ಮಹಾನಗರ: ನಗರದಲ್ಲಿ ಕುಡಿಯುವ ನೀರಿನ ರೇಷನಿಂಗ್ ಜಾರಿಯಾದ ಬಳಿಕ ಶಾಲೆ, ಕಾಲೇಜು, ಹಾಸ್ಟೆಲ್, ಹೊಟೇಲ್, ಆಸ್ಪತ್ರೆ, ಅಂಗಡಿ, ಪಿಜಿ, ಕೈಗಾರಿಕೆಗಳಿಗೆ ನೀರಿನ ಹೊಡೆತ ಬಿದ್ದಿದ್ದು, ಬೇಗನೆ ಮಳೆಯಾಗದಿದ್ದರೆ ಮತ್ತಷ್ಟು ಸಮಸ್ಯೆ ಎದುರಾಗುವ ಆತಂಕ ನಿರ್ಮಾಣವಾಗಿದೆ.
ನಗರದಲ್ಲಿ ಹಲವು ವಾರ್ಡ್‌ಗಳಿಗೆ ನೀರು ಸಮರ್ಪಕ ಪ್ರಮಾಣದಲ್ಲಿ ಲಭಿಸುತ್ತಿಲ್ಲ. ಟ್ಯಾಂಕರ್‌ಗಳಿಗೂ ನೀರು ಸಿಗುತ್ತಿಲ್ಲ. ಹೀಗಾಗಿ ಟ್ಯಾಂಕರ್ ನೀರು ಕೂಡ ಸರಿಯಾದ ಸಮಯಕ್ಕೆ ಸಿಗುತ್ತಿಲ್ಲ ಎಂಬ ಆರೋಪವಿದೆ.
ಮಂಗಳೂರಿನ ಬಹುತೇಕ ಶಾಲೆ- ಕಾಲೇಜುಗಳಿಗೆ ಸ್ವಂತ ನೀರಿನ ಮೂಲಗಳಿಲ್ಲ. ಪಾಲಿಕೆಯ ನೀರೇ ಆಧಾರ. ಹೀಗಾಗಿ ಸದ್ಯ ಹಲವು ಶಾಲಾ-ಕಾಲೇಜುಗಳು ಟ್ಯಾಂಕರ್ ನೀರನ್ನು ಅವಲಂಬಿಸುವ ಪರಿಸ್ಥಿತಿ ಇದೆ.
ಖಾಸಗಿ, ಅನುದಾನಿತ, ಸರಕಾರಿ ಸೇರಿ ಮಂಗಳೂರು ನಗರ- ಗ್ರಾಮಾಂತರ ವ್ಯಾಪ್ತಿಯಲ್ಲಿ ನೂರಾರು ವಿದ್ಯಾಸಂಸ್ಥೆಗಳಿವೆ. ಕುಡಿಯಲು, ಊಟದ ಬಳಿಕ ಕೈ ತೊಳೆಯುವುದು, ತಟ್ಟೆ ತೊಳೆಯುವುದು, ಬಿಸಿಯೂಟ ತಯಾರಿ ಸಹಿತ ವಿವಿಧ ಕಾರಣಕ್ಕಾಗಿ ಶಾಲೆಗೆ ನೀರಿನ ಅಗತ್ಯವಿದೆ. ಅಧಿಕ ಪ್ರಮಾಣದಲ್ಲಿ ಶಾಲಾ-ಕಾಲೇಜಿನ ಶೌಚಾಲಯಕ್ಕೆ ನೀರಿನ ಅಗತ್ಯವಿದೆ. ಆದರೆ ಪಾಲಿಕೆ ಹಾಗೂ ಹೊರಪ್ರದೇಶದ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ನಿರೀಕ್ಷೆಯಷ್ಟು ನೀರು ಲಭ್ಯವಿಲ್ಲದೆ ಶಾಲಾ ಶಿಕ್ಷಕರು-ಮಕ್ಕಳು ಕಂಗಾಲಾಗಿದ್ದಾರೆ. ಹೀಗಾಗಿ ಕೆಲವು ಶಾಲೆಗಳಿಗೆ ರಜೆ ನೀಡುವ ಪರಿಸ್ಥಿತಿಯೂ ನಿರ್ಮಾಣವಾಗಿದೆ.
