ಕೊಪ್ಪಳ: ತಾಲೂಕಿನ ಬಿ. ಹೊಸಳ್ಳಿಯಲ್ಲಿ ಕುಡಿಯುವ ನೀರಿಗೆ ನಿತ್ಯ ಅಲೆದಾಡುವಂತಾಗಿದೆ. ನೀರು ಇದ್ದರೂ ಸರಿಯಾದ ನಿರ್ವಹಣೆ ಇಲ್ಲದೇ ತೊಂದರೆ ಎದುರಿಸುವಂತಾಗಿದೆ. ನೀರಿಗಾಗಿ ಹೊಲ-ಗದ್ದೆ, ತೋಟಗಳಿಗೆ ಕೊಡ ಹಿಡಿದು ನಿತ್ಯ ಅಲೆದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ನಗರದಿಂದ ಕೂಗಳತೆ ದೂರದಲ್ಲಿರುವ ಬಿ. ಹೊಸಳ್ಳಿ ಗ್ರಾಮ ಬದ್ದೂರಬಂಡಿ ಗ್ರಾಪಂ ವ್ಯಾಪ್ತಿಗೆ ಬರಲಿದೆ. ಈ ಗ್ರಾಮದಲ್ಲಿ 2 ಸಾವಿರ ಜನಸಂಖ್ಯೆ ಇದ್ದು, ಪ್ರತಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿದೆ. ಮಕ್ಕಳು ಶಾಲೆ ಬಿಟ್ಟು ನೀರು ತರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನೀರಾಗಿಯೇ ಮನೆಯಲ್ಲಿ ಒಬ್ಬರು ಇರಬೇಕು. ಇಲ್ಲದಿದ್ದರೆ ಕುಡಿಯಲು ನೀರಿಲ್ಲ.
ಗ್ರಾಪಂ ನೀರಗಂಟಿಗಳು ಅಷ್ಟಕಷ್ಟೇ ಎನ್ನುವಂತಾಗಿದೆ. ನೀರಿನ ಸಮಸ್ಯೆ ಕುರಿತು ಹಲವು ಬಾರಿ ಅಧಿ ಕಾರಿಗಳ ಗಮನಕ್ಕೆ ತಂದರೂ ಪ್ರಯೋಜನ ಇಲ್ಲದಂತಾಗಿದೆ ಎಂದು ಗ್ರಾಮಸ್ಥರು ವೇದನೆ ವ್ಯಕ್ತಪಡಿಸಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಶಾಸಕ ರಾಘವೇಂದ್ರ ಹಿಟ್ನಾಳ ಅವರು ಗ್ರಾಮದಲ್ಲಿ ಜನಸ್ಪಂದನಾ ಸಭೆ ನಡೆಸಿದ್ದರು. ಅಂದು ಸಮಸ್ಯೆಯಾಗಬಾರದೆಂದು ನೀರು ಪೂರೈಕೆ ಮಾಡಲಾಗಿತ್ತು. ಅವರು ತೆರಳಿದ ಬಳಿಕ ಸರಿಯಾಗಿ ನೀರನ್ನೇ ಪೂರೈಸಿಲ್ಲ. ಅಚ್ಚರಿಯೆಂದರೆ ಗ್ರಾಮದಲ್ಲಿ 4 ಬೋರ್‌ವೆಲ್ ಗಳಿವೆ. ಅವುಗಳನ್ನು ಸರಿಯಾಗಿ ನಿರ್ವಹಣೆ ಮಾಡದೇ ಇರುವುದಕ್ಕೆ ಈ ಸಮಸ್ಯೆ ಎದುರಾಗಿದೆ. ಗ್ರಾಪಂ ಅಧಿ ಕಾರಿ ವರ್ಗ ನಿಗಾ ವಹಿಸುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.
ತಾತ್ಕಾಲಿಕ ಸ್ಪಂದನೆ: ಕುಡಿಯುವ ನೀರಿನ ಸಮಸ್ಯೆಯಿಂದ ತೀವ್ರ ತೊಂದರೆ ಎದುರಾದಾಗ ಗ್ರಾಮಕ್ಕೆ ಬರುವ ಅಧಿ ಕಾರಿಗಳು ತಾತ್ಕಾಲಿಕ ಒಂದೆರಡು ದಿನ ನೀರು ಪೂರೈಕೆ ಮಾಡುತ್ತಾರೆ. ಬಳಿಕ ಮತ್ತೆ ಅದೇ ಸಮಸ್ಯೆಯೇ ಮುಂದುವರಿಯುತ್ತಿದೆ. ಮಹಿಳೆಯರು, ಮಕ್ಕಳು. ಹಿರಿಯರು ನಿತ್ಯ ನಳದ ಮುಂದೆಯೇ ಕುಳಿತು ಜಾತಕ ಪಕ್ಷಿಯಂತೆ ನೀರಿಗಾಗಿ ಕಾಯಬೇಕಾದ ಸ್ಥಿತಿ ಎದುರಾಗಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು.
ಬೇಸಿಗೆ ಆರಂಭಕ್ಕೂ ಮುನ್ನ ಸಮಸ್ಯೆ: ಕುಡಿಯುವ ನೀರಿನ ಸಮಸ್ಯೆ ಕೇವಲ ಇದೊಂದೇ ಗ್ರಾಮವಲ್ಲ. ಜಿಲ್ಲೆಯ ಹಲವು ಗ್ರಾಮಗಳಲ್ಲೂ ಇದೇ ಸಮಸ್ಯೆ ಎದುರಾಗುತ್ತಿದೆ. ಬಹದ್ದೂರಬಂಡಿ ಗ್ರಾಮವೂ ಕುಡಿಯುವ ನೀರಿನ ಸಮಸ್ಯೆಗೆ ಹೊರತಾಗಿಲ್ಲ. ಕೊಪ್ಪಳಕ್ಕೆ ತೆರಳಿಯೇ ತರುವಂತ ಸ್ಥಿತಿ ಇಂದಿಗೂ ಇದೆ. ಇನ್ನೂ ಜಿಲ್ಲೆಯ ಹಲವು ಹಳ್ಳಿಗಳಲ್ಲಿ ಹೊಲ, ಗದ್ದೆಗಳಿಗೆ ತೆರಳಿ ನೀರು ತರುವುದು ಸಾಮಾನ್ಯವಾಗಿದೆ. ಅ ಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತು ಜನರೇ ನೀರಿಗಾಗಿ ಪರ್ಯಾಯ ದಾರಿ ಕಂಡುಕೊಂಡಿರುವ ಉದಾಹರಣೆಗಳೂ ಹೆಚ್ಚಿವೆ. ಇನ್ನಾದರೂ ಅ ಧಿಕಾರಿಗಳು ಕೂಡಲೇ ಹಳ್ಳಿ ಹಳ್ಳಿಗಳಿಗೆ ತೆರಳಿ ಬೇಸಿಗೆಯಲ್ಲಿ ಎದುರಾಗುವ ನೀರಿನ ಸಮಸ್ಯೆಗೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವ ಅಗತ್ಯವಿದೆ.