ತುಮಕೂರು: ಜಿಲ್ಲೆಯಲ್ಲಿ ಸುಡು ಬಿಸಿಲಿನ ತಾಪ ಮಾನ ಏರುತ್ತಿರುವಂತೆಯೇ ಕೆರೆ, ಕಟ್ಟೆ, ಹಳ್ಳ, ಕೊಳ್ಳ ಗಳಲ್ಲಿ ನೀರು ಹಿಂಗಿ ಹೋಗಿವೆ. ಏಪ್ರಿಲ್-ಮೇ ತಿಂಗಳಲ್ಲೇ ಕಲ್ಪತರು ನಾಡಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಮುಗಿಲುಮುಟ್ಟುತ್ತಿದೆ. ನಗರ, ಪಟ್ಟಣಗಳು ಸೇರಿ ದಂತೆ ಜಿಲ್ಲೆಯ 10 ತಾಲೂಕು ಗಳಲ್ಲಿ ಬರದ ಕರಿ ನೆರಳಿನ ಛಾಯೆ ತೀವ್ರಗೊಂಡಿದೆ. ಜನ, ಜಾನು ವಾರುಗಳಿಗಷ್ಟೆ ಕುಡಿಯುವ ನೀರಿನ ಸಂಕಷ್ಟ ಎದು ರಾಗಿಲ್ಲ. ಕಾಡು ಪ್ರಾಣಿ, ಪಕ್ಷಿಗಳಿಗೂ ನೀರು, ಆಹಾರ ವಿಲ್ಲದೇ ಪರಿತಪಿಸುತ್ತಿದ್ದು, ಸರ್ಕಾರಕ್ಕೆ ಈ ಪ್ರಾಣಿ ಪಕ್ಷಿಗಳ ಆರ್ತನಾದ ಕೇಳುತ್ತಿಲ್ಲ. ಜಿಲ್ಲೆಯಲ್ಲಿ ಮಳೆ ಇಲ್ಲದೆ ಅಂತರ್ಜಲ ಕುಸಿತ ಉಂಟಾಗಿ ಬೋರ್‌ವೆಲ್ಗಳು ಬರಿದಾಗುತ್ತಿರುವುದು ಒಂದೆಡಯಾದರೆ ಕೆರೆ, ಕಟ್ಟೆ, ಹಳ್ಳ, ಕೊಳ್ಳಗಳಲ್ಲಿ ನೀರಿಲ್ಲದಂತಾಗಿ ಪ್ರಾಣಿ, ಪಕ್ಷಿಗಳು ನೀರಿಗಾಗಿ ಹಾಹಾಕಾರ ಪಡುತ್ತಿವೆ. ನೀರು ಅರಿಸಿ, ಬೇರೆ, ಬೇರೆ ಕಡೆ ಪಕ್ಷಿಗಳು ವಲಸೆ ಹೋಗುತ್ತಿವೆ. ಮೇ ತಿಂಗಳಿನಲ್ಲಿ ಇಂತಹ ಪರಿಸ್ಥಿತಿ ಎದುರಾಗುತ್ತಿರಲಿಲ್ಲ, ಅಲ್ಲಲ್ಲಿ ಮಳೆ ಬಂದು ಕನಿಷ್ಟ ಗುಂಡಿಗಳಲ್ಲಿ ನೀರು ನಿಲ್ಲುತ್ತಿತ್ತು, ಆದರೆ, ಈ ಬಾರಿ ಏಪ್ರಿಲ್-ಮೇ ತಿಂಗಳ ಆರಂಭದಲ್ಲಿ ನಿರೀಕ್ಷೆ ಯಷ್ಟು ಪೂರ್ವ ಮುಂಗಾರು ಮಳೆ ಬರದ ಹಿನ್ನೆಲೆ ಯಲ್ಲಿ ಪ್ರಾಣಿ, ಪಕ್ಷಿಗಳ ಸ್ಥಿತಿ ಯಾವ ರೀತಿ ಆಗುತ್ತದೆ ಎನ್ನುವುದು ಊಹಿಸಲು ಸಾಧ್ಯವಿಲ್ಲ. ಈಗಾಗಲೇ ಆಧುನಿಕತೆಯ ಭರಾಟೆ ನಡುವೆ ಅಮೂಲ್ಯ ಪ್ರಾಣಿ, ಪಕ್ಷಿಗಳ ಕಣ್ಮರೆಯಾಗಿವೆ. ಈಗ ಉಂಟಾಗಿರುವ ಬರದಿಂದ ಇನ್ನೂ ಕೆಲವು ಪ್ರಾಣಿ, ಪಕ್ಷಿಗಳು ಹಸಿವು ಮತ್ತು ನೀರಿನ ದಾಹದಿಂದ ಪ್ರಾಣ ಕಳೆದುಕೊಳ್ಳುವ ಸಾಧ್ಯತೆಗಳಿವೆ.
