ಕಕ್ಕೇರಾ: ಬಯೋ ಡೀಸೆಲ್ ಹಾಗೂ ಪೆಟ್ರೋಲ್ ಉತ್ಪಾದನೆಗಾಗಿ ತಿಂಥಣಿ ಬಳಿ ಸ್ಥಾಪಿಸಲಾದ ಪರಿಸರ ಸ್ನೇಹಿ ಜೈವಿಕ ಇಂಧನ ಪಾರ್ಕ್‌ನಲ್ಲಿ ನೀರಿನ ಕೊರತೆ ಎದುರಾಗಿದೆ.
42 ಎಕರೆ ಪ್ರದೇಶದ ವಿಸ್ತೀರ್ಣ ಹೊಂದಿದ ಪಾರ್ಕ್‌ನಲ್ಲಿ ಹೊಂಗೆ, ಬೇವು, ಸಿಮರೊಬ, ಹಿಪ್ಪೆ, ಔಡಲ, ಸುರಹೊನ್ನೆ ಸೇರಿದಂತೆ ನಾಲ್ಕು ಸಾವಿರಕ್ಕೂ ವಿವಿಧ ಮರಗಳು ನೀರಿನ ಕೊರತೆಯಿಂದ ಬಾಡುತ್ತಿವೆ. ಇದಕ್ಕೂ ಮುನ್ನ ಪಾರ್ಕ್‌ಗೆ ಕೃಷ್ಣಾ ನದಿಯಿಂದ ನೀರು ಪೂರೈಕೆ ಆಗುತ್ತಿತ್ತು. ಆದರೆ ಬೇಸಿಗೆ ಹಿನ್ನೆಲೆಯಲ್ಲಿ ನದಿ ಬರಿದಾದ ಪರಿಣಾಮ ಜೈವಿಕ ಇಂಧನ ಪಾರ್ಕ್‌ಗೆ ನೀರೇ ಬರುತ್ತಿಲ್ಲ. ಹೀಗಾಗಿ ಸದಾ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದ ಪಾರ್ಕ್ ಈಗ ಬಣ ಬಣ ಎನ್ನುತ್ತಿದೆ.
ರಾಜ್ಯದ ಎರಡನೇ ಪಾರ್ಕ್: ಹಾಸನ ಜಿಲ್ಲೆಯಲ್ಲೂ ಜೈವಿಕ ಇಂಧನ ಪಾರ್ಕ್ ಇದೆ. ನಂತರ ರಾಜ್ಯದ ಎರಡನೇ ಜೈವಿಕ ಇಂಧನ ಪಾರ್ಕ್ ತಿಂಥಣಿ ಬಳಿ ಇದೆ. ಖನಿಜ ಇಂಧನ ಕೊರತೆ ಉಂಟಾದಾಗ ಜೈವಿಕ ಇಂಧನವನ್ನು ವಾಹನಕ್ಕೆ ಬಳಸಬಹುದಾಗಿದೆ. ಇದು ಪರಿಸರ ಮತ್ತು ವಾತಾವರಣ ಸಮೃದ್ಧಿಗೆ ಪೂರಕವಾಗಿದೆ. ಹೀಗಾಗಿ ಬೇಡಿಕೆ ಇದ್ದಾಗ ನಿಗ ದಿತ ಬೆಲೆಗೆ ಪಾರ್ಕ್‌ನಿಂದ ಬಯೋಡೀಸೆಲ್, ಪೆಟ್ರೋಲ್ ಖರೀದಿಸುವ ಉದ್ದೇಶದಿಂದ ಸರ್ಕಾರವೇ ಜೈವಿಕ ಇಂಧನ ಪಾರ್ಕ್ ಸ್ಥಾಪಿಸಿದೆ.
