Advertisement

ಮನೆಯಲ್ಲಿ ಜಲ ಮರು ಪೂರಣ: ಕೃಷಿಗೆ ವರದಾನ

11:06 PM Jul 25, 2019 | mahesh |

ಸುಬ್ರಹ್ಮಣ್ಯ: ಅಂತರ್ಜಲ ವೃದ್ಧಿಸುವ ನಿಟ್ಟಿನಲ್ಲಿ ಜಲಮರುಪೂರಣದ ಹಲವು ವಿಧಾನಗಳು ಕೃಷಿಕರಿಗೆ ವರದಾನ. ಇದಕ್ಕೆ ನಿದರ್ಶನ ಎಂಬಂತೆ 24 ಕೊಳವೆ ಬಾವಿಗಳನ್ನು ತೋಡಿ ಸೋಲು ಕಂಡಿದ್ದ ಪಂಜದ ಕೃಷಿಕರೊಬ್ಬರು ಕೊಳವೆ ಬಾವಿಗೆ ಜಲಮರು ಪೂರಣದ ಬಳಿಕ ಇದೀಗ ಜಲ ಸಂರಕ್ಷಣೆ ಸಾಧ್ಯ ಎನ್ನುವುದನ್ನು ಮನಗಂಡಿದ್ದಾರೆ. ಪಂಜದ ಸಂಗಾತಿ ಸ್ಟೋರ್ಸ್‌ನ ಮಾಲಕ, ಕೃಷಿಕ ವೆಂಕಟ್ರಮಣ ಭಟ್‌ ಕೊಳವೆ ಬಾವಿಗೆ ಜಲಮರುಪೂರಣ ವ್ಯವಸ್ಥೆ ಅಳವಡಿಸಿಕೊಳ್ಳುವ ಮೂಲಕ ಮನೆಯಿಂದಲೇ ಜಲ ಸಂರಕ್ಷಣೆಯ ಜಾಗೃತಿಗೆ ಮುಂದಾಗಿದ್ದಾರೆ.

Advertisement

ವೆಂಕಟ್ರಮಣ ಭಟ್‌ ನೀರಿನ ಅಗತ್ಯಕ್ಕಾಗಿ ಜಮೀನಿನಲ್ಲಿ 24 ಕೊಳವೆಬಾವಿಗಳನ್ನು ಕೊರೆಸಿದ್ದರು. ಅದರಲ್ಲಿ ಕೆಲವೊಂದರಲ್ಲಿ ಮಾತ್ರ ನೀರಿದೆ. ಬೇಸಗೆಯಲ್ಲಿ ತೋಟ ಒಣಗುತ್ತದೆ ಎಂದು ಅನಿಸಿದ ತತ್‌ಕ್ಷಣವೇ ಮತ್ತೂಂದು ಕೊಳವೆಬಾವಿ ಕೊರೆಸಲು ಮುಂದಾಗುತ್ತಿದ್ದರು. ನಿರೀಕ್ಷಿತ ಪ್ರಮಾಣದಲ್ಲಿ ನೀರು ಸಿಗದಿದ್ದಾಗ ಹತಾಶರಾಗುತ್ತಿದ್ದರು. ನಷ್ಟಕ್ಕೂ ಒಳಗಾಗಿದ್ದರು.

ಪರಿಹಾರ ಮಾರ್ಗ: ಜಲಮರುಪೂರಣವೇ ಇದಕ್ಕೆ ದಾರಿ ಎಂದು ತೀರ್ಮಾನಿಸಿ ಕೊಳವೆಬಾವಿ ರೀಚಾರ್ಜ್‌ ಮಾಡಿದ್ದಾರೆ. ಕೊಳವೆಬಾವಿ ತೆಗೆಯುವುದೇ ಪರಿಹಾರವಲ್ಲ. ತೆಗೆದ ನೀರನ್ನು ತುಂಬಿಸಬೇಕು. ಅಂತರ್ಜಲ ತುಂಬಿಸುವುದೂ ನಮ್ಮ ಕರ್ತವ್ಯ ಎನ್ನುವ ಅವರು, 24 ಕೊಳವೆ ಬಾವಿಗೂ ರೀಜಾರ್ಜ್‌ ಮಾಡಲು ಯೋಜನೆ ಹಾಕಿಕೊಂಡಿದ್ದಾರೆ. ಈ ವರ್ಷ ಕನಿಷ್ಠ 3 ಕೊಳವೆಬಾವಿ ರೀಚಾರ್ಜ್‌ ಅನ್ನು ಕಾರ್ಯರೂಪಕ್ಕೆ ತಂದಿದ್ದಾರೆ.

