Advertisement

ಜಲ ಸಂಪನ್ಮೂಲ |ಅಧಿಕಾರಿಗಳಿಗೆ ಚುನಾವಣ ಕರ್ತವ್ಯ; ಜನತೆ ಹೈರಾಣು

03:51 PM Apr 04, 2019 | Team Udayavani |
ಮಹಾನಗರ : ನಗರದ ವಿವಿಧೆಡೆ ಮೂರು ದಿನಗಳಿಂದ ಕುಡಿಯುವ ನೀರು ಪೂರೈಕೆಯಾಗದೆ, ಬಳಕೆದಾರರು ಹೈರಾಣಾಗಿದ್ದಾರೆ. ನೀರಿನ ವಿಭಾಗದ ಅಧಿಕಾರಿಗಳನ್ನು ಚುನಾವಣ ಕರ್ತವ್ಯಕ್ಕೆ ನೇಮಿಸಿರುವುದರಿಂದ ನೀರು ಪೂರೈಕೆ ಯತ್ತ ಗಮನ ಹರಿಸಲಾಗದೆ ಸಮಸ್ಯೆ ಇನ್ನಷ್ಟು ಜಟಿಲಗೊಳ್ಳಲು ಕಾರಣವಾಗಿದೆ ಎನ್ನಲಾಗುತ್ತಿದೆ.
ಮಂಗಳಾದೇವಿ, ರಥಬೀದಿ, ಕೂಳೂರು, ಮಣ್ಣಗುಡ್ಡ, ಜಪ್ಪಿನಮೊಗರು, ದೇರೆಬೈಲು, ಯೆಯ್ನಾಡಿ, ಹಂಪನಕಟ್ಟೆ  ಸಹಿತ ನಗರದ ವಿವಿಧ ಕಡೆಗಳಲ್ಲಿ ಕಳೆದ ಮೂರು ದಿನಗಳಿಂದ ಕುಡಿಯುವ ನೀರಿನ ಪೂರೈಕೆಯಾಗುತ್ತಿಲ್ಲ. ಸ್ವಂತ ಬಾವಿ ಹೊಂದಿದವರಿಗೆ ನೀರಿನ ಸಮಸ್ಯೆ ಕಾಡದಿದ್ದರೂ, ಮಹಾನಗರ ಪಾಲಿಕೆಯಿಂದ ವಿತರಿಸಲಾಗುವ ನೀರನ್ನೇ ನಂಬಿದವರು, ಇಂದು ಬರುತ್ತದೆ, ನಾಳೆ ಬರುತ್ತದೆ ಎಂದು ನೀರಿಗಾಗಿ ಕಾದು ಕುಳಿತುಕೊಳ್ಳುವಂತಾಗಿದೆ. ಇನ್ನು ಕೆಲವೆಡೆ ಪಾಲಿಕೆಯ ನೀರು ಬಾರದಿರುವುದರಿಂದ ಪಕ್ಕದ ಮನೆಯ ಬಾವಿ ನೀರನ್ನೇ ಆಶ್ರಯಿಸುವಂತಾಗಿದೆ.
ಅಧಿಕಾರಿಗಳಿಗೆ ಚುನಾವಣ ಕರ್ತವ್ಯ
ವಾಟರ್‌ ಆಪರೇಟರ್‌ಗಳು, ನೀರು ಪೂರೈಕೆ ಸಂಬಂಧಿ ಕೆಲಸ ಮಾಡುವ ನೌಕರರು, ಅಧಿಕಾರಿಗಳು ಸೇರಿ ನಗರದಲ್ಲಿ ಸುಮಾರು 200 ಮಂದಿ ಪಾಲಿಕೆ ವ್ಯಾಪ್ತಿಯಲ್ಲಿ ನೀರಿನ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಸುಮಾರು 10 ಮಂದಿ ಎಂಜಿನಿಯರ್‌ಗಳು ನೀರಿನ ಸಂಬಂಧಿ ಕರ್ತವ್ಯದಲ್ಲಿರುವವರಿದ್ದಾರೆ. ಆದರೆ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಎಲ್ಲ ಅಧಿಕಾರಿಗಳಂತೆ ನೀರಿಗೆ ಸಂಬಂಧಿಸಿದ ಅಧಿಕಾರಿಗಳು, ಎಂಜಿನಿಯರ್‌ಗಳನ್ನೂ ಚುನಾವಣ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.