ಈ ಮೊದಲು ಏನಿತ್ತು?: ಈ ಹಿಂದೆ ಪಾರ್ಕ್ ನಿರ್ಮಾಣಕ್ಕೂ ಮೊದಲು ಇಲ್ಲಿ ತಾಮ್ರ ಹಾಗೂ ಚಿನ್ನದ ನಿಕ್ಷೇಪ ಇದ್ದ ನಿಖರ ಮಾಹಿತಿ ಇದ್ದುದರಿಂದ ಹಟ್ಟಿ ಚಿನ್ನದಗಣಿ ಕಂಪನಿ ಚಿನ್ನ ಮತ್ತು ತಾಮ್ರದ ಅದಿರು ತೆಗೆಯುವ ಸಾಹಸಕ್ಕೆ ಕೈ ಹಾಕಿತ್ತು. ಆದರೆ ಅದಿರು ಸಿಗದೆ ನಷ್ಟ ಹೊಂದಿತ್ತು. ಮುಂದೆ 2013ರಲ್ಲಿ ಜಮೀನನ್ನು 25 ವರ್ಷ ಕರಾರು ಮೇರೆಗೆ ಪಾರ್ಕ್ ಸ್ಥಾಪನೆಗಾಗಿ ರಾಯಚೂರು ಕೃಷಿ ವಿಶ್ವವಿದ್ಯಾಲಯಕ್ಕೆ ಒಡಂಬಡಿಕೆ ನೀಡಿತು. ಹೀಗಾಗಿ ಪಾಳು ಬಿದ್ದ ಭೂಮಿಯಲ್ಲಿ ಜೈವಿಕ ಇಂಧನ ಪಾರ್ಕ್ ನಿರ್ಮಿಸಲು ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ 2.80 ಕೋಟಿ ರೂ. ಅನುದಾನದಲ್ಲಿ ಕೃಷಿ ವಿಶ್ವವಿದ್ಯಾಲಯ ಅರಣ್ಯ ವಿಭಾಗದಿಂದ ನಿರ್ಮಿಸಿದ ಜೈವಿಕ ಇಂಧನ ಪಾರ್ಕ್ 2014ರಲ್ಲಿ ಲೋಕಾರ್ಪಣೆ ಆಗಿತ್ತು.
ಬಹು ಉಪಯುಕ್ತವಾದ ಪಾರ್ಕ್ ಈಗ ನೀರಿನ ಸಮಸ್ಯೆಯಿಂದ ಹಾಳಾಗುವ ಹಂತಕ್ಕೆ ತಲುಪಿದ್ದು, ಪಾರ್ಕ್‌ನಲ್ಲಿರುವ ಎಣ್ಣೆ ಸಂಸ್ಕರಣ ಘಟಕದಲ್ಲಿ ಬಯೋಡೀಸೆಲ್ ಉತ್ಪಾದನೆ ಆಗುವ ಲಕ್ಷಣಗಳು ಸದ್ಯ ಕಾಣುತ್ತಿಲ್ಲ. ಪಾರ್ಕ್‌ನಲ್ಲಿ ಉದ್ಯೋಗ ದೊರಕುವುದೆಂಬ ನಿರೀಕ್ಷೆ ಇಟ್ಟಕೊಂಡಿದ್ದ ನಿರುದ್ಯೋಗಿಗಳಿಗೆ ಹತಾಶೆ ಭಾವನೆ ಮೂಡಿದ್ದಂತೂ ನಿಜ. ಸರ್ಕಾರ ಇಂಥ ಜೈವಿಕ ಇಂಧನ ಪಾರ್ಕ್ ಅಭಿವೃದ್ಧಿಗೆ ಮುಂದಾಗಬೇಕಿದೆ
ಈ ಭಾರಿ ಮಳೆ ಅಭಾವದಿಂದ ಪಾರ್ಕ್‌ಗೆ ನೀರಿನ ಸಮಸ್ಯೆ ಎದುರಾಗಿದೆ. ಕೃಷ್ಣಾ ನದಿಯಲ್ಲಿ ನೀರಿನ ಕೊರತೆ ಇದೆ. ಅಲ್ಪಸ್ವಲ್ಪ ಇರುವ ನೀರನ್ನೇ ಬಳಸಿ ಪಾರ್ಕ್ ಚೈತನ್ಯಕ್ಕೆ ಪ್ರಯತ್ನ ನಡೆಸಲಾಗಿದೆ. ವಿವಿಧ ಮರಗಳು ಕಾಯಿ ಬಿಟ್ಟಿವೆ. ಏಪ್ರಿಲ್ ಇಲ್ಲವೇ ಮೇ ತಿಂಗಳಲ್ಲಿ ಬಯೋಡೀಸೆಲ್ ಉತ್ಪಾದಿಸಲಾಗುವುದು.
ಶ್ಯಾಮರಾವ್ ಕುಲಕರ್ಣಿ, ಉಪ ಪ್ರಧಾನ ಅನ್ವೇಷಕರು, ಜೈವಿಕ ಇಂಧನ ಪಾರ್ಕ್, ತಿಂಥಣಿ
ಬಾಲಪ್ಪ ಎಂ. ಕುಪ್ಪಿ