್ರಕಟನೆ ಹೊರಡಿಸಿದೆ.
ಈ ಬಗ್ಗೆ ಎಲ್ಲಾ ರೀತಿಯ ಸಾಧಕ ಬಾಧಕಗಳನ್ನು ಪರಿಶೀಲಿಸಿ ಜಿಲ್ಲಾಡಳಿತ ಕೆಲವು ನಿರ್ಣಯಗಳನ್ನು ಕೈಗೊಂಡಿದ್ದು, ಲಭ್ಯವಿರುವ ನೀರನ್ನು ಮಂಗಳೂರು ನಗರ ಪ್ರದೇಶಕ್ಕೆ (ಮಂಗಳೂರು ನಗರ ದಕ್ಷಿಣ) ಮತ್ತು ಸುರತ್ಕಲ್ (ಮಂಗಳೂರು ಉತ್ತರ) ಭಾಗಕ್ಕೆ ʻಪರ್ಯಾಯ ದಿನʼಗಳಲ್ಲಿ ನೀರು ಬಿಡಲು ಸೂಚಿಸಲಾಗಿದೆ.
ಅದಲ್ಲದೆ, ಕಟ್ಟಡ ರಚನೆ, ಇತರೆ ನಿರ್ಮಾಣ ಕಾಮಗಾರಿಗಳು ಹಾಗೂ ವಾಹನ ತೊಳೆಯುವ ಸರ್ವೀಸ್ ಸ್ಟೇಷನ್‌ಗಳ ಜೋಡನೆಯನ್ನು ಮುಂದಿನ ಆದೇಶದವರೆಗೆ ಕಡಿತಗೊಳಿಸಲಾಗುವುದು ಎಂದು ಸೂಚನೆ ನೀಡಲಾಗಿದೆ.
ಮಹಾನಗರದ ವ್ಯಾಪ್ತಿಯಲ್ಲಿರುವ ಸಾರ್ವಜನಿಕರು ನೀರನ್ನು ವಿನಾ ಕಾರಣ ಪೋಲು ಮಾಡುತ್ತಿರುವುದು ಕಂಟಡುಬಂದಲ್ಲಿ ಯಾವುದೇ ಸೂಚನೆ ನೀಡದೆ ಜೋಡನೆ ಕಡಿತಗೊಳಿಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.
ಈ ಸೂಚನೆಯಂತೆ ದಿನಾಂಕ 05- 05- 2023 ರಂದು ಮಂಗಳೂರು ನಗರ ಉತ್ತರಕ್ಕೆ, ದಿನಾಂಕ 06-05-2023 ರಂದು ಮಂಗಳೂರು ನಗರ ದಕ್ಷಿಣ ಹೀಗೆ ಕ್ರಮಾನುಗತವಾಗಿ ಈ ಮೇಲೆ ತಿಳಿಸಿದಂತೆ ನೀರು ಪೂರೈಕೆ ಮಾಡಲು ನಿರ್ಧರಿಸಲಾಗಿದೆ.
ಲಭ್ಯವಿರುವ ನೀರನ್ನು ಈ ರೀತಿಯಾಗಿ ಪೂರೈಕೆ ಮಾಡುವುದು ಅನಿವಾರ್ಯವಾಗಿದ್ದು ಸಾರ್ವಜನಿಕರು ನಗರ ಪಾಲಿಕೆಯೊಂದಿಗೆ ಸಹಕರಿಸಬೇಕೆಂದು ಕೋರಲಾಗಿದೆ.