Advertisement

ಎಪ್ರಿಲ್‌ ವೇಳೆ ಕಾಡುವ ಸಮಸ್ಯೆ; ಟ್ಯಾಂಕರ್‌ ನೀರೇ ಗತಿ

12:38 AM Mar 19, 2020 | Sriram |

ಕೊರ್ಗಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕೆಲವು ಕಡೆ ಈ ವರ್ಷವೂ ಎಪ್ರಿಲ್‌ನಲ್ಲಿ ನೀರಿನ ಸಮಸ್ಯೆ ಕಾಡಲಿದೆ. ಸಾಗಿನಗುಡ್ಡೆಯಲ್ಲಿರುವ ಬಾವಿಯನ್ನು ನವೀಕರಿಸಿ ಅದನ್ನು ಸಮರ್ಪಕವಾಗಿ ಬಳಸಿಕೊಂಡಲ್ಲಿ ನೀರಿನ ಅಭಾವ ಸ್ವಲ್ಪವಾದರೂ ಕಡಿಮೆಮಾಡ‌ಬಹುದಾಗಿದೆ.

Advertisement

ಕೊರ್ಗಿ: ಕುಂದಾಪುರ ತಾಲೂಕಿನ ಕೊರ್ಗಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಸಾಗಿನ ಗುಡ್ಡೆ ದಲಿತ ಕಾಲನಿ, ಹೊಸಮಠ ಜನತಾ ಕಾಲನಿ, ನ್ಯಾವಳಬೆಟ್ಟು ನಿವಾಸಿಗಳಿಗೆ ಈ ವರ್ಷವೂ ಎಪ್ರಿಲ್‌ನಲ್ಲಿ ನೀರಿನ ಸಮಸ್ಯೆ ಕಾಡುವ ಭೀತಿ ಇದೆ.

ಗ್ರಾಮ ಪಂಚಾಯತ್‌ನಿಂದ ನಲ್ಲಿ ನೀರಿನ ಸಂಪರ್ಕ ಕಲ್ಪಿಸಿದ್ದರೂ ಎಪ್ರಿಲ್‌ನಲ್ಲಿ ಅಂತರ್ಜಲ ಕುಸಿಯುವುದರಿಂದ ಇಲ್ಲಿನ ನಿವಾಸಿಗಳು ಕುಡಿಯುವ ನೀರಿಗೆ ದೂರ ಕ್ರಮಿಸಬೇಕಾಗಿದೆ.

ಈ ಬಾರಿಯೂ ಅಭಾವ ಭೀತಿ ಇಲ್ಲಿನ ಸಾಗಿನಗುಡ್ಡೆ ಹಾಗೂ ಹೊಸಮಠ ಜನತಾ ಕಾಲನಿ ಯಲ್ಲಿರುವ ಸಾರ್ವಜನಿಕ ಬಾವಿ ಹಾಗೂ ಹೊಸಮಠ ಸರಕಾರಿ ಶಾಲಾ ಸಮೀಪದ ಬಾವಿಯಿಂದ ಮುಂಜಾನೆ ನೀರು ಪೂರೈಕೆ ಯಾಗುತ್ತದೆ. ಆದರೆ ಎಪ್ರಿಲ್‌ನಲ್ಲಿ ಇಲ್ಲಿ ಅಂತರ್ಜಲ ಸಂಪೂರ್ಣವಾಗಿ ಕುಸಿತವಾಗುತ್ತದೆ. ಆದ್ದರಿಂದ ಶಾಶ್ವತ ಪರಿಹಾರ ಕ್ರಮ ಕೈಗೊಂಡರೆ ಉತ್ತಮ ಎನ್ನುವುದು ಸ್ಥಳೀಯರಾದ ಗೋಪಾಲ ಅವರ ಅಭಿಪ್ರಾಯ.

ಒಂದು ಕಿ.ಮೀ. ದೂರದ ಕುಷ್ಟಪ್ಪ ಶೆಟ್ಟಿ ಎನ್ನುವವರ ಮನೆಯಿಂದ ನೀರು ಹೊರಬೇಕಾದ ಪರಿಸ್ಥಿತಿ ಇದೆ. ಕಳೆದ ಬಾರಿ ಗ್ರಾ.ಪಂ. ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಿದೆ. ಇದಕ್ಕೆ ಶಾಶ್ವತ ಪರಿಹಾರ ಬೇಕು ಎನ್ನುತ್ತಾರೆ ಸ್ಥಳೀಯರಾದ ಗಂಗೆ ಅವರು.

Advertisement

ಸಮಸ್ಯೆಗಳು
ಹೊಸಮಠ ಜನತಾ ಕಾಲನಿಯ ಸುತ್ತಮುತ್ತಲ ಭಾಗದಲ್ಲಿ ಈಗಿರುವ ಸುಮಾರು ನಾಲ್ಕೈದು ಕೊಳವೆ ಬಾವಿಗಳು ಕೂಡಾ ನಿಷ್ಪ್ರಯೋಜಕವಾಗಿವೆ. ಕೊರ್ಗಿ ಸಾಗಿನ ಗುಡ್ಡೆಯಲ್ಲಿ ಸುಮಾರು 25 ವರ್ಷದ ಹಳೆಯ ಬಾವಿಯಲ್ಲಿ ನೀರಿದೆ, ಆದರೆ ಅದು ಶಿಥಿಲಗೊಂಡು ಅಪಾಯದ ಸ್ಥಿತಿಯಲ್ಲಿದೆ.