ಎಲ್ಲಿ ಓಡುವಿರಿ. . . ನಿಲ್ಲಿ ಮೋಡಗಳೇ. . . ನಾಲ್ಕು ಹನಿಯ ಚೆಲ್ಲಬಾರದೆ, ಬಿಸಿಲಿನ ಝಳಕ್ಕೆ ಬಸವಳಿ ದಿರುವ ನಮ್ಮ ಬಾಯನ್ನು ತಂಪು ಮಾಡಲು ಕೆರೆ, ಕಟ್ಟೆಗಳಲ್ಲಿ ಹಳ್ಳ ಕೊಳ್ಳಗಳಲ್ಲಿ ನೀರು ಹರಿಯಬಾರದೆ ಎಂದು ದೇವರಲ್ಲಿ ಮೊರೆಯಿಡುತ್ತಾ, ಕಾಡು, ಮೇಡು, ಬೆಟ್ಟಗುಡ್ಡಗಳಲ್ಲಿ ನೀರಿಲ್ಲದೆ ಮೂಕ ಪ್ರಾಣಿ ಪಕ್ಷಿಗಳ ಆರ್ತನಾದ ಯಾರಿಗೂ ಕೇಳುತ್ತಿಲ್ಲ.
ಜೀವಿಗಳ ಸ್ಥಿತಿ ಶೋಚನೀಯ: ಜನವಸತಿ ಪ್ರದೇಶ ಗಳಲ್ಲಿಯೇ ವಾರಾನುಗಟ್ಟಲೇ ನೀರಿಲ್ಲ. ಬೋರ್‌ವೆಲ್ಗಳು ಬತ್ತಿವೆ. ಕೆರೆಯಲ್ಲಿ ನೀರು ಹಿಂಗಿದೆ. ಇನ್ನು ಈ ವರ್ಷ ಮುಂಗಾರು-ಹಿಂಗಾರಿನಲ್ಲಿ ಮಳೆ ಬಾರದೆ ಹಳ್ಳ, ಕೊಳ್ಳಗಳಲ್ಲಿ ನೀರು ಹರಿದಿಲ್ಲ. ಅಲ್ಲಿ, ಇಲ್ಲಿ ಅಲ್ಪ, ಸ್ವಲ್ಪ ನಿಂತ್ತಿದ್ದ ನೀರು ಹಿಂಗಿ ಹೋಗಿದೆ. ಕಾಡು ಪ್ರಾಣಿಗಳಿಗೆ ಒಂದು ಕಡೆ ಆಹಾರವಿಲ್ಲ, ಇನ್ನೊಂದು ಕಡೆ ಕುಡಿಯಲು ನೀರಿಲ್ಲ. ಈ ಪ್ರಾಣಿ, ಪಕ್ಷಿಗಳ ಸ್ಥಿತಿಯಂತೂ ಶೋಚನೀಯವಾಗಿದೆ.
