Advertisement

ನೀರು ಬಿಡುಗಡೆ: ಮರಳು ದಂಧೆಗೆ ದಾರಿ!

08:52 AM Feb 10, 2019 | Team Udayavani |

ಕಲಬುರಗಿ: ಈ ಹಿಂದೆ ಬ್ಯಾರೇಜ್‌ನಿಂದ ನೀರು ಖಾಲಿ ಮಾಡಿ ಮರಳು ಎತ್ತಿ ಹಾಕಿರುವಂತೆ ಈಗಲೂ ಅದೇ ನೀತಿ ಅನುಸರಿಸುವ ಕಾರ್ಯ ತೆರೆ ಮರೆಯಲ್ಲಿ ನಡೆದಿದೆಯೇ ಎನ್ನುವ ಅನುಮಾನ ಈಗ ಕಾಡತೊಡಗಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಗುರುವಾರ ಜಿಲ್ಲೆಯ ಜೇವರ್ಗಿ ತಾಲೂಕು ಭೀಮಾ ನದಿಗೆ ನಿರ್ಮಿಸಲಾದ ಕಲ್ಲೂರು ಬ್ಯಾರೇಜ್‌ನಿಂದ ನೀರು ಹರಿಬಿಡಲಾಗಿದೆ.

Advertisement

ನದಿ ಕೆಳಗಿನ ಹಾಗೂ ಮೇಲ್ಭಾಗದ ರೈತರಿಗೆ ಮಾಹಿತಿ ನೀಡದೇ ನೀರು ಬಿಡಲಾಗಿದೆ. ಬ್ಯಾರೇಜ್‌ನಲ್ಲಿ ನೀರು ಇದೆ ಎನ್ನುವ ಆಶಾಭಾವನೆಯೊಂದಿಗೆ ಕೆಲವು ರೈತರು ಗೋಧಿ, ಕಡಲೆ ಬಿತ್ತಿದ್ದಾರೆ. ಒಂದು ಸಲ ನೀರು ಬಿಟ್ಟರೆ ಬೆಳೆ ಕೈಗೆ ಬರಬಹುದು ಎಂಬ ಮಹಾದಾಸೆ ಹೊಂದಿದ್ದ ರೈತರಿಗೆ ಈಗ ನಿರಾಸೆಯಾಗಿದೆ.

ಯಾವುದೇ ಅಲ್ಪಾವಧಿ ಬೆಳೆ ಬೆಳೆಯಬಾರದು ಎಂದು ಕೆಬಿಜೆಎನ್‌ಎಲ್‌ ಅಧಿಕಾರಿಗಳು ಹೇಳಿಲ್ಲ. ಆದರೆ ಮರಳು ಮಾಫಿಯಾಕ್ಕೆ ಕುಮ್ಮಕ್ಕು ನೀಡುವ ಉದ್ದೇಶದಿಂದಲೇ ನೀರು ಬಿಡಲಾಗಿದೆ ಎನ್ನಲಾಗುತ್ತಿದೆ. ಕಲಬುರಗಿ ಮಹಾನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಸಲುವಾಗಿ ಸರಡಗಿ ಬ್ಯಾರೇಜ್‌ನಲ್ಲಿ ನೀರು ಸಂಗ್ರಹಿಸಲು ಬಿಡಲಾಗುತ್ತಿದೆ ಎನ್ನುವ ಸಬೂಬು ಹೇಳಲಾಗುತ್ತಿದೆ ಎಂದು ಆರೋಪಿಸಲಾಗುತ್ತಿದೆ.