ಆಗಬೇಕಾದ್ದೇನು?
ಸಾಗಿನಗುಡ್ಡೆಯ ಬಾವಿಯನ್ನು ನವೀಕರಿಸಿ ಸಮರ್ಪಕವಾಗಿ ಬಳಸಿ ಕೊಳ್ಳುವುದು. ನೀರಿನ ಅಭಾವವಿದ್ದಾಗ ನಿವಾಸಿಗಳಿಗೆ ಟ್ಯಾಂಕರ್‌ನಲ್ಲಿ ನೀರು ಪೂರೈಕೆ ಮಾಡಬೇಕು. ಕೊರ್ಗಿ ಹಾಗೂ ಹೆಸ್ಕಾತ್ತೂರು ಸೇರಿದಂತೆ ಗ್ರಾಮೀಣ ಭಾಗದಲ್ಲಿ ಹರಿದು ಬಂದಿರುವ ವಾರಾಹಿ ಕಾಲುವೆ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಬಗ್ಗೆ ಯೋಜನೆಯನ್ನು ಸಿದ್ದಪಡಿಸುವ ಜತೆಗೆ ಗ್ರಾಮದಲ್ಲಿನ ಮದಗ ಹಾಗೂ ಕಿಂಡಿ ಅಣೆಕಟ್ಟು ಬಲಪಡಿಸುವುದು. ಹಾಗಿದ್ದರೆ ಮಾತ್ರ ಅಂತರ್ಜಲಮಟ್ಟ ವೃದ್ಧಿಗೊಂಡು ಶಾಶ್ವತ ಪರಿಹಾರ ಸಿಗಬಹುದು.

ಕಳೆದ ಬೇಸಗೆಯಲ್ಲಿ ತೀವ್ರವಾಗಿ ಕುಡಿಯುವ ನೀರಿನ ಸಮಸ್ಯೆ ಇದ್ದಲ್ಲಿ “ಉದಯವಾಣಿ’ಯು ಭೇಟಿ ಕೊಟ್ಟು, “ಜೀವಜಲ’ ಎನ್ನುವ ಸರಣಿಯಡಿ ಸಾಕ್ಷಾತ್‌ ವರದಿಗಳನ್ನು ಪ್ರಕಟಿಸಿತ್ತು. ಈ ಬಾರಿಯ ಬೇಸಗೆಯಲ್ಲಿ ನೀರಿನ ಸಮಸ್ಯೆಯ ನಿವಾರಣೆಗೆ ಸ್ಥಳೀಯ ಪಂಚಾಯತ್‌ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಯಾವೆಲ್ಲ ಪರಿಹಾರ ಕ್ರಮಗಳನ್ನು ಕೈಗೊಂಡಿದ್ದಾರೆ? ಮುಂದೆ ಆಗಬೇಕಾದ ಪ್ರಮುಖ ಕ್ರಮಗಳೆಲ್ಲದರ ಕುರಿತಾದ ಸರಣಿ ಇದು.

ಸೂಕ್ತ ಕ್ರಮ
ಗ್ರಾ.ಪಂ. ವತಿಯಿಂದ ಸಾಗಿನಗುಡ್ಡೆಯ ಭಾಗದಲ್ಲಿ ಈ ಹಿಂದೆ ಕೊಳವೆ ಬಾವಿ ತೋಡಲಾಗಿದೆ. ಆದರೂ ಅದು ಯಶಸ್ವಿಯಾಗಲಿಲ್ಲ. ಈ ಬಾರಿಯೂ ಸಮಸ್ಯೆಗಳಿರುವ 2 ಕಡೆಗಳಲ್ಲಿ ಕೊಳವೆ ಬಾವಿ ನಿರ್ಮಿಸುವ ಬಗ್ಗೆ ಸ್ಥಳ ಗುರುತಿಸಲಾಗಿದೆ . ಕುಡಿಯುವ ನೀರು ಪೂರೈಕೆಗೆ ಸೂಕ್ತ ಕ್ರಮಕೈಗೊಳ್ಳುತ್ತೇವೆ .
– ಗಂಗೆ ಕುಲಾಲ್ತಿ
ಅಧ್ಯಕ್ಷರು ,ಗ್ರಾಮ ಪಂಚಾಯತ್‌,ಕೊರ್ಗಿ

ಮಿತವಾಗಿ ಬಳಸಿ
ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕೊರ್ಗಿ ಹಾಗೂ ಹೆಸ್ಕಾತ್ತೂರು ಗ್ರಾಮಗಳು ಸೇರಿ ಸುಮಾರು 168 ಮನೆಗಳಿಗೆ ನಳ್ಳಿ ನೀರಿನ ಸಂಪರ್ಕವನ್ನು ಕಲ್ಪಿಸಲಾಗಿದೆ. ಬೇಸಗೆಯಲ್ಲಿನೀರಿನ ಬೇಡಿಕೆಗಳಿವೆ, ಆದರೆ
ಸಾರ್ವಜನಿಕರು ಜೀವ ಜಲವನ್ನು ಮಿತ ಬಳಕೆ ಮಾಡುವ ಮಾರ್ಗವನ್ನು ಅನುಸರಿಸಬೇಕಾಗಿದೆ.
– ಸುಧಾಕರ ಶೆಟ್ಟಿ ಗುಡ್ಡಮ್ಮಾಡಿ
ಪಿಡಿಒ, ಗ್ರಾ.ಪಂ. ಕೊರ್ಗಿ

-ಟಿ.ಲೋಕೇಶ್‌ ಆಚಾರ್ಯ ತೆಕ್ಕಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next