ವಿಶೇಷ ವರದಿ
ಬಾಗಲಕೋಟೆ: ಜಿಲ್ಲೆಯ ಬಾದಾಮಿ ಮತಕ್ಷೇತ್ರ ವ್ಯಾಪ್ತಿಯ ಮಲಪ್ರಭಾ ತೀರದ ಕೆರೆಗಳಿಗೆ ಘಟಪ್ರಭಾ ನದಿಯ (ಆಲಮಟ್ಟಿ ಡ್ಯಾಂ ಹಿನ್ನೀರು) ತುಂಬಿಸುವ ಮಹತ್ವದ ಯೋಜನೆಗೆ ಮಂಜೂರಾತಿ ಕೊಡಿಸುವಲ್ಲಿ ಕ್ಷೇತ್ರದ ಶಾಸಕರೂ ಆಗಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ.
ಸಣ್ಣ ನೀರಾವರಿ ಇಲಾಖೆ ಮತ್ತು ಜಿಪಂನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಡಿ ಇರುವ 13 ಕೆರೆಗಳಿಗೆ ನೀರು ತುಂಬಿಸಲು ಕೃಷ್ಣಾ ಭಾಗ್ಯ ಜಲ ನಿಗಮದ ಬೋರ್ಡ್ ಸಭೆಯಲ್ಲಿ ಈ ಮಹತ್ವದ ಯೋಜನೆಗೆ ಅನುಮೋದನೆ ನೀಡಲಾಗಿದೆ. ಬಾದಾಮಿ ಕ್ಷೇತ್ರದ ಕೋಟೆಕಲ್, ಕೆಲವಡಿ, ತಿಮ್ಮಸಾಗರ, ತೊಗುಣಶಿ, ತೊಗುಣಶಿ ತಾಂಡಾ, ಹಿರೇಬೂದಿಹಾಳ, ತೆಗ್ಗಿ, ಹಂಸನೂರ, ಹಂಗರಗಿ, ಲಿಂಗಾಪುರ, ಶಿರೂರ, ನೀಲಾನಗರ ಗ್ರಾಮಗಳ ಒಟ್ಟು 13 ಸಣ್ಣ ನೀರಾವರಿ ಹಾಗೂ ಜಿಪಂ ಕೆರೆಗಳಿಗೆ ಆಲಮಟ್ಟಿ ಅಣೆಕಟ್ಟಿನ ಹಿನ್ನೀರಿನಿಂದ (ಮಹಾರುದ್ರಪ್ಪನ ಹಳ್ಳದ) (ಘಟಪ್ರಭಾ ನದಿಯಿಂದ) ಪೈಪ್‌ಲೈನ್ ಮೂಲಕ ನೀರು ತುಂಬಿಸುವ ಯೋಜನೆಯ ಕ್ರಿಯಾ ಯೋಜನೆ ರೂಪಿಸಲಾಗಿದೆ.
ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅಧಿಕಾರದಿಂದ ಕೆಳಗಿಳಿಯುವ ಮೊದಲು ಕೃಷ್ಣಾ ಭಾಗ್ಯ ಜಲ ನಿಗಮದ 130ನೇ ಬೋರ್ಡ್ ಸಭೆಯಲ್ಲಿ 82 ಕೋಟಿ ಅನುದಾನಕ್ಕೆ ಅನುಮೋದನೆ ನೀಡಲಾಗಿದೆ. ಈ ಭಾಗದ ಕೆರೆಗೆ ನೀರು ತುಂಬಿಸುವುದರಿಂದ ಜನ-ಜಾನುವಾರುಗಳು, ರೈತರಿಗೆ ಬಹಳ ಅನುಕೂಲಕರವಾಗಲಿದೆ ಎಂದು ಯುವ ಮುಖಂಡ ಹೊಳಬಸು ಶೆಟ್ಟರ ತಿಳಿಸಿದ್ದಾರೆ. ಮಹತ್ವದ ಕೆರೆಗಳು: ಗುಳೇದಗುಡ್ಡ ಸಮೀಪದ ಕೋಟಿಕಲ್ ಕೆರೆ ಅದ್ಭುತವಾಗಿದ್ದು, ನೀರಿಲ್ಲದೇ ಸೊರಗಿದೆ. ಅಲ್ಲದೇ ಬಾಗಲಕೋಟೆ ತಾಲೂಕಿನ ಶಿರೂರ ಬಳಿಯ ನೀಲಾನಗರದ ಕೆರೆ ಸೇರಿದಂತೆ ಬಾದಾಮಿ ಕ್ಷೇತ್ರದ ಬೆಡ್ಡ-ಗುಡ್ಡಗಳ ಮಧ್ಯ ಅದ್ಭುತ ಕೆರೆಗಳಿದ್ದು, ನೀರು ತುಂಬಿಸುವ ಯೋಜನೆ ಅಗತ್ಯವಿತ್ತು. ಈ ಬೇಡಿಕೆ ಅರಿತ ಕ್ಷೇತ್ರದ ಶಾಸಕ ಸಿದ್ದರಾಮಯ್ಯ, ಬರೋಬ್ಬರಿ 82 ಕೋಟಿ ಮೊತ್ತದ ಮಹತ್ವ ಯೋಜನೆಗೆ ಮಂಜೂರಾತಿ ಪಡೆಯುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಈಗಾಗಲೇ ಕೆಂದೂರ ಕೆರೆಗೆ ನೀರು ತುಂಬಿಸುವ ಯೋಜನೆ ಕೂಡ ಕೈಗೊಳ್ಳಲಾಗುತ್ತಿದ್ದು, ಇದರಿಂದ ಕೆಂದೂರ ಸುತ್ತಲಿನ ಗ್ರಾಮಗಳಿಗೆ ಅನುಕೂಲವಾಗಲಿದೆ.
ಕೆರೆಗಳಿಗೆ ತುಂಬಲಿ ಜೀವಜಲ: ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆಯಡಿ 63 ಹಾಗೂ ಜಿಪಂ ಅಡಿ 172 ಕೆರೆಗಳಿದ್ದು, ಬಹುತೇಕ ಕೆರೆಗಳಿಗೆ ನೀರಿನ ಅಭಾವವಿದೆ. ಜಿಲ್ಲೆಯಲ್ಲಿ ಕೃಷ್ಣೆ, ಘಟಪ್ರಭೆ ಹಾಗೂ ಮಲಪ್ರಭೆ ಸಹಿತ ತ್ರಿವೇಣಿ ನದಿಗಳಿದ್ದು, ಮೂರು ನದಿಗಳ ಎಡ-ಬಲ ಕಾಲುವೆಗಳೂ ಇವೆ. ಹೀಗಾಗಿ ಕೆರೆಗಳಿಗೆ ನೀರು ತುಂಬಿಸಲು ಅಷ್ಟೊಂದು ಕಷ್ಟದ ಕೆಲಸವೇನಲ್ಲ. ಕಾಲುವೆಗಳ ಪಕ್ಕ ಹಾಗೂ ನದಿ ಸಮೀಪ ಇರುವ ಕೆರೆಗಳಿಗೆ ನೀರು ತುಂಬಿಸಲು ಸರ್ಕಾರ ಮಹತ್ವದ ನಿರ್ಧಾರ ಮಾಡಬೇಕಿದೆ. ಜಿಲ್ಲೆಯ ಮೂರು ನದಿಗಳ ಪ್ರವಾಹ ಬಂದಾಗ, ಜೀವಜಲ ಯಥೇತ್ಛವಾಗಿ ಹರಿದು ಹೋಗುತ್ತಿದ್ದು, ಆ ನೀರು ಸದ್ಬಳಕೆ ಮಾಡಿಕೊಳ್ಳಬೇಕಿದೆ.