ಇದರಿಂದ ಜನರ ನೀರಿನ ಸಮಸ್ಯೆ ಸಂಬಂಧ ಅಧಿಕಾರಿಗಳಿಗೆ ಗಮನ ಹರಿಸಲಾಗದೆ, ನೀರಿನ ಸಮಸ್ಯೆ ಹೆಚ್ಚಾಗುವಂತಾಗಿದೆ.
ಕೈಗಾರಿಕೆಗಳಿಗೆ ನೀರು ಕಡಿತ 
ನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಎಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಈಗಾಗಲೇ ಕೈಗಾರಿಕೆಗಳಿಗೆ ಪೂರೈಕೆಯಾಗುತ್ತಿರುವ 18 ಎಂಜಿಡಿ ನೀರಿನಲ್ಲಿ ಸ್ವಲ್ಪ ಪ್ರಮಾಣವನ್ನು ಕಡಿತಗೊಳಿಸಲಾಗುತ್ತಿದೆ. ಎ. 15ರ ಬಳಿಕ 10 ಎಂಜಿಡಿಯನ್ನಷ್ಟೇ ಪೂರೈಕೆ ಮಾಡಲು ನಿರ್ಧರಿಸಲಾಗಿದೆ.
ವೆನ್ಲಾಕ್ ನಲ್ಲಿ ಡಯಾಲಿಸಿಸ್‌ಗೆ ನೀರಿಲ್ಲ
ಕಿಡ್ನಿ ವೈಫಲ್ಯಗೊಂಡ ರೋಗಿಗಳಿಗೆ ಡಯಾಲಿಸಿಸ್‌ ಮಾಡಲು ನೀರು ಅವಶ್ಯವಾಗಿದ್ದು, ಕಳೆದ 3 ದಿನಗಳಿಂದ ಇಲ್ಲಿಯೂ ನೀರಿನ ಸಮಸ್ಯೆ ಎದುರಾ ಗಿರುವುದರಿಂದ ಡಯಾಲಿಸಿಸ್‌ಗೆ ತೀವ್ರ ಸಮಸ್ಯೆ ಉಂಟಾಗುತ್ತಿದೆ. ಟ್ಯಾಂಕರ್‌ನಲ್ಲಿ ನೀರು ಪೂರೈಕೆ ಮಾಡಲಾಗುತ್ತಿದ್ದರೂ, ಇತರ ರೋಗಿಗಳಿಗೂ ನೀರಿನ ಅವಶ್ಯಕತೆ ಬಹಳವಾಗಿರುವುದರಿಂದ ರೋಗಿಗಳು ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ವೆನಾÉಕ್‌ ವೈದ್ಯಕೀಯ ಅಧೀಕ್ಷಕಿ ಡಾ| ರಾಜೇಶ್ವರಿ ದೇವಿ, ಕಿಡ್ನಿ ವೈಫಲ್ಯಗೊಂಡ ರೋಗಿಗಳಿಗೆ ಡಯಾಲಿಸಿಸ್‌ ಮಾಡಲು ನೀರು ಬೇಕಾಗುತ್ತದೆ. ಆದರೆ, ಲಭ್ಯ ನೀರನ್ನೇ ಬಳಕೆ ಮಾಡಿಕೊಳ್ಳಲಾಗುತ್ತದೆ. ನೀರಿನ ಕೊರತೆ ಇರುವುದರಿಂದ ಅನಗತ್ಯ ನೀರನ್ನು ಪೋಲು ಮಾಡದಂತೆ ರೋಗಿಗಳಿಗೂ ಹೇಳಲಾಗಿದೆ ಎಂದು ತಿಳಿಸಿದ್ದಾರೆ.