ಕಾರ್ಯ ವಿಧಾನ: ಮನೆಯ ಛಾವಣಿ ನೀರನ್ನು ಸಂಗ್ರಹ ಮಾಡಿ ಅದಕ್ಕೆ ವಿಶೇಷ ಮಾದರಿಯ ಫಿಲ್ಟರ್‌ ಅಳವಡಿಸಿ,  ಆ ನೀರು ಮೊದಲನೇ ಕೊಳವೆಬಾವಿಗೆ ಸೇರುವಂತೆ ಮಾಡಿದ್ದಾರೆ. ಆ ಕೊಳವೆಬಾವಿ ಎಲ್ಲ ನೀರನ್ನು ಏಕಕಾಲಕ್ಕೆ ತೆಗೆದುಕೊಳ್ಳುವುದಿಲ್ಲ.

ಕೊಂಚ ಕೊಂಚವೇ ರೀಜಾರ್ಜ್‌ ಆಗುತ್ತದೆ. ಹೆಚ್ಚಾದ ನೀರು ಕೊಳವೆಬಾವಿಯ ಮೇಲ್ಭಾಗದ ತೂತಿನ ಮೂಲಕ ಇನ್ನೊಂದು ಕೊಳವೆಬಾವಿಗೆ ಹೋಗುತ್ತದೆ. ಅದರಲ್ಲೂ ಹೆಚ್ಚಾಗಿ ನೀರು ಮತ್ತೂಂದು ಕೊಳವೆಬಾವಿಗೆ ಹೋಗುತ್ತದೆ. ಅಂಡರ್‌ ಗ್ರೌಂಡ್‌ ಪೈಪ್‌ ಮೂಲಕ ವ್ಯವಸ್ಥೆ ಮಾಡಿಕೊಂಡಿದ್ದಾರೆ.

Advertisement

ಸಾಮಾಜಿಕ ಕಾರ್ಯ
ಪ್ರತಿಯೊಬ್ಬರೂ ಜಲಪಮರುಪೂರಣ ಮಾಡಬೇಕು. ನಾನು ಅನೇಕ ವರ್ಷಗಳಿಂದ ಭೂಮಿಯ ಒಳಗಿದ್ದ ನೀರು ತೆಗೆದೆ. ನಿರಂತರವಾಗಿ ಕೊಳವೆಬಾವಿ ಕೊರೆದೆ. ಈಚೆಗೆ ಕೊರೆಸಿದ ಕೊಳವೆಬಾವಿಯಲ್ಲಿ ಉತ್ತಮ ನೀರಿತ್ತು. ಅನಂತರ ಕಡಿಮೆಯಾಗುತ್ತಾ ಬಂತು. ಈಗ ಜ್ಞಾನೋದಯವಾಗಿದೆ. ನಾವು ತೆಗೆದ ನೀರನ್ನು ಭೂಮಿಗೆ ಮತ್ತೆ ತುಂಬಿಸಲೇಬೇಕು. ಈ ರೀತಿ ಮಾಡುವುದರಿಂದ ನನಗೆ ಮಾತ್ರ ಪ್ರಯೋಜನ ಎಂದು ಭಾವಿಸಬಾರದು. ಇದೊಂದು ಸಾಮಾಜಿಕ ಕಾರ್ಯ ಎಂದುಕೊಂಡು ಈ ಕೆಲಸ ಮಾಡಬೇಕು ಎನ್ನುತ್ತಾರೆ ಭಟ್‌.

