ಬೆಂಗಳೂರು: ಸಿ.ಡಿ. ಪ್ರಕರಣದಲ್ಲಿ ಸಿಲುಕಿಕೊಂಡು ರಾಜೀನಾಮೆ ನೀಡಿರುವ ರಮೇಶ್ ಜಾರಕಿಹೊಳಿ ಅವರು ನಿರ್ವಹಿಸುತ್ತಿದ್ದ ಜಲ ಸಂಪನ್ಮೂಲ ಖಾತೆ ಮೇಲೆ ಹಲವರು ಕಣ್ಣಿಟ್ಟಿದ್ದು, ಅವರಲ್ಲಿ ಬಸವರಾಜ ಬೊಮ್ಮಾಯಿ, ಅಶೋಕ್, ಲಿಂಬಾವಳಿ, ಉಮೇಶ್ ಕತ್ತಿ ಮುಂತಾದವರು ಪ್ರಮುಖರು. ಆದರೆ, ಜಾರಕಿಹೊಳಿ ಸಹೋದರರು ಆಕ್ಷೇಪಿಸುವ ಸಾಧ್ಯತೆ ಇರುವುದರಿಂದ ಬಹಿರಂಗವಾಗಿ ಪ್ರಸ್ತಾಪಿಸಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಮತ್ತೂಂದೆಡೆ ರಮೇಶ್ ಜಾರಕಿಹೊಳಿ ಅವರು ತಿಂಗಳೊಳಗೆ ಅದೇ ಖಾತೆಗೆ ಮರಳುವ ನಿರೀಕ್ಷೆಯಲ್ಲಿದ್ದಾರೆ.
ಉತ್ತರ ಕರ್ನಾಟಕ ಭಾಗದ ನೀರಾವರಿ ಯೋಜನೆಗಳಿಗೆ ಟೆಂಡರ್ ಪ್ರಕ್ರಿಯೆ ಆರಂಭವಾಗಿದೆ. ಹೀಗಾಗಿ, ರಮೇಶ್ ಅವರ ಸ್ಥಾನವನ್ನು ಸಹೋದರ ಬಾಲಚಂದ್ರ ಜಾರಕಿಹೊಳಿಗೆ ಜಲ ಸಂಪನ್ಮೂಲ ಖಾತೆ ನೀಡಬೇಕೆಂಬ ಒತ್ತಡವೂ ಅವರ ಆಪ್ತ ಶಾಸಕರ ವಲಯದಿಂದ ಕೇಳಿ ಬರುತ್ತಿದೆ.
ಸಿಎಂನಿಂದ ತಾಳ್ಮೆಯ ಲೆಕ್ಕಾಚಾರ :
ಸದ್ಯ ಜಲ ಸಂಪನ್ಮೂಲ ಖಾತೆ ಮುಖ್ಯಮಂತ್ರಿ ಕೈಯಲ್ಲಿದೆ. ಮುಂದೆ ರಮೇಶ್ ನಿರ್ದೋಷಿ ಎಂಬ ವರದಿ ಬಂದರೆ, ಖಾತೆಯನ್ನು ಅವರಿಗೇ ನೀಡಬೇಕಾಗಿ ಬರಬಹುದು.
ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಮತ್ತು ರಾಜ್ಯದ ನಾಲ್ಕು ಕ್ಷೇತ್ರಗಳ ಉಪಚುನಾವಣೆ ಬಳಿಕ ಸಚಿವ ಸ್ಥಾನ ನೀಡಲು ಸಿಎಂ ಮತ್ತು ಬಿಜೆಪಿ ಹೈಕಮಾಂಡ್ ಲೆಕ್ಕಾಚಾರ ಹಾಕಿದೆ ಎನ್ನಲಾಗಿದೆ. ಆದರೆ, ರಾಜ್ಯದಲ್ಲಿನ ಉಪಚುನಾವಣೆ ಘೋಷಣೆಗೆ ಮುನ್ನವೇ ರಮೇಶ್ ಅಥವಾ ಬಾಲಚಂದ್ರ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂಬುದು ಪಕ್ಷದ ಶಾಸಕರ ಒಂದು ಗುಂಪು ಸಿಎಂ ಮೇಲೆ ಒತ್ತಡ ಹಾಕುತ್ತಿದೆ.
ಮಾಸಾಂತ್ಯಕ್ಕೆ ಮುಕ್ತಾಯ? :
ಸಿ.ಡಿ. ಪ್ರಕರಣ ಈ ತಿಂಗಳಾಂತ್ಯದೊಳಗೆ ಮುಕ್ತಾಯವಾಗುವ ನಿರೀಕ್ಷೆ ಜಾರಕಿಹೊಳಿ ಸಹೋದರರಲ್ಲಿದೆ. ಸರಕಾರ ಎಸ್‌ಐಟಿ ರಚನೆ ಮಾಡಿದ್ದು, ಅದು ತಿಂಗಳೊಳಗೆ ವರದಿ ನೀಡುವ ನೀಡುವ ನಿರೀಕ್ಷೆ ಇಟ್ಟುಕೊಂಡಿದ್ದಾರೆ.