Advertisement
ಆರ್ತನಾದ ಯಾರಿಗೂ ಕೇಳುತ್ತಿಲ್ಲ: ಎಲ್ಲಿ ನೋಡಿ ದರೂ ನೀರಿಲ್ಲ. ಹಾಕಿರುವ ಕೊಳವೆ ಬಾವಿಗಳು ಹಂತ ಹಂತವಾಗಿ ಬತ್ತಿ ಹೋಗುತ್ತಿವೆ. ಕುಡಿಯುವ ನೀರಿ ಗಾಗಿ ಜನ ಬೀದಿ ಬೀದಿ ಸುತ್ತುತ್ತಿರುವುದು ಒಂದೆಡೆ ಯಾದರೆ, ಕಾಡು ಪ್ರಾಣಿಗಳು, ಪಕ್ಷಿಗಳು ಬೆಟ್ಟಗುಡ್ಡ ಗಳಲ್ಲಿ ಅರಣ್ಯ ಪ್ರದೇಶದಲ್ಲಿ ನೀರು ಸಿಗದೆ ಬಸವಳಿದು, ನೀರಿಗಾಗಿ ಹಾಹಾಕಾರ ಪಡುತ್ತಿರುವುದು ಪ್ರಾಣಿ, ಪಕ್ಷಿ ಪ್ರಿಯರ ಮನ ಕಲಕುತ್ತಿದೆ.
Related Articles
Advertisement
ಜಿಲ್ಲೆಯಾದ್ಯಂತ ಕೆರೆ, ಕಟ್ಟೆಗಳಿಗೆ ಮಳೆ ನೀರೇ ಆಶ್ರಯವಾಗಿದ್ದು, ಕೆಲ ಭಾಗಕ್ಕೆ ಮಾತ್ರ ಹೇಮಾವತಿ ನೀರಿನ ಆಶ್ರಯವಿದೆ. ಆದರೆ, ಈ ವರ್ಷ ಇತ್ತ ಮಳೆಯೂ ಇಲ್ಲ, ಅತ್ತ ಹೇಮಾವತಿ ನೀರು ಬಂದಿಲ್ಲ. ಕೆರೆ ಕಟ್ಟೆಗಳು ಬರಿದಾಗಿವೆ. ಹಳ್ಳ, ಕೊಳ್ಳಗಳಲ್ಲಿ ನೀರೆಲ್ಲಾ ಹಿಂಗಿ ಹೋಗಿದೆ. ಕೊರೆದಿರುವ ಬೋರ್‌ವೆಲ್ಗಳಲ್ಲಿ ಅಂತರ್ಜಲ ಕುಸಿತ ಉಂಟಾಗಿ ಬೋರ್‌ವೆಲ್ ನಿಂತು ಹೋಗುತ್ತಿವೆ. ಮೇ ಆರಂಭದಲ್ಲಿಯೇ ನೀರಿಗೆ ಈ ದುಸ್ಥಿತಿ ಬಂದರೆ, ಮುಂದೆ ಮಳೆ ಬರದಿದ್ದರೆ ಜೂನ್ ತಿಂಗಳಲ್ಲಿ ಯಾವ ಪರಿಸ್ಥಿತಿ ಜಿಲ್ಲೆಯಲ್ಲಿ ಎದುರಾಗಲಿದೆ ಎನ್ನುವ ಆತಂಕ ಈಗಲೇ ಹೆಚ್ಚಿದೆ.
