Advertisement
ದೇಶದ ಪ್ರಮುಖ ಪ್ರವಾಸಿ ಕೇಂದ್ರವಾಗಿರುವ ಮೈಸೂರಿಗೆ ಪ್ರತಿನಿತ್ಯ ಸ್ಥಳೀಯರು ಮಾತ್ರವಲ್ಲದೆ, ದೇಶ ವಿದೇಶಗಳ ಅಸಂಖ್ಯಾತ ಪ್ರವಾಸಿಗರು ಭೇಟಿ ನೀಡುತ್ತಾರೆ. ಮೈಸೂರಿನ ವಿವಿಧ ಪ್ರವಾಸಿ ತಾಣಗಳ ಸೌಂದರ್ಯವನ್ನು ಕಣ್ತುಂಬಿಕೊಳ್ಳುವ ಪ್ರವಾಸಿಗರಿಗೆ ದಸರಾ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ಆಯೋಜಿಸಿರುವ ಜಲಸಾಹಸ ಕ್ರೀಡೆಗಳು ಹೊಸ ಅನುಭವ ನೀಡಲಿದೆ.
Related Articles
Advertisement
ಅಲ್ಲದೆ ಸಾರ್ವಜನಿಕರ ಸುರಕ್ಷತೆಗೆ ಬೇಕಾಗಿರುವ ಎಲ್ಲಾ ಕ್ರಮಗಳನ್ನು ಕೈಗೊಂಡಿದೆ. ಜಲಸಾಹಸ ಕ್ರೀಡೆಯಲ್ಲಿ ಭಾಗವಹಿಸುವವರು ಕಡ್ಡಾಯವಾಗಿ ಲೈಫ್ ಜಾಕೆಟ್ ಧರಿಸಬೇಕಿದೆ. ಪ್ರವಾಸಿಗರಿಗೆ ಮಾಹಿತಿ ನೀಡಲೆಂದೆ ಇಂಡಿಯನ್ ವಾಟರ್ ಇನ್ಸ್‌ಟಿಟ್ಯೂಟ್‌ನಿಂದ ತರಬೇತಿ ಪಡೆದ 12 ಮಂದಿ ನುರಿತ ಈಜುಗಾರರಿದ್ದಾರೆ. ಪ್ರವಾಸಿಗರ ಅನುಕೂಲಕ್ಕಾಗಿ ಶೌಚಾಲಯ, ಬಟ್ಟೆ ಬದಲಿಸುವ ಕೊಠಡಿ, ರೆಸ್ಟೋರೆಂಟ್ ನಿರ್ಮಿಸಲಾಗಿದೆ.
ಯಾವ್ಯಾವ ಕ್ರೀಡೆಗೆ ಎಷ್ಟು ದರ: ಜೆಟ್‌ಸ್ಕಿ-450 ರೂ., ವಾಟರ್ ಟ್ರ್ಯಾಂಪೋಲಿನ್-150 ರೂ., ಸ್ಪೀಡ್ ಬೋಟ್-200 ರೂ., ಬನಾನ ರೈಡ್-300 ರೂ., ಸ್ಟಿಲ್ ವಾಟರ್ ರ್ಯಾಫ್ಟಿಂಗ್-100 ರೂ., ಕಯಾಕಿಂಗ್-100 ರೂ., ಕ್ಯಾನೋಯಿಂಗ್-100 ರೂ. ಹಾಗೂ ಪೆಡಲ್ ಬೋಟ್-100 ರೂ.
