ಕೊಳ್ಳೇಗಾಲ: ಒಂದೆಡೆ ಬೇಸಿಗೆ ಬಿಸಿಲು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮತ್ತೂದೆಡೆ ಸಕಾಲದಲ್ಲಿ ಮಳೆಯಾಗದೆ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿದ್ದು, ಸಂಬಂಧಿಸಿದ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳು ಮುಂದಿನ ದಿನಗಳಲ್ಲಿ ನೀರಿನ ಹಾಹಾಕಾರವನ್ನು ಹೋಗಲಾಡಿಸಿ ಜನರ ಸಮಸ್ಯೆ ಬಗೆಹರಿಸುವರೇ ಎಂದು ತಾಲೂಕಿನ ಮಧುವನಹಳ್ಳಿ ಗ್ರಾಪಂನ ಆಂಜನೇಯಪುರ ಗ್ರಾಮಸ್ಥರ ಕಾದುಕುಳಿತಿದ್ದಾರೆ.
ಹನಿ ನೀರಿಗೂ ಹಾಹಾಕಾರ: ಮಧುವನಹಳ್ಳಿ ಗ್ರಾಪಂ ಸಮೀಪದಲ್ಲೇ ಆಂಜನೇಯಪುರ 7ನೇ ವಾರ್ಡ್ ಇದ್ದು, ಇಲ್ಲಿ ಸಾವಿರಾರು ಉಪ್ಪಾರ ಸಮಾಜದ ಬಡಜನರು ವಾಸವಾಗಿದ್ದಾರೆ. ಇಲ್ಲಿ ಕುಡಿಯುವ ನೀರು ಪೂರೈಕೆ ಮಾಡುವ ಸಲುವಾಗಿ ಎರಡು ನೀರಿನ ತೊಂಬೆಗಳನ್ನು ನಿರ್ಮಾಣ ಮಾಡಲಾಗಿದೆ ಆದರೆ, ಆ ನೀರಿನ ತೊಂಬೆಗಳು ಬತ್ತಿ ಹೋಗಿ ಅನೇಕ ತಿಂಗಳುಗಲೇ ಕಳೆದಿದ್ದು ಇಲ್ಲಿನ ಗ್ರಾಮಸ್ಥರು ಹನಿ ನೀರಿಗೂ ಪರಿತಪಿಸುವಂತಾಗಿದೆ.
ಬತ್ತಿ ಹೋಗಿರುವ ತೊಂಬೆಗಳು: ಬತ್ತಿಹೋಗಿರುವ ತೊಂಬೆಯಲ್ಲಿ ಹನಿ ನೀರು ಸಿಗದೆ ಗ್ರಾಮಸ್ಥರು ಕುಡಿಯುವ ನೀರಿಗಾಗಿ ಅಪಾರ ತೊಂದರೆ ಎದುರಿ ಸುವಂತಾಗಿದ್ದು, ನೀರಿಗಾಗಿ ಗ್ರಾಮದ ಕೊನೆಯ ಲ್ಲಿರುವ ಸರ್ಕಾರಿ ಶಾಲೆಯ ಮುಂಭಾಗದಲ್ಲಿರುವ ಕೊಳವೆ ಬಾವಿಯಲ್ಲಿನ ನೀರನ್ನು ಬಳಸಿ ತಮ್ಮ ದೈನಂ ದಿನ ಕೆಲಸ ಮಾಡುವಂತಹ ಸ್ಥಿತಿ ಉಲ್ಬಣವಾಗಿದೆ.