ಪ್ರಾಣಿ, ಪಕ್ಷಿಗಳಿಗೂ ನೀರಿನ ಹಾಹಾಕಾರ: ಅರಣ್ಯ ಪ್ರದೇಶ ಗುಡ್ಡಗಾಡುಗಳಲ್ಲಿ ಮಳೆ ಇಲ್ಲದೆ ನೀರು ಎಲ್ಲಿಯೂ ಸಂಗ್ರಹವಾಗುವುದಿಲ್ಲ. ಪ್ರಾಣಿ, ಪಕ್ಷಿಗಳು ನೀರಿಗಾಗಿ ಆಹಾಕಾರ ಪಡುತ್ತಿವೆ. ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ತೀವ್ರಗೊಳ್ಳುತ್ತಿದೆ. ಕಳೆದ ಮುಂಗಾರು-ಹಿಂಗಾರು ಮಳೆಯಲ್ಲಿ ಜಿಲ್ಲೆಯ ಲ್ಲಿಯೂ ನೀರು ನಿಲ್ಲುವಂತಹ ಮಳೆ ಬಂದಿಲ್ಲ. ಇದರಿಂದ ಹಳ್ಳ- ಕೊಳ್ಳ ಗುಂಡಿಗಳಲ್ಲಿ ಎಲ್ಲಿಯೂ ನೀರು ನಿಂತಿಲ್ಲ. ನೀರಿಲ್ಲದೆ ಪ್ರಾಣಿ, ಪಕ್ಷಿಗಳು ನೀರನ್ನು ಹುಡುಕಿಕೊಂಡು ನಗರ ಪ್ರದೇಶಗಳತ್ತ ಬರುತ್ತಿವೆ. ನಗರದಲ್ಲೂ ನೀರಿನ ಸಮಸ್ಯೆ ಇದ್ದು, ಇನ್ನು ಪ್ರಾಣಿ ಪಕ್ಷಿಗಳ ಸ್ಥಿತಿಯೂ ಶೋಚನೀಯವಾಗಿದೆ.
ತುಮಕೂರು ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಅಪರೂಪವಾದ ಪ್ರಾಣಿ ಪಕ್ಷಿಗಳಿವೆ. ಪ್ರಾಣಿ ಪಕ್ಷಿಗಳು ವಾಸಿಸುವ ಜಾಗ ಇಂದು ಬಯಲು ಪ್ರದೇಶವಾಗಿ ಕಾಣುತ್ತಿರುವ ಹಿನ್ನೆಲೆಯಲ್ಲಿ ಪ್ರಾಣಿ ಪಕ್ಷಿಗಳ ವಾಸಸ್ಥಾನಕ್ಕೆ ಜಾಗವಿಲ್ಲದೆ ನಾಡಿನತ್ತ ಆಗಮಿಸುತ್ತಿವೆ. ಪ್ರಕೃತಿಯಲ್ಲಿದ್ದ ಅನೇಕ ಹಕ್ಕಿ ಪಕ್ಷಿಗಳು, ಪ್ರಾಣಿ ಸಂಕುಲಗಳು ವಿನಾಶದ ಅಂಚಿನತ್ತ ಬಂದಿರುವುದು ವಿಪರ್ಯಾಸದ ಸಂಗತಿಯಾಗಿದೆ.
ಅರಣ್ಯ ಸಂಪತ್ತು ವಿನಾಶ: ಹೆಚ್ಚುತ್ತಿರುವ ಜನ ಸಂಖ್ಯೆಯ ಜೊತೆಗೆ ಆಧುನಿಕ ತಂತ್ರಜ್ಞಾನ ಬೆಳವಣಿಗೆ ಯಾಗುತ್ತಲಿದ್ದು, ಈ ತಂತ್ರಜ್ಞಾನದ ಬೆಳವಣಿಗೆಯ ನಡುವೆ ಪ್ರಾಕೃತಿಕ ಗಿಡ ಮರಗಳನ್ನು ಅವ್ಯಾಹತವಾಗಿ ಕಡಿಯುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಸಂಪತ್ತು ವಿನಾಶದ ಅಂಚಿನತ್ತ ಬಂದು ತಲುಪಿದೆ.
ಜಿಲ್ಲೆಯಲ್ಲಿ ಹೇರಳವಾಗಿ ನಡೆಯುತ್ತಿದ್ದ ಗಣಿಗಾರಿಕೆ ಯಿಂದ ಗಿಡ ಮರಗಳು ನಾಶವಾಗಿರುವುದರ ಜೊತೆಗೆ ಅಲ್ಲಿದ್ದ ಅನೇಕ ಪಕ್ಷಿಗಳು ಇಂದು ಮರೆಯಾಗಿವೆ. ನಮ್ಮ ಜಿಲ್ಲೆಯಲ್ಲಿದ್ದ ಮರ ಕುಟುಕ ಹಕ್ಕಿ, ಗಿಣಿ, ಕೋಗಿಲೆ, ಪಾರಿವಾಳ, ನವಿಲು, ಕೊಕ್ಕರೆ, ಗೀಜಗನ ಹಕ್ಕಿ, ಬಾವಲಿಗಳು, ನವರಂಗ ಸೇರಿದಂತೆ ಹತ್ತು ಹಲವು ಜಾತಿಯ ಹಕ್ಕಿಗಳು ನಮ್ಮಿಂದ ಮಾಯವಾಗಿವೆ.