ಸಚಿವರಿಂದ ಚಾಲನೆ: ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ವರುಣಾ ಕೆರೆಯಲ್ಲಿ ಆಯೋಜಿಸಿರುವ ಜಲಸಾಹಸ ಕ್ರೀಡೆಗೆ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಹಾಗೂ ಸಾ.ರಾ.ಮಹೇಶ್ ಬೋಟ್ ಚಾಲನೆ ಮಾಡುವ ಮೂಲಕ ಚಾಲನೆ ನೀಡಿದರು. ಔಟ್‌ಬ್ಯಾಕ್ ಅಡ್ವೆಂಚರಸ್ ಸಂಸ್ಥೆ ನಡೆಸುತ್ತಿರುವ ಜಲಸಾಹಸ ಕ್ರೀಡೆಯಲ್ಲಿ ಜೆಟ್‌ಸ್ಕಿ, ವಾಟರ್ ಟ್ರ್ಯಾಂಪೋಲಿನ್, ಸ್ಪೀಡ್ ಬೋಟ್, ಬನಾನ ರೈಡ್, ಸ್ಟಿಲ್ ವಾಟರ್ ರ್ಯಾಫ್ಟಿಂಗ್, ಕಯಾಕಿಂಗ್, ಕ್ಯಾನೋಯಿಂಗ್, ಪೆಡಲ್ ಬೋಟ್ ಕ್ರೀಡೆಗಳು ಸಾರ್ವಜನಿಕರನ್ನು ಆಕರ್ಷಿಸಲಿವೆ.
ಈ ಸಂದರ್ಭದಲ್ಲಿ ಶಾಸಕ ಯತೀಂದ್ರ ಸಿದ್ದರಾಮಯ್ಯ, ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್, ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಎಚ್.ಪಿ.ಜನಾರ್ದನ್, ಔಟ್‌ಬ್ಯಾಕ್ ಅಡ್ವೆಂಚರಸ್ ಸಂಸ್ಥೆಯ ಸಹ ಮಾಲಿಕ ಅಲೀಂ ಇನ್ನಿತರರು ಹಾಜರಿದ್ದರು.
ದಸರಾ ಮಹೋತ್ಸವಕ್ಕೆ ಪ್ರವಾಸಿಗರನ್ನು ಆಕರ್ಷಿಸುವ ಸಲುವಾಗಿ ಆಯೋಜಿಸಿರುವ ಜಲಸಾಹಸ ಕ್ರೀಡೆ ಆಕರ್ಷಣೀಯವಾಗಿದೆ. ಇದಲ್ಲದೆ ಓಪನ್ ಬಸ್ ವ್ಯವಸ್ಥೆಯನ್ನೂ ಕಲ್ಪಿಸಿದೆ. ದಸರಾ ಮಹೋತ್ಸವ ಈ ಬಾರಿ ಮತ್ತಷ್ಟು ಆಕರ್ಷಕವಾಗಿರಲಿದೆ. ದಸರೆಗಾಗಿ ಈಗಾಗಲೇ ಎಲ್ಲಾ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು 2-3 ದಿನಗಳಲ್ಲಿ ಮುಗಿಯಲಿವೆ. -ಜಿ.ಟಿ.ದೇವೇಗೌಡ, ಉಸ್ತುವಾರಿ ಸಚಿವ ದಸರಾ ವೇಳೆ ಜನರ ಅನುಕೂಲಕ್ಕಾಗಿ ಆಕಾಶ್ ಅಂಬಾರಿ ಯೋಜನೆಯಡಿ ಮೈಸೂರು-ಬೆಂಗಳೂರು ನಡುವೆ ವಿಮಾನಯಾನ ಆರಂಭಿಸಿದ್ದು ಕೇವಲ 999 ರೂ.ಗೆ ವಿಶೇಷ ಪ್ಯಾಕೇಜ್ ನೀಡಲಾಗಿದೆ. ಮೊದಲ ಬಾರಿಗೆ ಓಪನ್ ಬಸ್ ವ್ಯವಸ್ಥೆ ಮಾಡಲಾಗಿದೆ. ಒಂದು ಕಡೆ ಟಿಕೆಟ್ ಪಡೆದು ಎಲ್ಲಾ ಪ್ರವಾಸಿ ತಾಣಗಳಿಗೂ ಭೇಟಿ ನೀಡುವ ಸೌಲಭ್ಯ ಕಲ್ಪಿಸಲಾಗಿದೆ.
-ಸಾ.ರಾ.ಮಹೇಶ್, ಪ್ರವಾಸೋದ್ಯಮ ಸಚಿವ