ಕಾರ್ಕಳ: ಸಾಧಾರಣ ಮಳೆಗೆ ಕಾರ್ಕಳದಲ್ಲಿ ಹಲವು ಅವಾಂತರ ಉಂಟುಮಾಡಿದೆ. ನಗರದಲ್ಲಿ ಚರಂಡಿಯ ಹೂಳು ತೆಗೆಯದಿರುವ ಕಾರಣ ರಸ್ತೆಯಲ್ಲೇ ನೀರು ಹರಿದುಹೋಗುತ್ತಿದೆ. ಇದ ರಿಂದಾಗಿ ವಾಹನ ಚಾಲಕರು, ದ್ವಿಚಕ್ರ ಸವಾರರು ಸೇರಿದಂತೆ ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ. ರಸ್ತೆಯೂ ಕೆಟ್ಟುಹೋಗುವುದರಲ್ಲಿ ಅನುಮಾನ ವಿಲ್ಲ. ಮಳೆಗಾಲ ಆರಂಭಗೊಂಡರೂ ಪುರಸಭೆ ಎಚ್ಚೆತ್ತುಕೊಂಡಿಲ್ಲ ಎನ್ನುವ ಮಾತು ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.
ಅತ್ತೂರಿನಲ್ಲೇ ಹೆಚ್ಚು ಸಮಸ್ಯೆ
ಅತ್ತೂರು ಚರ್ಚ್ ಬಳಿಯ ಪರ್ಪಲ್ ಗುಡ್ಡೆಯ ಮಣ್ಣನ್ನು ಸಮೀಪದ ಸೈಂಟ್ ಲಾರೆನ್ಸ್ ಹಿರಿಯ ಪ್ರಾಥಮಿಕ ಶಾಲಾ ಕ್ರೀಡಾಂಗಣ ವಿಸ್ತರಿಸುವ ಉದ್ದೇಶದಿಂದ ಕ್ರೀಡಾಂಗಣಕ್ಕೆ ತಂದು ಸುರಿಯಲಾಗಿದ್ದು, ಅದರಿಂದಾಗಿ ಸಮಸ್ಯೆಯಾಗಿದೆೆ. ಏರು ಪ್ರದೇಶದಲ್ಲಿರುವ ಶಾಲಾ ಕ್ರೀಡಾಂಗಣ ದಿಂದ ನೀರಿನೊಂದಿಗೆ ಮಣ್ಣು ಕೊಚ್ಚಿ ಕೊಂಡು ಹೋಗಿದೆ. ಇದರಿಂದಾಗಿ ಕೆಳಗಡೆ ಪ್ರದೇಶದ ಗದ್ದೆ, ತೋಟಗಳಲ್ಲಿ ಕೆಸರು ನೀರು ತುಂಬಿಕೊಂಡಿದೆ. ಇದರಿಂದ ಸಾಕಷ್ಟು ಮನೆಗಳಿಗೂ ತೊಂದರೆಯಾಗಿದೆ.
ಅಂಗನವಾಡಿ ಅಂಗಳದಲ್ಲಿ ಕೆಸರು
ಸುಮಾರು 22 ಮಕ್ಕಳಿರುವ ಅತ್ತೂರು ಅಂಗನವಾಡಿ ಕೇಂದ್ರದ ಅಡುಗೆ ಕೋಣೆಗೂ ಕೆಸರು ನೀರು ನುಗ್ಗಿದೆ. ಇಲ್ಲಿಯ ಅಂಗಳದಲ್ಲಿ ಕೆಸರು ನೀರು ತುಂಬಿಕೊಂಡಿದ್ದು, ಮಕ್ಕಳ ಓಡಾಟಕ್ಕೂ ತೊಂದರೆಯಾಗಿದೆ. ಇದರ ಕೆಸರು ತೆಗೆಯಲು ಹರಸಾಹಸ ಪಡುವಂತಾಗಿದೆ.
ಪ್ರತಿವರ್ಷ ಇದೇ ಗೋಳು
ಕಳೆದ ಮೂರು ವರ್ಷಗಳಿಂದ ಪರ್ಪಲೆ ಗುಡ್ಡೆಯಲ್ಲಿ ಮಣ್ಣು ಅಗೆಯಲಾಗುತ್ತಿದೆ. ಇಲ್ಲಿನ ರಿಕ್ಷಾ ಪಾರ್ಕಿಂಗ್ ಸ್ಥಳಕ್ಕೆ ಕೆಸರು ನೀರು ಹರಿದು ಬರುತ್ತಿದ್ದು , ಪಾರ್ಕಿಂಗ್‌ಗೆ ತೊಡಕು ಉಂಟಾಗುತ್ತಿದೆ ಎಂದು ಆಟೋ ಚಾಲಕರು ಉದಯವಾಣಿಯೊಂದಿಗೆ ತಮ್ಮ ಅಳಲು ತೋಡಿಕೊಂಡರು. ಸಂಬಂಧಪಟ್ಟವರಿಗೆ ಮನವಿ ಮಾಡಿ ಕೊಂಡರೂ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಮುಖ್ಯರಸ್ತೆ ಹೊಂಡ
ಕಾರ್ಕಳ ಪೇಟೆಯ ಮುಖ್ಯರಸ್ತೆಯ ಹಲವು ಕಡೆ ಸಣ್ಣ ಸಣ್ಣ ಹೊಂಡಗಳಿದ್ದು, ಆ ಹೊಂಡದಲ್ಲಿ ನೀರು ತುಂಬಿರುವುದರಿಂದ ವಾಹನ ಚಾಲಕರ ಸುಗಮ ಸಂಚಾರಕ್ಕೆ ತೊಡಕುಂಟು ಮಾಡಿದೆ. ದ್ವಿಚಕ್ರ ಸವಾರರಂತೂ ಎಚ್ಚರಿಕೆ ತಪ್ಪಿದಲ್ಲಿ ಅನಾಹುತವೇ ಸಂಭವಿಸಬಹುದು.