ಮರ ಕಡಿಯುವವರ ಸಂಖ್ಯೆ ಹೆಚ್ಚಳ:ಪ್ರಕೃತಿಯಲ್ಲಿ ಉಂಟಾಗುತ್ತಿರುವ ಈ ಅಸಮತೋಲನಕ್ಕೆ ಹಲವಾರು ಕಾರಣಗಳಿವೆ. ಸಾವಿರಾರು ಎಕರೆ ಇದ್ದ ಮರಗಿಡಗಳ ಕಾಡು ಮಾಯವಾಗಿ ಎಲ್ಲಡೆಯೂ ನಾಡಾಗುತ್ತಿವೆ. ಗಿಡಗಳನ್ನು ಬೆಳೆಸುವವರು ಕಡಿಮೆಯಾಗಿ ಕಡಿಯು ವವರ ಸಂಖ್ಯೆಯೇ ಹೆಚ್ಚಾಗುತ್ತಿದೆ. ಮಳೆಯು ಸಮರ್ಪಕವಾಗಿ ಬಾರದೆ ಬರಗಾಲ ನಿರಂತರವಾಗಿ ಇರುವುದರಿಂದ ಪ್ರಾಣಿ, ಪಕ್ಷಿಗಳಿಗೆ ಕಾಡುಗಳಲ್ಲಿ ನೀರು ಸಿಗುವುದು ಕಷ್ಟವಾಗಿದೆ.ಹೀಗೆ ಆಹಾರ, ನೀರು, ಪ್ರಕೃತಿಯ ವೈಪರೀತ್ಯದಿಂದ ದಿನದಿಂದ ದಿನಕ್ಕೆ ಪಕ್ಷಿಗಳ ಸಂಕುಲ ನಶಿಸುವ ಹಂತ ತಲುಪಿದೆ. ಇಂದಿನ ಮಕ್ಕಳು ಅನೇಕ ಪಕ್ಷಿಗಳನ್ನು ಚಿತ್ರಗಳ ಮೂಲಕ ಹಾಗೂ ಪಕ್ಷಿ ಸಂಗ್ರಹಾಲಯಗಳಲ್ಲಿ ವೀಕ್ಷಿಸುವಂತಹ ಸ್ಥಿತಿ ನಿರ್ಮಾ ಣವಾಗಿದೆ. ಈ ರೀತಿಯ ಹಕ್ಕಿ ಪಕ್ಷಿಗಳು ವಿನಾಶದ ಅಂಚಿನತ್ತ ತಲುಪುತ್ತಿರುವುದಕ್ಕೆ ಅನೇಕ ಕಾರಣಗಳನ್ನು ಪಕ್ಷಿ ಪ್ರಿಯರು, ಪರಿಸರ ಪ್ರೇಮಿಗಳು ನೀಡುತ್ತಲೇ ಇದ್ದಾರೆ. ಆದರೆ, ಈ ಪ್ರಾಣಿ, ಪಕ್ಷಿ ಸಂಕುಲವನ್ನು ಉಳಿಸುವ ಪ್ರಯತ್ನವನ್ನು ಯಾರೂ ಮಾಡುತ್ತಿಲ್ಲ.
