ಕೋಲಾರ: ಜಿಲ್ಲೆಯ 105 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಈ ಪೈಕಿ 45 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ಹಾಗೂ 60 ಗ್ರಾಮಗಳಿಗೆ ಖಾಸಗಿ ಕೊಳವೆ ಬಾವಿಗಳ ಮೂಲಕ ನೀರನ್ನು ಪೂರೈಸಲಾಗುತ್ತಿದೆ. ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಮುಂಜಾಗ್ರತೆ ವಹಿಸಿ ಎಂದು ಜಿಲ್ಲಾಧಿಕಾರಿ ಮಂಜುನಾಥ್ ಅಧಿಕಾರಿಗಳಿಗೆ ಸೂಚಿಸಿದರು.
ಮೇವಿನ ಸಮಸ್ಯೆ ಇಲ್ಲ: ಇತ್ತೀಚೆಗೆ ಮಳೆಯಾಗಿದ್ದು ಜಾನುವಾರುಗಳಿಗೆ ಒಂದಷ್ಟು ಮೇವು ಲಭ್ಯವಾಗುವಂತಾಗಿದೆ. ಮೇವಿನ ಸಮಸ್ಯೆ ಎದುರಾಗಬಾರದೆಂದು ಮಿನಿಕಿಟ್‌ಗಳನ್ನು ವಿತರಿಸಲಾಗುತ್ತಿತ್ತು. ಅದರಂತೆ ಮೇವಿನ ಸಂಸ್ಕರಿಸಿ ಇಡಲಾಗಿತ್ತು. ಇನ್ನೂ 13 ವಾರಕ್ಕೆ ಆಗುವಷ್ಟು ಮೇವಿನ ಲಭ್ಯತೆ ಇದೆ. ಹಾಗಾಗಿ ಯಾವುದೇ ರೀತಿಯ ಮೇವಿನ ಸಮಸ್ಯೆ ಇಲ್ಲವೆಂದು ಹೇಳಿದರು.
ಉದ್ಯೋಗ ಕೊಡಿಸಿ: ಕೌಶಲ್ಯ ಅಭಿವೃದ್ಧಿ ಕೇಂದ್ರಗಳ ಮೂಲಕ ಯುವ ಜನತೆಗೆ ತರಬೇತಿಯನ್ನು ನೀಡಲಾಗುತ್ತಿದೆ. ತರಬೇತಿ ಪಡೆದುಕೊಂಡವರಿಗೆ ಉದ್ಯೋಗಗಳನ್ನು ಕೊಡಿಸುವ ಕೆಲಸವನ್ನೂ ಆಯಾ ಸಂಸ್ಥೆಗಳು ಮಾಡಬೇಕಾಗಿದ್ದು ಇದನ್ನು ಸೂಕ್ತವಾಗಿ ಮಾಡಲಾಗುತ್ತಿದೆಯೇ ಎಂಬ ಕುರಿತು ಸೂಕ್ತ ಮಾಹಿತಿಯನ್ನು ಪಡೆದುಕೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ದಾಖಲೆ ಸ್ವೀಕರಿಸಿ: ರೈತರ ಹಿತದೃಷ್ಟಿಯನ್ನು ಮನಗಂಡು ಸರ್ಕಾರ ಸಾಲಮನ್ನಾ ಮಾಡಲಾಗಿದ್ದು, ಜಿಲ್ಲೆಗೆ ಸಂಬಂಧಿಸಿದಂತೆ ಬಹುತೇಕ ರೈತರ ಸಾಲಮನ್ನಾ ಆಗಿದೆ. ಕೆಲವು ರೈತರ ಸಾಲಮನ್ನಾ ಮಾಡಲು ಅವರು ಪಡಿತರ ಚೀಟಿ ಮತ್ತು ಆಧಾರ್ ನೀಡಿರುವುದಿಲ್ಲ. ಹಾಗಾಗಿ ಬಾಕಿ ಇರುವ ರೈತರ ಸಾಲಮನ್ನಾವನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಹಾಯ ಪಡೆದುಕೊಂಡು ಶೀಘ್ರವಾಗಿ ಪೂರ್ಣಗೊಳಿಸಬೇಕೆಂದು ಅಧಿಕಾರಿಗಳಿಗೆ ಸಲಹೆ ನೀಡಿದರು.
Advertisement
ನಗರದ ಜಿಲ್ಲಾಧಿಕಾರಿ ಕಚೇರಿಯ ನ್ಯಾಯಾಂಗ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಟ್ಯಾಂಕರ್ ಬಿಲ್ಗಳನ್ನು ಸಕಾಲದಲ್ಲಿ ಸಲ್ಲಿಸಿ, ಯಾವುದೇ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡುಬರದಂತೆ ಜಾಗೃತಿಯನ್ನು ವಹಿಸಬೇಕು ಎಂದು ಸೂಚಿಸಿದರು.
Related Articles
Advertisement
ನೋಂದಣಿ ಮಾಡಿಸಿ: ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿಗಳನ್ನು ಕೊರೆಯಿಸಲು ಕಾರ್ಯಾದೇಶ ನೀಡಲಾಗಿದೆ. ಇನ್ನೂ ಕೆಲಸ ಮಾಡದೆ ಇರುವವರಿಗೆ ನೋಟಿಸ್ ನೀಡಿ, ಸಕಾಲ ಯೋಜನೆಯಲ್ಲಿ ಬಾಕಿ ಇರುವ ಅರ್ಜಿಗಳನ್ನು ಶೀಘ್ರವೇ ವಿಲೇವಾರಿ ಮಾಡಿ, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ನೋಂದಣಿ ಬಗ್ಗೆ ಎಲ್ಲಾ ರೈತರಿಗೆ ಮಾಹಿತಿಯನ್ನು ನೀಡಿ ನೋಂದಣಿ ಮಾಡಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದ ಅವರು ಇಲಾಖಾವಾರು ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚಿಸಿದರು. ಸಭೆಯಲ್ಲಿ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
ಯೋಗ ದಿನಾಚರಣೆಗೆ ಸಕಲ ಸಿದ್ಧತೆ: ಜಿಲ್ಲಾಧಿಕಾರಿ
ನಗರದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಜೂನ್ 21 ರಂದು ಆಚರಿಸುವ ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಜಿಲ್ಲಾಧಿಕಾರಿ ಜೆ. ಮಂಜುನಾಥ್ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಅಂದು ಬೆಳಗ್ಗೆ 6.30 ಗಂಟೆಗೆ ವಿಶ್ವ ಯೋಗ ದಿನವನ್ನು ಆಚರಿಸಲು ತೀರ್ಮಾನಿಸಲಾಯಿತು. ಯೋಗ ಕಾರ್ಯದಲ್ಲಿ 1500 ವಿದ್ಯಾರ್ಥಿಗಳು ಹಾಗೂ ಯೋಗ ಪಟುಗಳು ಭಾಗವಹಿಸುವರು. ಸಭೆಯಲ್ಲಿ ಜಿಲ್ಲಾ ಆಯುಷ್ ಅಧಿಕಾರಿ ಡಾ.ಉಮಾ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೆ.ರತ್ನಯ್ಯ ಸೇರಿ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.