Advertisement
ರಾಯಚೂರು-ಕಲಬುರಗಿಗೆ ಸಂಪರ್ಕ ಕಲ್ಪಿಸುವ ಮುಖ್ಯ ಹೆದ್ದಾರಿಯಲ್ಲೇ ಚರಂಡಿ ನೀರು ಶೇಖರಣೆಯಾಗುತ್ತಿದ್ದು, ಸಾರ್ವಜನಿಕರಿಗೆ ಕಂಟಕವಾಗಿ ಪರಿಣಮಿಸಿದೆ. ದೇವದುರ್ಗ ಕ್ಷೇತ್ರಕ್ಕೆ ಒಳಪಡುವ ಈ ಊರಿನ ಸಮಸ್ಯೆ ಈಗ ಎಲ್ಲರ ಗಮನ ಸೆಳೆಯುತ್ತಿದೆ. ಮೇಲ್ನೋಟಕ್ಕೆ ಇದು ಸಂಪೂರ್ಣ ಅವೈಜ್ಞಾನಿಕ ಕಾಮಗಾರಿಯಿಂದಾದ ಸಮಸ್ಯೆ. ಗ್ರಾಪಂ ಕೇಂದ್ರವಾಗಿರುವ ಈ ಊರಿನಲ್ಲಿ ಸಮಸ್ಯೆಯೊಂದು ತಿಂಗಳಾನುಗಟ್ಟಲೇ ಜೀವಂತವಾಗಿರುವುದು ವಿಪರ್ಯಾಸ. ಇದು ರಾಜ್ಯ ಹೆದ್ದಾರಿಯಾಗಿದ್ದು, ನಿತ್ಯ ಸಾವಿರಾರು ವಾಹನಗಳು ಸಂಚರಿಸುವುದರಿಂದ ಸಮಸ್ಯೆ ತೀವ್ರತೆ ಹೆಚ್ಚಾಗುತ್ತಿದೆ.
Related Articles
Advertisement
ಸಮಸ್ಯೆ ದಿನೇ-ದಿನೇ ಜಟಿಲಗೊಳ್ಳುತ್ತ ಸಾಗುತ್ತಿದೆ. ಗ್ರಾಮಸ್ಥರು ಈ ಸಮಸ್ಯೆ ಬಗ್ಗೆ ಈಗಾಗಲೇ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಅಧಿಕಾರಿಗಳು ಕೂಡ ಸ್ಥಳ ಪರಿಶೀಲಿಸಿದ್ದು, ಮುಂದಿನ ಕ್ರಮಗಳ ಭರವಸೆ ನೀಡಿದ್ದಾರೆ. ಆದರೆ, ತಿಂಗಳುಗಳೇ ಕಳೆದರೂ ಯಾವೊಂದು ಬೆಳವಣಿಗೆ ಕಂಡು ಬರುತ್ತಿಲ್ಲ. ಈ ರಸ್ತೆ ಮುಖ್ಯ ವಾಣಿಜ್ಯಕ ತಾಣವಾಗಿದ್ದು, ಹೋಟೆಲ್‌ಗಳು, ವಾಣಿಜ್ಯ ಮಳಿಗೆಗಳು, ಬೃಹತ್ ದೇವಸ್ಥಾನ, ಮನೆಗಳ ಮಾಲೀಕರು ಇದೇ ಚರಂಡಿಗೆ ನೀರು ಹರಿಸುತ್ತಿದ್ದಾರೆ. ಎಲ್ಲ ನೀರು ರಸ್ತೆಯಲ್ಲೇ ನಿಂತ ಕಾರಣ ಫುಟಪಾತ್ ಕೂಡ ಮುಳುಗಿ ಓಡಾಡುವುದು ಕಷ್ಟವಾಗುತ್ತಿದೆ. ಕೊಚ್ಚೆ ನೀರಿನಲ್ಲಿ ಜನ ವ್ಯಾಪಾರ ಮಾಡಲು ಬಾರದ ಕಾರಣ ವರ್ತಕರಿಗೆ ನಷ್ಟವಾಗುತ್ತಿದೆ. ಹೆದ್ದಾರಿಯೆಲ್ಲ ಹಾಳಾಗಿ ಹೋಗಿದೆ. ಈ ಮಾರ್ಗದಿಂದ 3-4 ಕಿ.ಮೀ. ದೂರದಲ್ಲಿ ಹಳ್ಳ ಹರಿಯುತ್ತಿದ್ದು, ಅಲ್ಲಿಗೆ ಸಂಪರ್ಕ ಕಲ್ಪಿಸಲಿ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಆದರೆ, ಅದು ಎಷ್ಟರ ಮಟ್ಟಿಗೆ ಸಾಧ್ಯವಾಗಲಿದೆಯೋ ನೊಡಬೇಕಿದೆ.