ಸರಕಾರಕ್ಕಿಲ್ಲ ಪ್ರಾಣಿ, ಪಕ್ಷಿಗಳ ಚಿಂತನೆ: ಜನ, ಜಾನು ವಾರುಗಳಿಗಾಗಿ ಗಂಜಿ ಕೇಂದ್ರ, ಗೋ ಶಾಲೆಗಳನ್ನು ತೆರೆಯುತ್ತದೆ. ಜಾನುವಾರುಗಳ ಕುಡಿಯುವ ನೀರಿಗಾಗಿ ತೊಟ್ಟಿ ನಿರ್ಮಿಸುತ್ತದೆ. ಆದರೆ, ಇಡೀ ಜಿಲ್ಲೆಯ ಬೆಟ್ಟ ಗುಡ್ಡಗಳಲ್ಲಿ, ಅರಣ್ಯ ಪ್ರದೇಶದಲ್ಲಿ ನೀರಿಲ್ಲ. ಕನಿಷ್ಠ ನಶಿಸುತ್ತಿರುವ ಈ ಪ್ರಾಣಿ, ಪಕ್ಷಿಗಳು ಬರಗಾಲದ ಪರಿಸ್ಥಿತಿಯಲ್ಲಿ ಹೇಗೆ ಬದುಕುತ್ತವೆ. ಅವುಗಳಿಗೆ ನೀರು ಆಹಾರ ಹೇಗೆ ಒದಗಿಸಬೇಕು ಎನ್ನುವ ಆಲೋಚನೆ ಯಾವುದೇ ಜನಪ್ರತಿನಿಧಿ, ಅಧಿ ಕಾರಿಗಳಿಗೆ ತೋಚದೇ ಇರುವುದು ವಿಪರ್ಯಾಸ.
ವಲಸೆ ಹೋಗುತ್ತಿವೆ ಜೀವಿಗಳು: ತುಮಕೂರು ಜಿಲ್ಲೆಯ ದೇವರಾಯನದುರ್ಗ ಅರಣ್ಯ ಪ್ರದೇಶ, ಬುಕ್ಕಾಪಟ್ಟಣ ಅರಣ್ಯ ಪ್ರದೇಶ, ಮಧುಗಿರಿ ಮೈದಾಳ ಅರಣ್ಯ ಪ್ರದೇಶ ಸೇರಿದಂತೆ ಜಿಲ್ಲೆಯಲ್ಲಿರುವ ಬಹು ತೇಕ ಅರಣ್ಯ ಪ್ರದೇಶಗಳಲ್ಲಿ ಅತ್ಯಮೂಲ್ಯವಾದ ಪಕ್ಷಿ ಸಂಕುಲವಿದೆ. ಆದರೆ, ಜಿಲ್ಲೆಯಲ್ಲಿ ಬರಗಾಲ ಪರಿಸ್ಥಿತಿ ಎದುರಾಗಿರುವ ಹಿನ್ನೆಲೆಯಲ್ಲಿ ಬೆಳೆ ವಿಫಲ ವಾಗಿ ಪಕ್ಷಿ ಗಳಿಗೆ ಅರಣ್ಯ ಸಿಗುತ್ತಿಲ್ಲ. ಇತ್ತ ನೀರು ಇಲ್ಲ, ಇದರಿಂದ ಜಿಲ್ಲೆಯ ಬಹುತೇಕ ಪಕ್ಷಿಗಳು ವಲಸೆ ಹೋಗುತ್ತಿವೆ. ಕೆಲವು ಪ್ರಾಣಿಗಳು ನಗರಗಳತ್ತ ದಾಳಿಯಿಡುತ್ತಿವೆ. ಇದನ್ನು ತಪ್ಪಿಸಲು ಅರಣ್ಯ ಪ್ರದೇಶಗಳಲ್ಲಿ ಕನಿಷ್ಠ ಕುಡಿಯುವ ನೀರು ಸಿಗುವಂತೆ ವ್ಯವಸ್ಥೆ ಮಾಡುವತ್ತಾ, ಜಿಲ್ಲಾಡಳಿತ, ಸರ್ಕಾರ ಮುಂದಾಗಬೇಕಿದೆ.