Related Articles
ಈ ಮಧ್ಯೆ ಹಾಸ್ಟೆಲ್‌ಗಳಿಗೆ ನೀರಿನ ಕೊರತೆ ಎದುರಾಗಿದೆ. ಮಕ್ಕಳ ನಿತ್ಯದ ಚಟುವಟಿಕೆಗೆ ಬಹು ಪ್ರಮಾಣದಲ್ಲಿ ನೀರಿನ ಅಗತ್ಯ ಇರುವ ಕಾರಣದಿಂದ ಹಲವು ಹಾಸ್ಟೆಲ್‌ಗಳಿಗೆ ಟ್ಯಾಂಕರ್ ನೀರು ಗತಿಯಾದರೆ, ಉಳಿದ ಕೆಲವು ಹಾಸ್ಟೆಲ್‌ಗೆ ರಜೆ ನೀಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಾವಿರಾರು ವಿದ್ಯಾರ್ಥಿಗಳು ಇರುವ ಹಾಸ್ಟೆಲ್‌ಗಳ ನಿರ್ವಹಣೆ ಕಷ್ಟವಾಗಿದೆ.
ವೆನ್ಲಾಕ್ ಆಸ್ಪತ್ರೆಯಲ್ಲಿ ನೀರಿಗೆ ಹಾಹಾಕಾರ!
ನಗರದ ಸರಕಾರಿ ವೆನ್ಲಾಕ್ ಆಸ್ಪತ್ರೆಗೆ ನೀರಿನ ಕೊರತೆ ಬಹುವಾಗಿ ಕಾಡುತ್ತಿದೆ. ಆಸ್ಪತ್ರೆಯ ಒಪಿಡಿ, ಡಯಾಲಿಸಿಸ್ ಕೇಂದ್ರ ಸಹಿತ ಆಸ್ಪತ್ರೆಯ ವಿವಿಧ ವಿಭಾಗದ ನಿರ್ವಹಣೆಗಾಗಿ ನೀರಿನ ಹಾಹಾಕಾರ ತಲೆದೋರಿದೆ. ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಲೂ ಸಾಧ್ಯವಾಗುತ್ತಿಲ್ಲ ಎಂದು ವೈದ್ಯರು ದೂರುತ್ತಿದ್ದಾರೆ. 5 ಎಕ್ರೆ ಪ್ರದೇಶದಲ್ಲಿ ಆಸ್ಪತ್ರೆ ಇದ್ದರೂ ಸಮರ್ಪಕ ನೀರಿಗೆ ಬೇಕಾಗುವ ಎಲ್ಲ ವ್ಯವಸ್ಥೆಗಳನ್ನು ಇಲ್ಲಿ ಮಾಡದಿರುವ ಕಾರಣದಿಂದ ಈಗ ನೀರಿನ ಸಮಸ್ಯೆ ಎದುರಾಗಿದೆ. ಆಸ್ಪತ್ರೆ ಪರಿಸರದಲ್ಲಿ ಮಳೆಕೊಯ್ಲು ಮಾಡಲು ಅವಕಾಶವಿದ್ದರೂ ಅದು ಅನುಷ್ಠಾನವಾಗಿಲ್ಲ!
ಒಂದೆಡೆ ಸೆಕೆ-ಇನ್ನೊಂದೆಡೆ ನೀರಿಲ್ಲ!
“ಮಳೆ ಇಲ್ಲದೆ ನಗರದಲ್ಲಿ ಸೆಕೆ ವಿಪರೀತ ಆಗಿದೆ. ರಣಬಿಸಿಲಿನಿಂದ ಕಂಗಾಲಾಗುವ ಪರಿಸ್ಥಿತಿ ಉಂಟಾಗಿದೆ. ಬಿಸಿಲ ಝಳದಿಂದ ತರಗತಿಯಲ್ಲಿ ಕುಳಿತು ಪಾಠ ಮಾಡಲೂ ಆಗದ ಪರಿಸ್ಥಿತಿ ಇದೆ. ಮತ್ತೂಂದೆಡೆ ಬೇಕಾದಷ್ಟು ನೀರು ಕೂಡ ಸಿಗುತ್ತಿಲ್ಲ. ರೇಷನಿಂಗ್ ಸಮಸ್ಯೆ ಒಂದೆಡೆಯಾದರೆ, ಬಹುದಿನದವರೆಗೆ ಪೈಪ್‌ಲೈನ್ ಕೆಲಸದ ನೆಪದಿಂದ ನೀರು ಸಿಗುತ್ತಿಲ್ಲ. ಎಲ್ಲರೂ ಮಳೆಯ ನಿರೀಕ್ಷೆಯಲ್ಲಿದ್ದಾರೆ. ಮಳೆ ಮತ್ತಷ್ಟು ಮುಂದೆ ಹೋದರೆ ನಗರದ ಕಥೆ ಹೇಳತೀರದು’ ಎನ್ನುತ್ತಾರೆ ಕಾಲೇಜಿನ ಅಧ್ಯಾಪಕರೊಬ್ಬರು.