ಗಮನಹರಿಸದ ಅಧಿಕಾರಿಗಳು: ಸರ್ಕಾರ ಬರ ಮತ್ತು ಬೇಸಿಗೆಯನ್ನು ಸುಸೂತ್ರವಾಗಿ ನಿಭಾಯಿಸಲು ಹಣದ ಕೊರತೆ ಇಲ್ಲ ಎಂದು ಹೇಳುತ್ತಾರೆ. ಆದರೆ ಇಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಇದ್ದರೂ ಸಹ ಗ್ರಾಪಂ ಅಧಿಕಾರಿಗಳಾಗಲಿ, ಚುನಾಯಿತ ಪ್ರತಿನಿಧಿಗಳಾಗಲಿ ಇತ್ತ ಗಮನ ಹರಿಸದೆ ಇರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಗ್ರಾಮಸ್ಥರ ಆರೋಪ: ಗ್ರಾಪಂನ ಮಾಜಿ ಸದಸ್ಯೆ ಶಿವನಂಜಮ್ಮ ಮತ್ತು ವಿವಿಧ ಮಹಿಳಾ ಸಂಘದ ಬಸಮ್ಮಣಿ, ರುದ್ರಮ್ಮ, ಚೆನ್ನಾಜಮ್ಮ ಸೇರಿದಂತೆ ಹಲವಾರು ಮಹಿಳೆಯರು ಕಳೆದ ಆರು ತಿಂಗಳ ಹಿಂದೆ ಗ್ರಾಪಂ ಅಧಿಕಾರಿಗಳಿಗೆ ಮತ್ತು ಗ್ರಾಪಂ ಅಧ್ಯಕ್ಷೆ ಯಶೋಧಮ್ಮ ಅವರನ್ನು ಸಂಪರ್ಕಿಸಿ ಗ್ರಾಮದಲ್ಲಿ ಕುಡಿಯುವ ನೀರಿಗೆ ಅಪಾರ ತೊಂದರೆ ಎದುರಾಗಿದ್ದು, ಕೂಡಲೇ ಕೊಳವೆ ಬಾವಿಯೊಂದನ್ನು ನಿರ್ಮಾಣ ಮಾಡಿಕೊಡುವಂತೆ ಹಲವಾರು ಬಾರಿ ಮನವಿ ಮಾಡಿದ್ದರೂ ಸಹ ಈ ಬಗ್ಗೆ ಯಾರು ಗಮನ ಹರಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.
ನೀರು ಗಂಟಿ ನಾಪತ್ತೆ: ಗ್ರಾಪಂ ವತಿಯಿಂದ ನಿಯೋಜನೆಗೊಂಡಿರುವ ವಾಟರ್‌ಮ್ಯಾನ್ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರ ಕುಡಿಯುವ ನೀರಿನ ತೊಂದರೆಯನ್ನು ನಿವಾರಣೆ ಮಾಡಬೇಕಾಗಿರುವುದು ಅವನ ಕೆಲಸ. ಆದರೆ ವಾಟರ್‌ಮ್ಯಾನ್ ಬಂದಾಪುಟ್ಟ, ಹೋದಾ ಪುಟ್ಟ ಅನ್ನುವ ಗಾದೆ ಮಾತಿನಂತೆ ಎಲ್ಲೋ ಒಂದು ದಿನ ಬಂದು ಮುಖ ತೋರಿಸಿ ಹೋದರೆ ಮರಳಿ ಗ್ರಾಮಕ್ಕೆ ಬರುವುದೇ ಇಲ್ಲ ಎಂದು ಗ್ರಾಮಸ್ಥರು ದೂರಿದರು.
ಗಮನಹರಿಸದ ಚುನಾಯಿತ ಪ್ರತಿನಿಧಿಗಳು: ಮತ ಪಡೆಯಲು ರಾಜಕಾರಣಿಗಳು ಬೀದಿ ಬೀದಿಗೆ ಅಲೆಯುತ್ತಾರೆ. ಆದರೆ ಗೆದ್ದ ಬಳಿಕ ನಮ್ಮತ್ತ ಯಾರೂ ನೋಡುವುದಿಲ್ಲ. ನಮ್ಮ ಕಷ್ಟ ಕೇಳುವವರು ಇಲ್ಲ. ಇದರಿಂದಾಗಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಹಾಹಾಕಾರ ಉಂಟಾಗಿದ್ದು, ಅಧಿಕಾರಿಗಳು ಮತ್ತು ಚುನಾಯಿತಿ ಪ್ರತಿನಿಧಿಗಳು ಎಚ್ಚೆತ್ತು ಕುಡಿಯುವ ನೀರು ಪೂರೈಕೆಗೆ ಗಮನ ಹರಿಸುವರೇ ಗ್ರಾಮಸ್ಥರ ಯಕ್ಷಪ್ರಶ್ನೆಯಾಗಿದೆ.
● ಡಿ.ನಟರಾಜು