Advertisement
ಸ್ಪಂದನೆ ಇಲ್ಲ ಕಳಿಯ ಗ್ರಾ.ಪಂ. ನ್ಯಾಯತರ್ಪು ಗ್ರಾಮದ ಕೈಪಳ-ಬೆಳಿಬೈಲು-ತಿಮ್ಮನೊಟ್ಟು ಪರಿಸರದ ಜನರು ಮೂರು ವರ್ಷಗಳಿಂದ ನೀರಿಗಾಗಿ ಕಿಲೋಮೀಟರ್ ನಡೆಯುವಂತಾಗಿದೆ. ಈ ಕುರಿತು ಗ್ರಾ.ಪಂ. ಸಭೆ, ವಾರ್ಡ್ ಸಭೆಗಳಲ್ಲಿ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಿಲ್ಲ. ತಿಂಗಳ ಹಿಂದೆ ಜಿಲ್ಲಾಧಿಕಾರಿ, ಜಿ.ಪಂ. ಸಿಇಒ ಗಮನಕ್ಕೆ ತಂದರೂ ಸ್ಪಂದನೆ ಇಲ್ಲ. ಅಧಿಕಾರಿಗಳು ಭೇಟಿ ನೀಡಿ ಸಮಸ್ಯೆ ಸರಿಪಡಿಸುವುದಾಗಿ ಹೇಳಿ ಮತ್ತೆ ಇತ್ತ ತಲೆ ಹಾಕಿಲ್ಲ ಎಂದು ಸ್ಥಳೀಯರು ಅಲವತ್ತುಕೊಂಡಿದ್ದಾರೆ.ಸುಮಾರು 12 ಮನೆಗಳಿದ್ದು, 30 ಮಂದಿ ಜನಸಂಖ್ಯೆ ಇರುವ ಈ ಪ್ರದೇಶದಲ್ಲಿ ದಲಿತ ಕಾಲನಿಯೂ ಇದೆ. ಸ್ಥಳೀಯ ನ್ಯಾಯತರ್ಪುವಿನಿಂದ ಎರಡು ವರ್ಷಗಳ ಹಿಂದೆ ನೀರಿಗಾಗಿ ನಳ್ಳಿ ನೀರಿನ ಸಂಪರ್ಕಕ್ಕೆ ಪೈಪ್‌ಲೈನ್ ಅಳವಡಿಸಲಾಗಿತ್ತು. ಆದರೆ ನೀರು ಮಾತ್ರ ಇದುವರೆಗೆ ಮನೆ ಸೇರಿಲ್ಲ. ಹಾಕಿರುವ ಪೈಪ್‌ಲೈನ್ ಒಡೆದು ಹೋಗಿದ್ದು ಕಾಮಗಾರಿ ವ್ಯರ್ಥವಾಗಿದೆ.
Related Articles
Advertisement
ಉಪವಾಸ ಧರಣಿಇಲ್ಲಿನ ಜನರಿಗೆ ಬೆಂಬಲವಾಗಿ ಬೆಳ್ತಂಗಡಿ ತಾಲೂಕು ಹಸಿರು ಸೇನೆ ರೈತ ಸಂಘದಿಂದಲೂ ಹೋರಾಟ ಮಾಡುತ್ತೇವೆ. ಕುಡಿಯುವ ನೀರಿಗಾಗಿ ತಾ.ಪಂ. ಕಚೇರಿ ಎದುರು ಉಪವಾಸ ಧರಣಿ ಮಾಡಲು ಸಿದ್ಧರಿದ್ದೇವೆ.
-ಕೇಶವ ಪೂಜಾರಿ ಬೆಳ್ತಂಗಡಿ ತಾಲೂಕು ಹಸಿರು ಸೇನೆ ರೈತ ಸಂಘ ಅಧ್ಯಕ್ಷ ರೂಪುರೇಷೆ ಸಿದ್ಧ
ಎತ್ತರ ಪ್ರದೇಶವಾದ್ದರಿಂದ ಪೈಪ್‌ಲೈನ್ ಮೂಲಕ ನೀರು ಹಾಯಿಸಲು ಸಮಸ್ಯೆಯಾಗಿದೆ. ಟಾಸ್ಕ್ಫೋರ್ಸ್‌ನಿಂದ ಹೊಸ ಬೋರ್‌ವೆಲ್‌ಗೆ ಮನವಿ ಸಲ್ಲಿಸಿದ್ದು, ಅನುಮತಿ ಸಿಕ್ಕಿದಲ್ಲಿ ಬೋರ್‌ವೆಲ್ ಕೊರೆಸಲಾಗುವುದು. ಇದರಿಂದ ಸ್ಥಳೀಯ ಬಿಳಿಬೈಲು, ತಿಮ್ಮನೊಟ್ಟು, ನಾಳ ವರೆಗೆ 30 ಮನೆಗಳಿಗೆ ನೀರು ಒದಗಿಸಲು ಈಗಾಗಲೇ ರೂಪುರೇಷೆ ಸಿದ್ಧಪಡಿಸಲಾಗಿದೆ.
-ಸಂತೋಷ ಪಾಟೀಲ ಪಿಡಿಒ, ಕಳಿಯ ಗ್ರಾ.ಪಂ.
ಸಂಪರ್ಕ ಇದ್ದರೂ ನೀರು ಬರುತ್ತಿಲ್ಲ
ನೀರಿಗೆ ಖಾಸಗಿಯವರ ಬೋರ್‌ವೆಲ್ ಅವಲಂಬಿಸಿದ್ದೇವೆ. 20ಕ್ಕೂ ಹೆಚ್ಚು ಮಕ್ಕಳು ಶಾಲೆಗೆ ಹೋಗುತ್ತಾರೆ. ರಜೆಯ ಸಮಯದಲ್ಲಿ ನೀರಿಲ್ಲದಿದ್ದರೆ ನಾವೇನು ಮಾಡುವುದು ಎಂಬ ಚಿಂತೆಯಾಗಿದೆ. ಕುಡಿಯುವ ನೀರಿಗಾಗಿ ನಾವು ಸಂಬಂಧಪಟ್ಟವರಿಗೆ ಮನವಿ ಮಾಡಿದ್ದೇವೆ. ನೀರಿನ ಸಂಪರ್ಕ ಇದ್ದರೂ, ನೀರು ಬರುತ್ತಿಲ್ಲ.
-ಶೀನ ಪಂಚಮಲಕೋಡಿ ಸ್ಥಳೀಯ ನಿವಾಸಿ