ರಾಜಕೀಯ ಮೇಲಾಟದ ಗುಮಾನಿ
ಸಮಸ್ಯೆ ತೀವ್ರತೆ ಹೆಚ್ಚಿದಂತೆಲ್ಲ ಜನ ನಾನಾ ರೀತಿಯಲ್ಲಿ ವ್ಯಾಖ್ಯಾನ ಮಾಡುತ್ತಿದ್ದು, ಈಗ ರಾಜಕೀಯ ಮೇಲಾಟದ ಬಣ್ಣವನ್ನು ಬಳಿಯಲಾಗುತ್ತಿದೆ. ಕಳೆದ ಕೆಲ ತಿಂಗಳಿಂದ ಗಬ್ಬೂರು ರಾಜಕೀಯವಾಗಿ ಸದ್ದು ಮಾಡುತ್ತಿದೆ. ದೇವದುರ್ಗ ತಾಲೂಕಿನ ಅರಕೇರಾ ತಾಲೂಕು ಘೋಷಣೆಯಾಗಿರುವುದಕ್ಕೆ ಗಬ್ಬೂರು ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಗಬ್ಬೂರು ಎಲ್ಲ ರೀತಿಯಲ್ಲಿಯೂ ಅರ್ಹತೆ ಹೊಂದಿದ್ದು, ತಾಲೂಕು ಕೇಂದ್ರ ಮಾಡಬೇಕು ಎಂಬ ಹೋರಾಟ ಇಂದಿಗೂ ಜೀವಂತವಾಗಿದೆ. ಈ ಸಮಸ್ಯೆ ಗ್ರಾಮದಲ್ಲಿ ರಾಜಕೀಯ ಭಿನ್ನಾಭಿಪ್ರಾಯಗಳಿಗೂ ಕಾರಣವಾಗುತ್ತಿದೆ.
ಮುಖ್ಯರಸ್ತೆಯಲ್ಲಿ ಚರಂಡಿ ನಿಂತಿದ್ದು, ಅದಕ್ಕೆ ಸೂಕ್ತ ದಾರಿ ಮಾಡಲು ಈಗಾಗಲೇ ಕ್ರಮ ಕೈಗೊಳ್ಳಲಾಗುತ್ತಿದೆ. ತಹಶೀಲ್ದಾರ್, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಬಂದು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಚರಂಡಿ ನಿರ್ಮಾಣಕ್ಕೆ ಸ್ಥಳ ಸಮೀಕ್ಷೆ ಕೂಡ ಮಾಡಲಾಗಿದೆ. ಈಗ ಚರಂಡಿ ನೀರು ಹರಿಸಲು ಕೆಲವರ ವಿರೋಧ ವ್ಯಕ್ತವಾಗಿದ್ದರಿಂದ ಸಮಸ್ಯೆಯಾಗಿದೆ. – ಶಿವಕುಮಾರ್, ಪ್ರಭಾರ ಪಿಡಿಒ, ಗಬ್ಬೂರು
ತಿಂಗಳುಗಳೇ ಕಳೆದರೂ ಚರಂಡಿ ನೀರಿನ ಸಮಸ್ಯೆಗೆ ಪರಿಹಾರ ಸೂಚಿಸುತ್ತಿಲ್ಲ. ಸಂಬಂಧಪಟ್ಟ ಎಲ್ಲರ ಗಮನಕ್ಕೆ ತರಲಾಗಿದೆ. ಈ ನೀರಿನಲ್ಲಿ ಸ್ಥಳೀಯ ವ್ಯಾಪಾರಿಗಳಿಗೆ, ಪ್ರಯಾಣಿಕರಿಗೆ ತುಂಬಾ ತೊಂದರೆಯಾಗಿದೆ. ವಾತಾವರಣ ಸಂಪೂರ್ಣ ಹಾಳಾಗಿದೆ. ಒಬ್ಬರನ್ನೊಬ್ಬರು ದೂರುವುದಕ್ಕಿಂತ ಸಮಸ್ಯೆ ಹೇಗೆ ನಿವಾರಿಸಬೇಕು ಎಂಬ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು. -ಶಿವಪುತ್ರಪ್ಪಗೌಡ, ಸ್ಥಳೀಯರು