ನೀರಿನ ಲಿಕ್ಕಾಚಾರವಿರಲಿ
ಒಂದು ಮೀಟರ್‌ ಪ್ರದೇಶದಲ್ಲಿ ಸುಮಾರು10×10ರಂತೆ ಸರಾಸರಿ ವರ್ಷದಲ್ಲಿ 4,500 ಲೀಟರ್‌ ಮಳೆ ನೀರು ಸಂಗ್ರಹವಾಗುತ್ತದೆ. ಒಬ್ಬನಿಗೆ ಒಂದು ದಿನಕ್ಕೆ ಸರಾಸರಿ 90ರಿಂದ 100 ಲೀಟರ್‌ ನೀರು ಬೇಕಾಗುತ್ತದೆ. ಒಂದು ವರ್ಷ ಸಂಗ್ರಹವಾದ ಮಳೆ ನೀರು ಒಬ್ಬ ವ್ಯಕ್ತಿಗೆ 45 ದಿನಕ್ಕೆ ಸಾಕಾಗಬಹುದು. ಈ ಪ್ರಕಾರ ವರ್ಷಕ್ಕೆ ಎಷ್ಟು ನೀರು ಬೇಕಾಗುತ್ತದೆ ಎನ್ನುವುದನ್ನು ಲೆಕ್ಕ ಹಾಕಿ ಅಷ್ಟು ಪ್ರದೇಶದ ನೀರು ಸಂಗ್ರಹ ಮಾಡಿ ಬಳಕೆ ಮಾಡಬಹುದು ಎನ್ನುತ್ತಾರೆ ವೆಂಕಟ್ರಮಣ ಭಟ್‌.

ಆಧುನಿಕ ಮಾದರಿ
ಮನೆಯ ಛಾವಣಿಗೆ ಅಳವಡಿಸಿರುವ ಫಿಲ್ಟರ್‌ ಆಧುನಿಕ ವಿನ್ಯಾಸ ಹಾಗೂ ವ್ಯವಸ್ಥೆ ಒಳಗೊಂಡಿದೆ. ಮಳೆ ಬಂದಾಗ ಛಾವಣಿಯಲ್ಲಿದ್ದ ಕಸ, ಕಡ್ಡಿ ನೀರಿನ ಜತೆ ಕೊಳವೆಬಾವಿಗೆ ಸೇರದಂತೆ ಫಿಲ್ಟರ್‌ ತಡೆಯುತ್ತದೆ. ಫಿಲ್ಟರ್‌ ಕೆಳಭಾಗದಲ್ಲಿ ಟ್ಯಾಪ್‌ ಇದೆ. ಇದು ಬಿಟ್ಟಿದ್ದರೆ ಅಟೋ ಕ್ಲೀನಿಂಗ್‌ ಆಗುತ್ತದೆ ಎನ್ನುತ್ತಾರೆ ವೆಂಕಟ್ರಮಣ ಭಟ್‌. ಇಲ್ಲಿ ಅಲ್ಪ ಪ್ರಮಾಣದ ನೀರು ಭೂಮಿಗೆ ಹೋದರೂ ಪರವಾಗಿಲ್ಲ. ಆದರೆ ಸ್ವತ್ಛವಾದ ನೀರು ಕೊಳವೆಬಾವಿಗೆ ಇಳಿಯುತ್ತದೆ. ಈ ಮಾದರಿಯ ಫಿಲ್ಟರ್‌ ಗಮನ ಸೆಳೆದಿದೆ.

ಸಮಸ್ಯೆಗೆ ಪರಿಹಾರ
ಜಲಮರುಪೂರಣದ ಬಗ್ಗೆ ಪಡೆದ ಅನುಭವವನ್ನು ಮತ್ತೂಬ್ಬರಿಗೆ ದಾಟಿಸುವುದರಿಂದ ಅವರೂ ಅಳವಡಿಸಿ ಕೊಳ್ಳುವಂತಾಗುತ್ತದೆ. ಈ ಮೂಲಕ ಎಲ್ಲರಲ್ಲಿ ಜಾಗೃತಿ ಮೂಡಿದಲ್ಲಿ ಖಂಡಿತ ಸಂಭವನೀಯ ನೀರಿನ ಸಮಸ್ಯೆ ಪರಿಹರಿಸಬಹುದು. ಇದು ಸಾಮಾಜಿಕ‌ ಜವಾಬ್ದಾರಿ ರೀತಿಯಲ್ಲಿ ಆಗಬೇಕು. ತನ್ನ ಬಳಿ ಯಾರೆ ಬಂದರೂ ಉಚಿತ ಮಾಹಿತಿ ನೀಡಲು ಸಿದ್ಧ.
– ವೆಂಕಟ್ರಮಣ ಭಟ್‌, ಕೃಷಿಕ, ಪಂಜ

Advertisement

Udayavani is now on Telegram. Click here to join our channel and stay updated with the latest news.

Next