Advertisement

ಜಲ ನೀತಿ ಜಾರಿಗೆ ಗಂಭೀರ ಚಿಂತನ

12:47 PM Sep 24, 2018 | |

ಹುಬ್ಬಳ್ಳಿ: ಇಸ್ರೇಲ್‌ ಮಾದರಿ ಕೃಷಿ ಜಾರಿ ನಿಟ್ಟಿನಲ್ಲಿ ಸಣ್ಣ ಹಿಡುವಳಿದಾರರನ್ನು ಒಗ್ಗೂಡಿಸಿ ಸಹಕಾರ ಕೃಷಿಗೆ ಪ್ರೇರೇಪಿಸುವ ಯತ್ನದೊಂದಿಗೆ, ಯಥೇತ್ಛ ನೀರು ಬಳಕೆ ತಡೆಗೆ ರಾಜ್ಯದಲ್ಲಿ “ಜಲ ನೀತಿ’ ಜಾರಿಗೆ ಸರಕಾರ ಗಂಭೀರ
ಚಿಂತನೆ ನಡೆಸಿದೆ ಎಂದು ಕೃಷಿ ಸಚಿವ ಎನ್‌.ಎಚ್‌.ಶಿವಶಂಕರ ರೆಡ್ಡಿ ಹೇಳಿದರು.

Advertisement

ಇಲ್ಲಿಯ ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ ರವಿವಾರ ಕೃಷಿಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೆಲ ಕಡೆಗಳಲ್ಲಿ ಅಗತ್ಯಕ್ಕಿಂತಲೂ ಹೆಚ್ಚಿನ ನೀರು ಬಳಸಲಾಗುತ್ತಿದ್ದು, ಇದರಿಂದ ನೀರು ಪೋಲು ಜತೆಗೆ ಭೂಮಿ ಫ‌ಲವತ್ತತೆಯೂ ಹಾಳಾಗಲಿದ್ದು, ನೀರಿನ ಮಿತ ಬಳಕೆ ನಿಟ್ಟಿನಲ್ಲಿ ಈಗಾಗಲೇ ಹನಿ ಹಾಗೂ ತುಂತುರು ನೀರಾವರಿ ಪದ್ಧತಿಗೆ ಅಗತ್ಯ ಉತ್ತೇಜನ ನೀಡಲಾಗುತ್ತದೆ ಎಂದರು.

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಇಸ್ರೇಲ್‌ ಮಾದರಿ ಕೃಷಿಯನ್ನು ರಾಜ್ಯದಲ್ಲಿ ಅಳವಡಿಸುವ ನಿಟ್ಟಿನಲ್ಲಿ ಉತ್ಸುಕರಾಗಿದ್ದು, ಜತೆಗೆ ಸಾವಯವ ಹಾಗೂ ಶೂನ್ಯ ಬಂಡವಾಳ ಕೃಷಿ ಪದ್ಧತಿ ಜಾರಿಗೆ ಸರಕಾರ ಮುಂದಾಗಿದೆ. ಇದಕ್ಕೆ ಪೂರಕವಾಗಿ ಮುಖ್ಯಮಂತ್ರಿಯವರ ಸೂಚನೆಯಂತೆ ಅಧಿಕಾರಿಗಳೊಂದಿಗೆ ತಾವು ಇಸ್ರೇಲ್‌ ಗೆ ಭೇಟಿ ನೀಡಿ ಪರಿಶೀಲಿಸಿದ್ದು, ಅಲ್ಲಿನ ತಂತ್ರಜ್ಞಾನವನ್ನು ಇಲ್ಲಿ ಅಳವಡಿಸಲು ಕೆಲ ತಾಂತ್ರಿಕ ಸಮಸ್ಯೆಗಳು ಇವೆ ಎಂದರು.

ಇಸ್ರೇಲ್‌ನಲ್ಲಿ ರೈತರು ಒಗ್ಗೂಡಿ ಸಹಕಾರ ಪದ್ಧತಿಯಡಿ ಕೃಷಿ ಕೈಗೊಳ್ಳುತ್ತಿದ್ದು, ತಂತ್ರಜ್ಞಾನ ಅನುಷ್ಠಾನಕ್ಕೆ ಸುಲಭವಾಗಿದೆ. ಆದರೆ ನಮ್ಮಲ್ಲಿ ಸಣ್ಣ ಹಿಡುವಳಿದಾರರಿದ್ದು, ಕೆಲ ಬದಲಾವಣೆ ಅವಶ್ಯವಾಗಿದೆ. ತಜ್ಞರೊಂದಿಗೆ ಚರ್ಚಿಸಿ ಇಸ್ರೇಲ್‌ ಮಾದರಿ ಕೃಷಿ ಜಾರಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
 