ಮರಳು ದಂಧೆ ಶುರು: ಕಲ್ಲೂರು ಬ್ಯಾರೇಜ್‌ನಿಂದ ನೀರು ಖಾಲಿ ಮಾಡುತ್ತಿದ್ದಂತೆ ಅಕ್ರಮ ಮರಳುಗಾರಿಕೆ ಶುರುವಾಗಿದೆ. ಒಮ್ಮೆಲೆ ನೂರಾರು ಲಾರಿಗಳು ನದಿಗಿಳಿದಿವೆ. ಹಿಟಾಚಿಗಳ ಮೂಲಕ ಮರಳು ಎತ್ತುವಳಿ ಮಾಡಲಾಗುತ್ತಿದೆ. ಮರಳು ತುಂಬಿದ ಲಾರಿಗಳು ರೈತರ ಹೊಲಗಳ ಮೂಲಕ ದಾರಿ ಮಾಡಿಕೊಂಡು ಸಾಗುತ್ತಿವೆ. ಹಾಳಾಗುತ್ತಿರುವ ಹೊಲಗಳನ್ನು ರಕ್ಷಿಸುವಂತೆ ರೈತರು ಪೊಲೀಸರು ಹಾಗೂ ಕಂದಾಯ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಚುನಾವಣೆ ಸಂದರ್ಭದಲ್ಲೆ ಜೋರು: ಅಕ್ರಮ ಮರಳುಗಾರಿಕೆ ದಂಧೆ ಚುನಾವಣೆ ಸಂದರ್ಭದಲ್ಲೆ ಜೋರಾಗಿ ನಡೆಯುತ್ತದೆ. ಕಳೆದ ವರ್ಷದ ವಿಧಾನಸಭೆ ಚುನಾವಣೆ ವೇಳೆಯಲ್ಲಿ ಹಗಲಿರಳು ರಾಜಾರೋಷವಾಗಿ ಅಕ್ರಮ ಮರಳುಗಾರಿಕೆ ನಡೆದಿತ್ತು. ಚುನಾವಣೆ ಮುಗಿದ ನಂತರ ಕಳೆದ ಜೂನ್‌ ತಿಂಗಳಲ್ಲಿ ಜಿಲ್ಲಾಡಳಿತ ಹಾಗೂ ಪೊಲೀಸ್‌ ವರಿಷ್ಠಾಧಿಕಾರಿ ನೇತೃತ್ವದಲ್ಲಿ ಜಂಟಿಯಾಗಿ ದಾಳಿ ನಡೆಸಿ, ಭೀಮಾ ನದಿ ದಡದ ಅಫಜಲಪುರ ಹಾಗೂ ಜೇವರ್ಗಿ ತಾಲೂಕಿನ ವಿವಿಧೆಡೆ ಅಕ್ರಮ ಮರಳು ದಾಸ್ತಾನು ಅಡ್ಡೆಗಳಲ್ಲಿ ಸಂಗ್ರಹಿಸಿದ್ದ ಕೋಟ್ಯಂತರ ರೂ. ಮೊತ್ತದ ಮರಳು ಜಪ್ತಿ ಮಾಡಲಾಗಿತ್ತು. ಆದರೆ, ವಶಪಡಿಸಿಕೊಂಡ ಮರಳು ಏನಾಯಿತು ಎನ್ನುವುದರ ಕುರಿತು ಯಾರ ಬಳಿಯೂ ಸ್ಪಷ್ಟ ಮಾಹಿತಿ ಇಲ್ಲ.

Advertisement

ಅಕ್ರಮ ಮರಳುಗಾರಿಕೆ ತಡೆಗಟ್ಟಲಾಗುವುದು, ಅಕ್ರಮದಲ್ಲಿ ಭಾಗಿಯಾದ ಪೊಲೀಸ್‌ ಅಧಿಕಾರಿಗಳು ಮತ್ತು ಪೊಲೀಸರ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಎಸ್‌ಪಿ ಸ್ಪಷ್ಟವಾಗಿ ತಿಳಿಸಿದ್ದರು. ಆದರೆ, ಎಸ್‌ಪಿ ಎನ್‌. ಶಶಿಕುಮಾರ ಹೇಳಿಕೆ ಎಳ್ಳು ಕಾಳಷ್ಟು ಕಾರ್ಯರೂಪಕ್ಕೆ ಬಾರದೇ ಎಂದಿನಂತೆ ಮರಳುಗಾರಿಕೆ ನಡೆದಿರುವುದು ಆಡಳಿತ ವ್ಯವಸ್ಥೆಗೆ ಹಿಡಿದ ಕನ್ನಡಿ ಎನ್ನಬಹುದು.

ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಅಕ್ರಮ ಮರಳುಗಾರಿಕೆ ತಡೆಗೆ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದರು. ಇದಾದ ಒಂದೆರಡು ವಾರಗಳ ಕಾಲ ಸ್ಥಗಿತಗೊಂಡಿದ್ದ ಅಕ್ರಮ ಮರಳುಗಾರಿಕೆ ಮತ್ತೆ ಎಂದಿನಂತೆ ಶುರುವಾಗಿದೆ. ಒಟ್ಟಾರೆ ಅಕ್ರಮ ಮರಳುಗಾರಿಕೆ ದಂಧೆ ಒಂದು ವರ್ತುಲದೊಳಗಿನ ಒಳ ಒಪ್ಪಂದದ ಮೇರೆಗೆ ನಡೆಯುತ್ತಿದೆ. ಹೀಗಾಗಿ ದಂಧೆಗೆ ಕಡಿವಾಣ ಬೀಳುತ್ತಿಲ್ಲ. ಇದೇ ಕಾರಣಕ್ಕೆ ಅಫಜಲಪುರ, ದೇವಲಗಾಣಗಾಪುರ, ನೇಲೋಗಿ, ಫರಹತಾಬಾದ, ಶಹಾಬಾದ, ಮಳಖೇಡ, ಸೇಡಂ, ಸುಲೇಪೇಟ್ ಪೊಲೀಸ್‌ ಠಾಣಾಧಿಕಾರಿಗಳ ನಿಯೋಜನೆ ದೊಡ್ಡ ಮಟ್ಟದ ಲಾಬಿಯೊಂದಿಗೆ ನಡೆಯುತ್ತಿದೆ.

ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಜನರು ಅಕ್ರಮ ಮರಳುಗಾರಿಕೆ ವಿರುದ್ಧ ಎಲ್ಲಿಯ ವರೆಗೆ ಒಗ್ಗಟ್ಟಾಗಿ ಪ್ರಶ್ನಿಸುವುದಿಲ್ಲವೋ ಅಲ್ಲಿಯ ವರೆಗೆ ಅಕ್ರಮ ಮರಳುಗಾರಿಕೆ ತಡೆ ಅಸಾಧ್ಯ.

ಪ್ರಾದೇಶಿಕ ಆಯುಕ್ತರ ನಿರ್ದೇಶನದ ಮೇರೆಗೆ ಕಲಬುರಗಿ ಮಹಾನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಸಲುವಾಗಿ ಜೇವರ್ಗಿ ತಾಲೂಕಿನ ಕಲ್ಲೂರ ಬ್ಯಾರೇಜ್‌ನಿಂದ ನೀರುಬಿಡಲಾಗಿದೆ. ಸುತ್ತಮುತ್ತಲಿನ ರೈತರಿಗೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
• ಮುಗಳಿ ಎ.ಎನ್‌.,ಕೆಬಿಜೆಎನ್‌ಎಲ್‌ ಸೂಪರಿಟೆಂಡೆಂಟ್

ಮುನ್ಸೂಚನೆ ನೀಡದೆ ಕಲ್ಲೂರ ಬ್ಯಾರೇಜ್‌ನಿಂದ ಭೀಮಾ ನದಿ ನೀರು ಹರಿ ಬಿಡಲಾಗಿದೆ. ನೀರು ಖಾಲಿ ಆಗುತ್ತಿರುವಂತೆ ದೊಡ್ಡ-ದೊಡ್ಡ ಲಾರಿಗಳ ಮೂಲಕ ಅಕ್ರಮವಾಗಿ ಮರಳು ಸಾಗಾಟ ಜೋರಾಗಿ ನಡೆದಿದೆ.
• ಅಣ್ಣರಾವ್‌ ಪಾಟೀಲ, ಮಾಹೂರ ರೈತ

Advertisement

Udayavani is now on Telegram. Click here to join our channel and stay updated with the latest news.

Next