ಕುಮಟಾ: ತಾಲೂಕಿನ ಮರಾಕಲ್ ಸಮೀಪ ಅಘನಾಶಿನಿ ನದಿ ನೀರಿಗೆ ಅಕ್ರಮವಾಗಿ ಪಂಪಸೆಟ್ ಬಳಸಿ ನೀರನ್ನು ವ್ಯವಸಾಯ ಹಾಗೂ ಇನ್ನಿತರ ಕಾರ್ಯಗಳಿಗೆ ಬಳಕೆಯಾಗುತ್ತಿದ್ದು, ಜೊತೆಗೆ ಒಳಹರಿವು ಕಡಿಮೆಯಾದ ಕಾರಣ ತಾಲೂಕಿಗೆ ನೀರಿನ ಸರಬರಾಜನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ.
ಒಂದೆಡೆ ಬಿರು ಬೇಸಿಗೆಯ ತಾಪ, ಇನ್ನೊಂದೆಡೆ ನೀರಿನ ಅಭಾವ.ಇವುಗಳ ಮದ್ಯೆ ತಾಲೂಕಿನ ದೀವಳ್ಳಿಯ ಬಳಿ ಅಕ್ರಮವಾಗಿ ಪಂಪ್ ಸೆಟ್ ಬಳಸಿ ನದಿ ನೀರನ್ನು ಮೇಲೆತ್ತಲಾಗುತ್ತಿದ್ದು, ಇದರಿಂದಾಗಿ ಮರಾಕಲ್ ನೀರನ್ನು ನಂಬಿ ಜೀವನ ನಡೆಸುವವರಿಗೆ ಕಷ್ಟಸಾದ್ಯವಾಗಿದೆ.ಕುಮಟಾ ಮತ್ತು ಹೊನ್ನಾವರ ಪಟ್ಟಣಕ್ಕೆ ಮರಾಕಲ್ ಸಮೀಪ ಅಘನಾಶಿನಿ ನದಿಯಿಂದ ವರ್ಷಪೂರ್ತಿ ನೀರು ಪೂರೈಕೆ ಮಾಡಲಾಗುತ್ತದೆ. ಆದರೆ ಬೇಸಿಗೆಯ ತಾಪ ಹೆಚ್ಚಿರುವುದರಿಂದ ಅಘನಾಶಿನಿ ನದಿಯಲ್ಲಿ ನೀರಿನ ಒಳ ಹರಿವು ಕಡಿಮೆಯಾಗಿದೆ. ಅಲ್ಲದೇ ಅಕ್ರಮವಾಗಿ ನೀರು ತೆಗೆಯುತ್ತಿರುವುದಿಂದ ಮರಾಕಲ್ ಬಳಿ ನದಿ ಬತ್ತಿ ಹೋಗಿದ್ದು, ಸದ್ಯ ನೀರಿನ ಪೂರೈಕೆಯನ್ನು ಸ್ಥಗಿತಗೊಳಿಸಲಾಗಿದೆ. ಈ ಮೊದಲು ಕೆಲವೊಂದು ಪ್ರದೇಶಕ್ಕೆ ದಿನವಿಡಿ ಹಾಗೂ ಕೆಲ ಪ್ರದೇಶಕ್ಕೆ ಎರಡು ದಿನಕ್ಕೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿತ್ತು.ಅತಿ ಹೆಚ್ಚು ಸಾಮರ್ಥ್ಯವಿರುವ ಪಂಪ್‌ಗಳಿಗೆ ಸಣ್ಣ ಪ್ರಮಾಣದ ನೀರಿನ ಹರಿವು ಸಾಲುವುದಿಲ್ಲ. ಇದರಿಂದ ಕುಮಟಾ ಮತ್ತು ಹೊನ್ನಾವರ ಪಟ್ಟಣ ವ್ಯಾಪ್ತಿಗೆ ನೀರು ಪೂರೈಕೆ ಸ್ಥಗಿತಗೊಳಿಸಲಾಗಿದ್ದು, ಟ್ಯಾಂಕರ್ ಮೂಲಕ ಪಟ್ಟಣಕ್ಕೆ ನೀರನ್ನು ಒದಗಿಸಲಾಗುತ್ತಿದೆ.