ರಾಜ್ಯದಲ್ಲಿನ ನಾಲ್ಕು ಕೃಷಿ ವಿಶ್ವವಿದ್ಯಾಲಯಗಳು ಸ್ಥಳೀಯ ಕೃಷಿ ಸಮಸ್ಯೆಗಳ ಬಗ್ಗೆ ಸಂಶೋಧನೆ, ಅಧ್ಯಯನ ನಡೆಸಿ ಪರಿಹಾರ ರೂಪಿಸುವ ಮೂಲಕ ರೈತರ ನೋವಿಗೆ ಸ್ಪಂದಿಸಬೇಕಿದೆ. ಕೃವಿವಿ ಹಾಗೂ ಕೃಷಿ ಇಲಾಖೆ ಜಂಟಿಯಾಗಿ ಆಗಿರುವ ಸಂಶೋಧನೆ ಫ‌ಲ ರೈತರ ಹೊಲಗಳಿಗೆ ಮುಟ್ಟಿಸುವ ಕಾರ್ಯ ಮಾಡಬೇಕಿದೆ ಎಂದರು.

ದೇಶದಲ್ಲಿ 60ರ ದಶಕದಲ್ಲಿ ಸಮರ್ಪಕ ಆಹಾರಧಾನ್ಯಗಳು ಇಲ್ಲದೇ ಅಮೆರಿಕ ಇನ್ನಿತರ ದೇಶಗಳಿಂದ ಆಹಾರ ಧಾನ್ಯ ತರಿಸಿಕೊಳ್ಳಬೇಕಿತ್ತು. ಹೈಬ್ರಿಡ್‌ ಬೀಜ ಇನ್ನಿತರ ಸುಧಾರಣೆ ವ್ಯವಸ್ಥೆಯಿಂದಾಗಿ ಇಂದು 280 ಮಿಲಿಯನ್‌ ಟನ್‌ ಆಹಾರಧಾನ್ಯ ಸಂಗ್ರಹ ಇರಿಸುವ ಸಾಮರ್ಥ್ಯಕ್ಕೆ ತಲುಪಿದ್ದೇವೆ ಎಂದರು.

Advertisement

ಶಾಸಕ ಅಮೃತ ದೇಸಾಯಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯಲ್ಲಿ 4,995 ಕ್ವಿಂಟಲ್‌ ಹೆಸರು ಖರೀದಿಗೆ ನಿಗದಿಪಡಿಸಲಾಗಿದೆ. 4,700 ರೈತರ ನೋಂದಣಿ ಅವಕಾಶದಲ್ಲಿ ಇದುವರೆಗೆ 2350 ರೈತರು ನೋಂದಣಿ ಮಾಡಿಸಿದ್ದು, ಹೆಚ್ಚಿನ ಪ್ರಮಾಣದ ಹೆಸರು ಖರೀದಿಗೆ ಪ್ರಸ್ತಾವನೆ ಸಲ್ಲಿಸಬೇಕು. ಪಶು ಭಾಗ್ಯ ಯೋಜನೆಯಡಿ ನನ್ನ ಕ್ಷೇತ್ರಕ್ಕೆ ಕೇವಲ ಐವರಿಗೆ ಅವಕಾಶ ನೀಡಿದ್ದು, ಇನ್ನಷ್ಟು ಹೆಚ್ಚಿಸಬೇಕೆಂದು ಒತ್ತಾಯಿಸಿದರು. ಮಾಜಿ ಸಂಸದ ಪ್ರೊ| ಐ.ಜಿ.ಸನದಿ ಮಾತನಾಡಿ, ರೈತರು ಆತ್ಮಹತ್ಯೆಗೆ ಮುಂದಾಗಬಾರದು. ಯುವಕರು, ವಿದ್ಯಾವಂತರು ಕೃಷಿಯೆಡೆಗೆ ಬರಬೇಕಿದೆ ಎಂದರು.