ಆಹಾರ, ನೀರು ಅರಸಿ ಪ್ರಾಣಿ, ಪಕ್ಷಿಗಳು ವಲಸೆ
ಕಾಡು ಪ್ರಾಣಿ, ಪಕ್ಷಿಗಳಿಗೆ ಆಹಾರ ಎಷ್ಟು ಮುಖ್ಯವೋ, ಕುಡಿಯುವ ನೀರು ಅಷ್ಟೆ ಮುಖ್ಯ. ನೀರಿಲ್ಲದಿದ್ದರೆ ಪ್ರಾಣಿ, ಪಕ್ಷಿಗಳು ಬದುಕುವುದು ಕಷ್ಟ. ಹಾಗಾಗಿ ಪ್ರಾಣಿ, ಪಕ್ಷಿಗಳು ಆಹಾರ- ನೀರು ಅರಸಿ ವಲಸೆ ಹೋಗುತ್ತವೆ. ದೇವರಾಯನದುರ್ಗ ಅರಣ್ಯ ಪ್ರದೇಶದಲ್ಲಿ ಅಪರೂಪದ ಜೀವ ಸಂಕುಲವಿದೆ. ಈ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತೆ ಪ್ರಾಣಿ, ಪಕ್ಷಿಗಳಿಗೆ ನೀರೊದಗಿಸುತ್ತಿದ್ದ ಕೆರೆ, ಕಟ್ಟೆಗಳು ಬತ್ತಿ ಹೋಗಿದೆ. ಪಕ್ಷಿಗಳಿಗೆ ಪ್ರತಿನಿತ್ಯ ನೀರು ಬೇಕು. ಅದು ಜೀವನದ ಕ್ರಮ. ಆದರೆ, ಇಂದು ಬೆಟ್ಟಗುಡ್ಡಗಳಲ್ಲಿ ಹುಲ್ಲು ಇಲ್ಲ. ಗಿಡ ಮರಗಳು ಇಲ್ಲ. ಅಂತರ್ಜಲ ಹಿಡಿದು ಇಟ್ಟುಕೊಳ್ಳುವಂತಂಹ ವಾತಾವರಣ ಇಲ್ಲ. ಕಲ್ಲಿನ ಪೊದರೆಗಳಲ್ಲಿ ನೀರು ಸದಾಕಾಲ ಪಕ್ಷಿಗಳಿಗೆ, ಜೀವ ಜಂತುಗಳಿಗೆ ಸಿಗುತ್ತಿತ್ತು. ಆದರೆ, ಇಂದು ಎಲ್ಲ ಕಡೆ ಬಿಸಿಲಿನ ತಾಪಮಾನಕ್ಕೆ ಎಲ್ಲ ಕಡೆ ಬತ್ತಿಹೋಗಿದೆ. ಕಾಡು ಪ್ರಾಣಿಗಳಿಗೆ ನೀರಿನ ಸಮಸ್ಯೆ ತೀವ್ರಗೊಳ್ಳುತ್ತದೆ. ಅರಣ್ಯ ಪ್ರದೇಶ ಬಿಟ್ಟು ಅವು ಹೊರ ಬಂದವೆಂದರೆ ಪ್ರಾಣಿ, ಪಕ್ಷಿಗಳ ಜೀವಕ್ಕೆ ಸಂಚಕಾರವಾಗುತ್ತದೆ. ಸರ್ಕಾರ ಇದನ್ನು ಅರಿಯಬೇಕು. ಈ ಕಾಡು ಪ್ರಾಣಿ, ಪಕ್ಷಿಗಳು ಆಹಾರ ನೀರಿಲ್ಲದಿದ್ದರೆ ಉಳಿಯುವುದಿಲ್ಲ. ಇವುಗಳ ಸಂರಕ್ಷಣೆ ಆಗಬೇಕು ವನ್ಯಜೀವಿ ಜಾಗೃತಿ ನಿಸರ್ಗ ಸಂಸ್ಥೆಯ ಅಧ್ಯಕ್ಷ ಬಿ.ವಿ. ಗುಂಡಪ್ಪ ತಿಳಿಸಿದರು.
ಚಿ.ನಿ. ಪುರುಷೋತ್ತಮ್