ಇದರ ಮಧ್ಯೆ ಕೆಲ ವ್ಯಕ್ತಿಗಳು ಕಂಡಕಂಡಲ್ಲಿ ಅಕ್ರಮವಾಗಿ ನದಿಗೆ ಪಂಪ್‌ಸೆಟ್ ಅಳವಡಿಸಿ, ಬೇಕಾಬಿಟ್ಟಿ ಬಳಸುತ್ತಿದ್ದಾರೆ. ಇದರಿಂದ ನದಿಯಲ್ಲಿ ನೀರಿನ ಹರಿವು ಮತ್ತಷ್ಟು ಕಡಿಮೆಯಾಗಿದೆ. ಅಕ್ರಮವಾಗಿ ವಿದ್ಯುತ್ ಪಡೆದು ರಾತ್ರಿ ವೇಳೆಯಲ್ಲಿ ಜಮೀನಿನಿಗೆ ಬಳಸುತ್ತಿದ್ದಾರೆ. ಇದರಿಂದ ನೀರಿನ ಮೂಲ ಇನ್ನಷ್ಟು ಬತ್ತಿ ಹೋಗಿದೆ. ಸಂಬಂಧಿಸಿದ ಅಧಿಕಾರಿಗಳು ನದಿಗೆ ಅಳವಡಿಸಿದ ಅಕ್ರಮ ಪಂಪ್‌ಸೆಟ್‌ಗಳನ್ನು ತೆರವುಗೊಳಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪಟ್ಟಣ ವ್ಯಾಪ್ತಿಯ ನಾಗರಿಕರ ಆಗ್ರಹವಾಗಿದೆ.ದೀವಳ್ಳಿಯ ಸಮೀಪ ಅಘನಾಶಿನಿ ನದಿಗೆ ಕೃಷಿ ಪಂಪ್ ಹಾಗೂ ಸಬ್‌ಮರ್ಸಿಬಲ್ ಪಂಪ್‌ನ್ನು ನೇರವಾಗಿ ನದಿಗೆ ಹಾಕಿರುವುದು ತುಂಬ ಅಪಾಯಕಾರಿ. ನೀರಿಗಾಗಿ ನದಿಗೆ ತೆರಳುವ ಜನರು ಮತ್ತು ಪ್ರಾಣಿಗಳ ಪ್ರಾಣ ಹಾನಿಯಾಗುವ ಸಂಭವ ಕೂಡ ಇದೆ. ಈ ಕುರಿತು ಸಂಭಂದಿಸಿದ ಅಧಿಕಾರಿಗಳು ಅಗತ್ಯ ಕ್ರಮ ವಹಿಸಬೇಕು ಎಂದು ಜನರು ಒತ್ತಾಯಿಸಿದ್ದಾರೆ.
10 ಸಾವಿರ ಲೀ. ಸಾಮರ್ಥ್ಯದ ಟ್ಯಾಂಕರ್ ಮೂಲಕ ಪ್ರತಿನಿತ್ಯ 3 ಟ್ರಿಪ್, 5 ಸಾವಿರ ಲೀ. ಸಾಮರ್ಥ್ಯದ 4 ಟ್ಯಾಂಕರ್‌ಗಳ ಮೂಲಕ 4 ಟ್ರಿಪ್, ಹಾಗೂ 1 ಸಾವಿರ ಲೀ. ಸಾಮರ್ಥ್ಯದ 1 ಟ್ಯಾಂಕರ್ ಬಳಸಿ ಒಟ್ಟೂ 8 ಟ್ರಿಪ್ ಸೇರಿ 1.50 ಲಕ್ಷ ಲೀಟರ್ ನೀರು ಪಟ್ಟಣ ವ್ಯಾಪ್ತಿಯ ಮನೆಗಳಿಗೆ ಈದೀಗ ಸರಬರಾಜು ಮಾಡಲಾಗುತ್ತಿದೆ.ಉಪ್ಪು ನೀರು ಬರುವ ಗುಂದ, ಶಶಿಹಿತ್ತಲ, ವನ್ನಳ್ಳಿ ವಾರ್ಡ್‌ಗಳಿಗೆ ದಿನನಿತ್ಯ ಹಾಗೂ ಉಳಿದ ವಾರ್ಡ್‌ಗಳಿಗೆ 2 ದಿನಕ್ಕೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ. ಆದರೂ ಕೆಲ ವಾರ್ಡ್‌ಗಳಿಗೆ ಪ್ರತಿನಿತ್ಯ ನೀರಿನ ಅವಶ್ಯಕತೆ ಉಂಟಾಗುತ್ತಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ತಹಸಿಲ್ದಾರ ಎಸ್.ಎಸ್ ನಾಯ್ಕಲ್ಮಠ, ಬೇಸಿಗೆ ಕಾಲದಲ್ಲಿ ನೀರಿನ ಸಮಸ್ಯೆ ಸಾಮಾನ್ಯ.ಅದಕ್ಕೆ ಪೂರಕವಾಗಿ ಜನರಿಗೆ ತೊಂದರೆ ಆಗದಂತೆ ನೀರನ್ನು ಪೂರೈಸುವ ಕಾರ್ಯ ಮಾಡಲಾಗುತ್ತಿದೆ.ಮರಾಕಲ್ ನ ಕುಡಿಯುವ ನದಿ ನೀರನ್ನು, ಪಂಪ್‌ಸೆಟ್ ಬಳಸಿ ಕೃಷಿ ಹಾಗೂ ಇನ್ನಿತರ ಕೆಲಸಗಳಿಗೆ ಬಳಕೆ ಮಾಡಿರುವ ಕುರಿತು ದೂರು ಬಂದಿದ್ದು, ಪಂಪ್‌ಸೆಟ್ ಅಳವಡಿಸಿದ ಬಗ್ಗೆ ಮಾಹಿತಿ ಪಡೆದು ಅಗತ್ಯ ಕ್ರಮ ವಹಿಸಲಾಗುತ್ತದೆ ಎಂದಿದ್ದಾರೆ.
ಇದನ್ನೂ ಓದಿ: Mt Everest ನಲ್ಲಿ ಪೇಸ್‌ಮೇಕರ್ ಅಳವಡಿಸಿಕೊಂಡಿದ್ದ ಮಹಿಳಾ ಆರೋಹಿ ಮೃತ್ಯು