ಡ್ಯಾಂನಲ್ಲಿ  5.4 ಅಡಿ ನೀರು
ಮಾರ್ಚ್‌ 27ರಂದು ತುಂಬೆ ಡ್ಯಾಂನಲ್ಲಿ 5.8 ಅಡಿ ನೀರಿತ್ತು. ಬುಧವಾರ (ಎ. 3ರಂದು) ಡ್ಯಾಂನಲ್ಲಿ ನೀರಿನ ಮಟ್ಟ 5.4 ಆಗಿದೆ. ಕಳೆದ ವರ್ಷಕ್ಕಿಂತಲೂ ಈ ಬಾರಿ ನೀರಿನ ಕೊರತೆ ಹೆಚ್ಚಿದೆ ಎನ್ನುತ್ತಾರೆ ಮ.ನ.ಪಾ. ಅಧಿಕಾರಿಗಳು. 5.4 ಅಡಿ ಇರುವ ನೀರನ್ನು ಮುಂದಿನ ಎರಡು ತಿಂಗಳ ಕಾಲ ಇಡೀ ನಗರಕ್ಕೆ ಪೂರೈಕೆ ಮಾಡಬೇಕು. ಅಷ್ಟ ರೊಳಗೆ ಮಳೆ ಬಾರದೇ ಇದ್ದಲ್ಲಿ ಸಮಸ್ಯೆ ಬಿಗಡಾ ಯಿಸಲಿದೆ ಎನ್ನುತ್ತಾರೆ ಅಧಿಕಾರಿಗಳು.
 ಕರ್ತವ್ಯ ನಿರ್ವಹಿಸುತ್ತಿದ್ದೇವೆ
ಡ್ಯಾಂನಲ್ಲಿ ನೀರು ಕಡಿಮೆ ಇರುವುದರಿಂದ ಸದ್ಯ ತೊಂದರೆಯಾಗುತ್ತಿದೆ. ಪ್ರಸ್ತುತ ತುಂಬೆ ವೆಂಟೆಡ್‌ ಡ್ಯಾಂನಲ್ಲಿ 5.4 ಅಡಿ ನೀರಿದೆ. ಅಧಿಕಾರಿಗಳು ಚುನಾವಣೆ ಕರ್ತವ್ಯಕ್ಕೆ ಹೋಗಿರುವುದರಿಂದ ನೀರಿನ ಪೂರೈಕೆಗೆ ತೊಂದರೆಯಾಗಿಲ್ಲ. ಆ ಕೆಲಸದ ನಡುವೆಯೂ ನಗರದ ಜನತೆಗೆ ಕುಡಿಯುವ ನೀರು ನೀಡಲು ಶ್ರಮಿಸುತ್ತಿದ್ದೇವೆ. ಗುರುವಾರ ನೀರು ಪೂರೈಕೆಯಾಗಲಿದೆ.
 - ಲಿಂಗೇಗೌಡ, ಕಾರ್ಯಕಾರಿ ಅಭಿಯಂತರ, ಮಂಗಳೂರು ಮನಪಾ
 ಮಿತ ಬಳಕೆ ಮಾಡಿ
ತುಂಬೆ ಡ್ಯಾಂನಲ್ಲಿ ನೀರಿನ ಮಟ್ಟ ಕಡಿಮೆಯಾಗುತ್ತಿದೆ. ಮುಂದಿನ ಎರಡು ತಿಂಗಳು ನಗರಕ್ಕೆ ನೀರು ಪೂರೈಕೆಯಾಗಬೇಕಾಗಿರುವುದರಿಂದ ಪೂರೈಕೆಯನ್ನು ಸ್ವಲ್ಪ ಸ್ವಲ್ಪವೇ ಕಡಿಮೆ ಮಾಡಲಾಗುತ್ತಿದೆ. ಜನ ನೀರಿನ ಮಿತವಾದ ಬಳಕೆ ಮಾಡಬೇಕು. ಅನಗತ್ಯ ಪೋಲು ಮಾಡಬಾರದು.
– ನಾರಾಯಣಪ್ಪ, ಪಾಲಿಕೆ ಆಯುಕ್ತರು
 ವಿಶೇಷ ವರದಿ
Advertisement

Udayavani is now on Telegram. Click here to join our channel and stay updated with the latest news.

Next