Advertisement

ಜಲ ಮರುಪೂರಣ ಕಾರ್ಯ ನಡೆಯಲಿ: ನ್ಯಾ|ಹಂಚಾಟೆ

09:23 AM Feb 12, 2019 | Team Udayavani |

ಬೀದರ: ಪರಿಸರ ನಮ್ಮ ಆಸೆಗಳನ್ನು ಪೂರೈಸಲು ಇದೆಯೇ ಹೊರತು ದುರಾಸೆಯನ್ನಲ್ಲ. ಕೊಳವೆಬಾವಿಗಳು ಬತ್ತುತ್ತಲೇ ಸಾಗಿವೆ. ಜಲಮರುಪೂರಣ ಕಾರ್ಯ ನಡೆಯುತ್ತಿಲ್ಲ. ನೀರು ನಮ್ಮ ಜೀವವಾಗಿದ್ದು, ಅದನ್ನು ಉಳಿಸೋಣ ಎಂದು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಂಚಾಟೆ ಸಂಜೀವಕುಮಾರ ಹೇಳಿದರು.

Advertisement

ನಗರದ ಜಿಲ್ಲಾ ರಂಗಮಂದಿರದಲ್ಲಿ ನಡೆದ ಪರಿಸರ ಸಂರಕ್ಷಣೆ, ಬಡತನ ಅಳಿಸಿ ಹಸಿವು ಮುಕ್ತ ಭಾರತ ನಿರ್ಮಿಸುವ ಹಾಗೂ ಜಲಾಂದೋಲನ ಕುರಿತು ಕಾನೂನು ಅರಿವು-ನೆರವು, ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನೀರಿನಿಂದಲೇ ಸುಖ ಮತ್ತು ಸಮೃದ್ಧಿ. ನೀರಿಲ್ಲದಿದ್ದರೆ ದುರ್ಭಿಕ್ಷೆ. ಮನುಷ್ಯನ ದುರಾಸೆಯಿಂದ ಪರಿಸರ ನಾಶ್ಯವಾಗುತ್ತಿದೆ. ಜನರು ಗುಳೇ ಹೋಗುತ್ತಿದ್ದಾರೆ. ನೀರಿನ ಬಗ್ಗೆ ನಮಗೆ ಅಜ್ಞಾನವಿದೆ. ನೀರನ್ನು ಉಳಿಸುವ ಮೂಲಕ ಅದನ್ನು ಗೌರವಿಸೋಣ ಎಂದು ಕೋರಿದರು.

ನೆಲಕ್ಕೆ ನೀರು ಉಣ್ಣಿಸುವ ಕೆಲಸ ಅತ್ಯಂತ ಅಗತ್ಯವಾಗಿ ಆಗಬೇಕಿದೆ. ಜಲಮೂಲಗಳನ್ನು ನಾವು ಸಂರಕ್ಷಣೆ ಮಾಡದಿದ್ದರೆ ನಮಗೆ ಉಳಿಗಾಲವಿಲ್ಲ. ಗಿಡಗಳಿಗೆ ಮನುಷ್ಯರ ಅವಶ್ಯಕತೆ ಇಲ್ಲ. ಆದರೆ, ನಮಗೆ ಆ ಗಿಡಗಳ ಅವಶ್ಯಕತೆ ತುಂಬಾ ಇದೆ. ಇಂತಹ ಸತ್ಯವನ್ನು ನಾವೆಲ್ಲರೂ ಅರಿಯೋಣ ಎಂದರು. ಯಾರೂ ಮಾಡಲಾಗದಂತಹ ಅನಾಹುತವನ್ನು ಮನುಷ್ಯರು ಮಾಡುತ್ತಿದ್ದಾರೆ. ವಿದ್ಯೆ ಬೇರೆ ಜ್ಞಾನ ಬೇರೆ. ವಿದ್ಯಾವಂತರಾದಂತೆ ಪರಿಸರ ನಾಶವಾಗುತ್ತಿದೆ. ಒಂದು ಕಾಲಕ್ಕೆ ನೀರಿಲ್ಲದೇ ಬಳಲುತ್ತಿದ್ದ ಇಸ್ರೇಲ್‌ ದೇಶ ಇಂದು 80 ದೇಶಕ್ಕೆ ಮೀನು ಪೂರೈಸುವ ದೇಶವಾಗಿ ಗುರುತಿಸಿಕೊಂಡಿದೆ. ಇದು ನಮಗೆ ಮಾದರಿಯಾಗಬೇಕಿದೆ ಎಂದರು.

ಸಾವಿರಾರು ಸಂಖ್ಯೆಯಲ್ಲಿದ್ದ ಬಾವಿಗಳೆಲ್ಲ ಈಗ ಬಹುತೇಕ ಬತ್ತಿವೆ. ನೀರು ಪಾತಾಳಕ್ಕೆ ಸೇರುತ್ತಲೇ ಇದೆ. ಇರುವುದೊಂದೇ ಭೂಮಿ ಎಂಬುದನ್ನು ನಾವು ಅರ್ಥೈಸಿಕೊಳ್ಳೋಣ. ಸಂವಿಧಾನ ಎಂದರೆ ಅದು ನಮಗೆ ಭಗವದ್ಗೀತೆ ಇದ್ದಂತೆ, ನಮಗೆ ಮಾರ್ಗದರ್ಶಿಯಾಗಿದೆ. ಕಾನೂನು ಹೋರಾಟದ ಮೂಲಕವೂ ನಾವು ಪರಿಸರ ಸಂರಕ್ಷಣೆಗೆ ಮುಂದಾಗೋಣ ಎಂದು ತಿಳಿಸಿದರು. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಧಿಧೀಶೆ ಮನಗೂಳಿ ಪ್ರೇಮಾವತಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಟಿ.ಶ್ರೀಧರ ಹಾಗೂ ಇತರರು ಇದ್ದರು. ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು, ಬೀದರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ವಕೀಲರ ಸಂಘ ಹಾಗೂ ಬೀದರ ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next