ಕೃವಿವಿ ನೂತನ ಕುಲಪತಿ ಮಹದೇವ ಚಟ್ಟಿ ಪ್ರಾಸ್ತಾವಿಕ ಮಾತನಾಡಿ, ಕೃವಿವಿಯಿಂದ ಸ್ಥಾಪಿಸಿರುವ ಸಿರಿಧಾನ್ಯ ಸಂಸ್ಕರಣೆ ಘಟಕವನ್ನು ಕೃಷಿ ಸಚಿವರು ಉದ್ಘಾಟಿಸಿದ್ದು, ರೈತರು ತಮ್ಮ ಸಿರಿಧಾನ್ಯಗಳ ಸಂಸ್ಕರಣೆಯನ್ನು ಘಟಕದಲ್ಲಿ
ಉಚಿತವಾಗಿ ಮಾಡಿಕೊಳ್ಳಬಹುದಾಗಿದೆ ಎಂದರು. ಮಾಜಿ ಸಚಿವ ಬಿ.ಆರ್‌.ಯಾವಗಲ್ಲ, ಡಾ| ಎಸ್‌.ರಾಜೇಂದ್ರ,
ಡಾ|ಜೆ.ಎಚ್‌.ಕುಲಕರ್ಣಿ, ಡಾ| ಡಿ.ಪಿ.ಬಿರಾದಾರ, ಡಾ| ಜನಗೌಡರ, ಡಾ| ಚಂದ್ರೇಗೌಡ, ಇದ್ದರು.ಇದೇ ಸಂದರ್ಭದಲ್ಲಿ ಜಿಲ್ಲಾಮಟ್ಟದ ಶ್ರೇಷ್ಠ ಕೃಷಿ-ಕೃಷಿ ಮಹಿಳೆಯರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಸ‌ರಕಾರ ನಿಮ್ಮೊಂದಿಗಿದೆ ಕೃಷಿ ವೆಚ್ಚ ಹೆಚ್ಚಳ, ಸಮರ್ಪಕ ಬೆಲೆ ದೊರೆಯ ದಿರುವುದು ಸೇರಿದಂತೆ ವಿವಿಧ ಸಂಕಷ್ಟದಿಂದ
ರೈತರು ಆತ್ಮಹತ್ಯೆಗೆ ಮುಂದಾಗುತ್ತಿದ್ದಾರೆ. ರೈತರು ಇಂತಹ ಯತ್ನಕ್ಕೆ ಮುಂದಾಗುವುದು ಬೇಡ. ರಾಜ್ಯ ಸರಕಾರ ನಿಮ್ಮೊಂದಿಗಿದೆ ಎಂದು ಕೃಷಿ ಸಚಿವ ಎನ್‌.ಎಚ್‌.ಶಿವಶಂಕರ ರೆಡ್ಡಿ ಹೇಳಿದರು. ರೈತರ ಸಂಪೂರ್ಣ ಸಾಲ ಮನ್ನಾ ಯೋಜನೆ ದೇಶದಲ್ಲೇ ಮೊದಲಾಗಿದೆ. ರೈತರ ಅಭಿವೃದ್ಧಿ ದೃಷ್ಟಿಯಿಂದ ವೆಚ್ಚ ಕಡಿಮೆ ಜತೆಗೆ ಮಾರುಕಟ್ಟೆ ವ್ಯವಸ್ಥೆ ಸುಧಾರಣೆಗೆ ಸರಕಾರ ಹಲವಾರು ಕ್ರಮ ಕೈಗೊಳ್ಳಲಿದೆ ಎಂದರು.

ಆಹಾರಧಾನ್ಯ ಸಂಸ್ಕರಣೆ-ಮಾರುಕಟ್ಟೆಗೆ ಹೊಸ ನೀತಿ ಚಿಂತನೆ: ಸಚಿವ 
ಸಿರಿಧಾನ್ಯ ಸೇರಿದಂತೆ ವಿವಿಧ ಆಹಾರಧ್ಯಾನಗಳು ಹಾಗೂ ಹಣ್ಣುಗಳ ಸಂಸ್ಕರಣೆ ನಿಟ್ಟಿನಲ್ಲಿ ರಾಜ್ಯ ಸರಕಾರ ಹೊಸ ನೀತಿ ಜಾರಿಗೆ ಚಿಂತನೆ ನಡೆಸಿದೆ ಎಂದು ಕೃಷಿ ಸಚಿವ ಎನ್‌.ಎಚ್‌.ಶಿವಶಂಕರ ರೆಡ್ಡಿ ಹೇಳಿದರು. ಹೆಸರುಕಾಳುಗೆ ಕೇಂದ್ರ ಸರಕಾರ ಕ್ವಿಂಟಲ್‌ಗೆ 6,900ರೂ. ಬೆಂಬಲ ಬೆಲೆ ಘೋಷಿಸಿದ್ದರೂ, ಮಾರುಕಟ್ಟೆಯಲ್ಲಿ 5,000ರೂ.ಗೆ ಖರೀದಿಸಲಾಗುತ್ತಿದೆ. ರಾಜ್ಯದಲ್ಲಿ ಸುಮಾರು 23 ಸಾವಿರ ಟನ್‌ಗೆ ನಿಗದಿಪಡಿಸಿತ್ತು. ರಾಜ್ಯದಲ್ಲಿ ಸುಮಾರು 1ಲಕ್ಷಕ್ಕೂ
ಅಧಿಕ ರೈತರು ಹೆಸರು ನೋಂದಣಿ ಮಾಡಿಸಿದ್ದು, ಕೇಂದ್ರಕ್ಕೆ ಇದನ್ನು ಮನವರಿಕೆ ಮಾಡಿದ್ದು, ಪ್ರತಿ ರೈತರಿಂದ 10 ಕ್ವಿಂಟಲ್‌ವರೆಗೆ ಹೆಸರು ಖರೀದಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next