Advertisement
ಈಗಾಗಲೇ ಪಾಲಿಕೆಯು ನೀರಿನ ರೇಷನಿಂಗ್ ಆರಂಭಿಸಿದೆ. ಆ ಪ್ರಕಾರ ವಾರದಲ್ಲಿ ನಾಲ್ಕು ದಿನ ನೀರು ಪೂರೈಕೆಯಾದರೆ, ಎರಡು ದಿನ ಸ್ಥಗಿತಗೊಳ್ಳಲಿದೆ. ಈಗಾಗಲೇ ರೇಷನಿಂಗ್‌ನ ಮೊದಲ ಭಾಗವಾಗಿ ಎ. 18ರಂದು ಸಂಜೆ 6 ಗಂಟೆಗೆ ನೀರು ಪೂರೈಕೆ ಸ್ಥಗಿತಗೊಂಡಿದೆ. ಪಾಲಿಕೆ ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ ರವಿವಾರ ಬೆಳಗ್ಗೆ ಆರು ಗಂಟೆಗೆ ನೀರು ಪೂರೈಕೆಯಾಗಲಿದೆ.
ನಾಲ್ಕು ದಿನ ನೀರು ಪೂರೈಕೆ ಮಾಡಿ, ಎರಡು ದಿನ ಸ್ಥಗಿತಗೊಳಿಸಿದರೆ, ಮನೆ ನಿರ್ವಹಣೆ ಕಷ್ಟವಾಗುತ್ತದೆ. ಇದರ ಬದಲಾಗಿ ಪ್ರತಿ ದಿನ ವೇಳಾಪಟ್ಟಿಯೊಂದಿಗೆ ನೀರು ಪೂರೈಕೆ ಮಾಡಲು ಪಾಲಿಕೆ ಕ್ರಮ ಕೈಗೊಳ್ಳಬೇಕು. ದಿನದಲ್ಲಿ ಇಷ್ಟು ಗಂಟೆ ನೀರು ಪೂರೈಕೆಯಾಗಲಿದೆ ಎಂದು ಜನರಿಗೆ ಮೊದಲೇ ತಿಳಿಸಬೇಕು. ಇದರಿಂದ ನೀರಿನ ಅಭಾವ ಉಂಟಾಗದು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಪರ್ಯಾಯ ಮೂಲಗಳೂ ಬತ್ತಿವೆ
ಕುಡಿಯುವ ನೀರಿಗೆ ಬಾವಿಯನ್ನು ಆಶ್ರಯಿಸಿದವರೂ ನೀರಿಗೆ ಹರಸಾಹಸ ಪಡುವಂತಾಗಿದೆ. ಏಕೆಂದರೆ, ಬಾವಿ ನೀರು ಕೂಡ ಕೆಲವೆಡೆ ಬತ್ತಿ ಹೋಗಿದೆ ಎಂದು ವಸಂತ ಯೆಯ್ನಾಡಿ ಹೇಳುತ್ತಾರೆ. ಅಲ್ಲದೆ, ಕೆಲವು ಮನೆಗಳ ಬಾವಿ ನೀರಿಗೆ ತ್ಯಾಜ್ಯ ಸೇರಿಕೊಂಡು ಕುಡಿಯಲು ಅಯೋಗ್ಯವಾಗಿರುವುದರಿಂದ ಕುಡಿಯುವ ನೀರಿಗೆ ಹಾಹಾಕಾರ ಪಡುವಂತಾಗಿದೆ.
Related Articles
ದುರಂತವೆಂದರೆ, ನಗರದ ಕೆಲವು ಸಾರ್ವಜನಿಕ ಶೌಚಾಲಯಗಳಲ್ಲಿಯೂ ನೀರಿಲ್ಲದೆ ಬೀಗ ಹಾಕುವ ಪರಿಸ್ಥಿತಿ ಬಂದಿದೆ. ನೀರಿಲ್ಲದ ಕಾರಣ ಕಂಕನಾಡಿ ಸಾರ್ವಜನಿಕ ಶೌಚಾಲಯಕ್ಕೆ ಮೂರು ದಿನಗಳಿಂದ ಬೀಗ ಜಡಿಯಲಾಗಿದೆ. ಪಂಪ್‌ವೆಲ್‌ನ ಸಾರ್ವಜನಿಕ ಶೌಚಾಲಯವೂ ಕೆಲವು ದಿನಗಳಿಂದ ಬೀಗ ಜಡಿದ ಸ್ಥಿತಿಯಲ್ಲಿದೆ. ಜ್ಯೋತಿ, ಮಾರ್ಕೆಟ್ ರಸ್ತೆಯ ಶೌಚಾಲಯಗಳಲ್ಲಿ ನೀರಿಲ್ಲದೆ ವಾಸನೆ ಹುಟ್ಟುತ್ತಿದೆ. ನಗರದ ಇನ್ನೂ ಕೆಲವೆಡೆ ಶೌಚಾಲಯಗಳಲ್ಲಿ ನೀರಿಲ್ಲದೆ ಜನ ಪರದಾಡುವಂತಾಗಿದೆ ಎಂದು ಕಂಕನಾಡಿಯ ಸುಧಾಕರ್ ಮಾಹಿತಿ ನೀಡಿದ್ದಾರೆ.
Advertisement